Advertisement

ಪುನರ್ವಸತಿಗೆ 20 ಸಾವಿರ ಕೋಟಿ

03:23 PM Oct 06, 2019 | Team Udayavani |

ವಿಜಯಪುರ: ಕೃಷ್ಣಾ ನದಿ ರಾಜ್ಯದ ಪಾಲಿನ ನೀರು ಬಳಕೆಗಾಗಿ ಬರುವ 3 ವರ್ಷಗಳಲ್ಲಿ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ 524.256 ಮೀಟರ್‌ಗೆ ಗೇಟ್‌ ಎತ್ತರಿಸಬೇಕಿದೆ. ಇದರಿಂದ ಜಲಾಶಯದ ಹಿನ್ನೀರಿನಲ್ಲಿ ಮುಳಗಡೆಯಾಗುವ 20 ಗ್ರಾಮಗಳ ಸ್ಥಳಾಂತರ, ಪುನರ್ವಸತಿ, ಪುನರ್‌ ನಿರ್ಮಾಣಕ್ಕಾಗಿ ಬರುವ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂ. ಹಣ ಮೀಸಲು ಇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಕಟಿಸಿದರು.

Advertisement

ಶನಿವಾರ ಲಾಲ್‌ ಬಹಾದ್ದೂರ್‌ ಜಲಾಶಯ ಕೃಷ್ಣಾ ಜಲನಿಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸಲು ಆಲಮಟ್ಟಿಗೆ ಆಗಮಿಸಿದ್ದ ಅವರು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಘೋಷಣೆ ಮಾಡಿದರು.

ಶಾಸ್ತ್ರಿ ಜಲಾಶಯಕ್ಕೆ 524.256 ಮೀ. ಗೇಟ್‌ ಎತ್ತರದಿಂದ ಹಿನ್ನೀರಿನಲ್ಲಿ 20 ಗ್ರಾಮಗಳು ಹಾಗೂ 1.30 ಲಕ್ಷ ಎಕರೆ ಜಮೀನು ಮುಳುಗಡೆ ಆಗಲಿದೆ. ಮುಳುಗಡೆ ಗ್ರಾಮಗಳ ಸ್ಥಳಾಂತರ ಹಾಗೂ ಪುನರ್ವಸತಿಗಾಗಿ ಆರ್ಥಿಕ ಸ್ಥಿತಿಗತಿಗೆ
ಅನ್ವಯವಾಗಿ ಬರುವ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದರು.

ಸದರಿ ಯೋಜನೆಯಿಂದ ಬಾಧಿತವಾಗುವ ಗ್ರಾಮಗಳ ಸ್ಥಳಾಂತರ, ಪುನರ್ವಸತಿ ಸೌಲಭ್ಯ ಹಾಗೂ ಜಲಾಶಯದ ನೀರಿನಿಂದ ಮುಳುಗಡೆಯಾಗುವ ಬೆಳೆ ಹಾನಿಗೆ ಪರಿಹಾರ ಕಲ್ಪಿಸಲು ಅಗತ್ಯ ಅನುದಾನ ಮೀಸಲಿಡಬೇಕು. ಇದಕ್ಕೆ ತಗುಲುವ ಸಂಪೂರ್ಣ ಖರ್ಚು-ವೆಚ್ಚದ ಸಮಗ್ರ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಲ ಒತ್ತಡ ಆಧಾರದಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸುವಲ್ಲಿ ಅಧಿಕಾರಿಗಳು ಸಬೂಬು ಹೇಳದೇ, ನೀರು ಬಿಡಲು ಅವಕಾಶವಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಹಣಕಾಸಿನ ಅವಶ್ಯಕತೆ ಇದ್ದಲ್ಲಿ ನೀಡುವುದಾಗಿ ತಿಳಿಸಿದ ಅವರು, ಜನಪ್ರತಿನಿಧಿಗಳು ಕೂಡ ಯೋಜನೆಗಳ ಸಮರ್ಪಕ ಜಾರಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಕೆಲಸ ಪಡೆಯುವ ಕಾರ್ಯ ಮಾಡುವಂತೆ ಅವರು ಸಲಹೆ ನೀಡಿದರು.

Advertisement

ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಅನುದಾನ ದುರ್ಬಳಕೆ ಆಗಿರುವ ಬಗ್ಗೆ ಶಾಸಕರು ದೂರು ನೀಡಿದ್ದಾರೆ. ಹೀಗಾಗಿ ತಾಂತ್ರಿಕ ತಜ್ಞರನ್ನು ನೇಮಿಸಿ ಸೂಕ್ತ ಪರಿಶೀಲನೆ ನಡೆಸಲಾಗುತ್ತದೆ. ಈ ಕುರಿತು ಯಾವುದೇ ರೀತಿಯ ದೂರುಗಳಿದ್ದಲ್ಲಿ ಸಲ್ಲಿಸುವಂತೆ ಸಲಹೆ ನೀಡಿದರು.

ಕೃಷ್ಣಾ ನದಿ ನೆರೆ ಹಾವಳಿಯಿಂದ ಮುದ್ದೇಬಿಹಾಳ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರಿನಿಂದ ಬಾಧಿತವಾಗಿರುವ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಬಾಧಿತ ಗ್ರಾಮಗಳ ಜನರು ಸ್ಥಳಾಂತರಕ್ಕೆ ಒಪ್ಪಿದಲ್ಲಿ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಅತಿವೃಷ್ಟಿಯಿಂದ ಹಾನಿ ಆದವರಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ 1200 ಕೋಟಿ ರೂ. ನೀಡಿದ್ದು, ಬರುವ ದಿನಗಳಲ್ಲಿ ಕೇಂದ್ರದಿಂದ ಇನ್ನೂ ಹೆಚ್ಚಿನ ಪರಿಹಾರ ಬಿಡುಗಡೆಯ ನಿರೀಕ್ಷೆ ಇದೆ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಸೋಮನಗೌಡ ಪಾಟೀಲ ಸಾಸನೂರ, ದೇವಾನಂದ ಚವ್ಹಾಣ, ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶಸಿಂಗ್‌, ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್‌ ಬಿಸ್ವಾಸ್‌, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ವಿಕಾಸ ಸುರಳಕರ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next