ವಿಜಯಪುರ: ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಗಾಗಿ ದ್ವಿ ಸದಸ್ಯತ್ವದ ವಿಜಯಪುರ ಕ್ಷೇತ್ರಕ್ಕೆ ಸ್ಪರ್ಧಾಕಾಂಕ್ಷಿಗಳಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದೆ. ಉಳಿದಂತೆ 12 ಅಭ್ಯರ್ಥಿಗಳು ಸಲ್ಲಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ.
ಸದರಿ ಚುನಾವಣೆಯ ವಿಜಯಪುರ ಕ್ಷೇತ್ರ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದ ನ.23 ರಂದು 19 ನಾಮಪತ್ರ ಸಲ್ಲಿಕೆಯಾಗಿದ್ದವು.ಒಟ್ಟಾರೆ ಕ್ಷೇತ್ರದಿಂದ ಸ್ಪರ್ಧೆ ಬಯಸಿ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.
ಸಲ್ಲಿಸಿದ ನಾಮಪತ್ರಗಳನ್ನು ಬುಧವಾರ ಪರಿಶೀಲನೆ ನಡೆಸಿದ ಚುನಾವಣೆ ಅಧಿಕಾರಿ ಸುನಿಲ್ ಕುಮಾರ್ ಅವರು, ತುಳಸಪ್ಪ ಕರಿಯಪ್ಪ ದಾಸರ ಎಂಬ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿದ್ದಾರೆ.
ಉಳಿದಂತೆ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ, ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಗೌಡ ಪಾಟೀಲ, ಪಕ್ಷೇತರರಾದ ಕಾಶಿಮ ಪಟೇಲ್, ಕಾಂತಪ್ಪ ಇಂಚಗೇರಿ, ಗುರುಲಿಂಗಪ್ಪ ಅಂಗಡಿ, ಗೊಲ್ಲಾಳಪ್ಪಗೌಡ ಪಾಟೀಲ, ದುರುಗಪ್ಪ ಸಿದ್ದಾಪುರ, ಬಸವರಾಜ ಯರನಾಳ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಲೋಣಿ, ಮಾರುತಿ ಜಮೀನ್ದಾರ, ಶ್ರೀಮಂತ ಬಾರಿಕಾಯಿ ಸೇರಿದಂತೆ 12 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಲ್ಲಿಸಿದ ನಾಮಪತ್ರ ಹಿಂಪಡೆಯಲು ನ.26 ಕೊನೆ ದಿನ. ಆ ಬಳಿಕವೇ ಚುನಾವಣಾ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.