ವಿಜಯಪುರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಣ ಮಾಡಿರುವ ಘಟನೆ ನಡೆದಿದೆ. ಸಂದೀಪ್ ಎಂಬ ಕಂದಮ್ಮ ಹಾಡಹಗಲೇ ಅಪಹರಣವಾಗಿದ್ದು, ಮಗನಿಗಾಗಿ ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ತನ್ನ ಇಬ್ಬರು ಮಕ್ಕಳು, ತಾಯಿ ಪದ್ಮಾ ಪವಾರ್ ಅವರೊಂದಿಗೆ ವಿಜಯಪುರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ, ಪದ್ಮಾ ಪವಾರ್ ಆರೋಗ್ಯ ಕೆಟ್ಟಿದೆ. ಹೀಗಾಗಿ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ತಾಯಿಯೊಂದಿಗೆ ರಾಮೇಶ್ವರಿ ತನ್ನ ಇಬ್ಬರು ಮಕ್ಕಳು ಸಮೇತ ಆಸ್ಪತ್ರೆಯಲ್ಲಿದ್ದರು. ಶನಿವಾರ ಬೆಳಗ್ಗೆ 10-30ರಿಂದ 11 ಗಂಟೆಯೊಳಗೆ ರಾಮೇಶ್ವರಿ ತಾಯಿ ಪದ್ಮಾಳ ಕಫದ ಪರೀಕ್ಷೆಗಾಗಿ ತಾಯಿ ಬಳಿ ಮಗು ಸಂದೀಪ್ ನನ್ನು ಬಿಟ್ಟು ಹೋಗಿದ್ದರು. ಈ ವೇಳೆ ಸಂದೀಪ್ ಎದ್ದು ಅಳಲಿಕ್ಕೆ ಶುರು ಮಾಡಿದಾಗ 10 ವರ್ಷದ ಬಾಲಕ ಮಗುವನ್ನು ಎತ್ತಿಕೊಂಡು ಆಟವಾಡಿಸಿದ್ದಾನೆ. ಇದನ್ನೇ ಗಮನಿಸಿದ ಅಪರಿಚಿತ ವ್ಯಕ್ತಿ ವಾರ್ಡ್ ನೊಳಗೆ ಬಂದು ಮಗು ಎತ್ತಾಡಿಸಿದ್ದಾನೆ. ಆ ಬಳಿಕ ಹೊರಗೆ ತೆಗೆದುಕೊಂಡು ಬಂದ ಅಪರಿಚಿತ ವ್ಯಕ್ತಿ ಮಗುವನ್ನು ಕದ್ದುಕೊಂಡು ಹೋಗಿದ್ದಾನೆ. ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿರುವುದು ತಿಳಿದು ಬಂದಿದೆ.
ಅಪರಿಚಿತ ವ್ಯಕ್ತಿ ಇದೇ ವಾರ್ಡ್ ಹೊರಗಡೆ ರಾತ್ರಿ ಮಲಗಿಕೊಂಡಿದ್ದಂತೆ. ಯಾರೋ ರೋಗಿ ಸಂಬಂಧಿ ಇರಬೇಕೆಂದು ಅಂದುಕೊಂಡಿದ್ದಾರೆ. ರಾಮೇಶ್ವರಿ ಮರಳಿ ಬಂದು ನೋಡಿದಾಗ ಕಂದಮ್ಮ ಕಾಣದಿದ್ದಾಗ ಹುಡುಕಾಟ ನಡೆಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಯಲ್ಲಿರುವ ಪೊಲೀಸ್ ಠಾಣೆ ಹಾಗೂ ವೈದ್ಯರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಪೊಲೀಸರು ಜಿಲ್ಲಾಸ್ಪತ್ರೆ ಆವರಣ ಮತ್ತು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಆಗ ವ್ಯಕ್ತಿಯೊಬ್ಬ ಮಗು ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪತ್ತೆಯಾಗಿದೆ. ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ವ್ಯಕ್ತಿ ಒಂದು ಕೈಯಲ್ಲಿ ಚೀಲ, ಮತ್ತೊಂದು ಕೈಯಲ್ಲಿ ಮಗು ಹೊತ್ತುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ದೃಶ್ಯಾವಳಿ ಆಧರಿಸಿ ಮಗು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.