Advertisement

ಅನ್ಯ ರಾಜ್ಯದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್‌

12:23 PM May 09, 2020 | Naveen |

ವಿಜಯಪುರ: ದೇಶದ ಅತೀ ಹೆಚ್ಚು ಕೋವಿಡ್ ಪೀಡಿತ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ರಾಜಸ್ಥಾನ್‌ ಹಾಗೂ ದೆಹಲಿಗಳಿಂದ ಆಗಮಿಸುವ ಪ್ರತಿಯೊಬ್ಬರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ತಿಳಿಸಿದ್ದಾರೆ.

Advertisement

ಶುಕ್ರವಾರ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಈ ವಿಷಯ ತಿಳಿಸಿದ ಅವರು, ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಜನರನ್ನು ಕೂಡಾ ನಗರ ಪ್ರದೇಶಗಳಲ್ಲಿ ಹೋಮ್‌ ಕ್ವಾರಂಟೈನ್‌ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು. ಆಯಾ ಗ್ರಾಮಗಳಿಗೆ, ನಗರ, ಪಟ್ಟಣಗಳಿಗೆ ಬೇರೆ ರಾಜ್ಯಗಳಿಂದ ಆಗಮಿಸುವ ಜನರ ಬಗ್ಗೆ ತಕ್ಷಣ ಆಯಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಸುಳ್ಳು ಮಾಹಿತಿ ನೀಡಿ ಮನೆಯಲ್ಲಿ ತಂಗಿದವರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸಾಂಸ್ಥಿಕ ಕ್ವಾರಂಟೈನ್‌ಗಾಗಿ ಪ್ರಥಮ ಆದ್ಯತೆಯಾಗಿ ವಸತಿ ಶಾಲೆಗಳು, ವಸತಿ ನಿಲಯಗಳು, ಪ್ರೌಢಶಾಲೆ, ಪ್ರಾಥಮಿಕ ಶಾಲೆಗೆ ಕಳಿಸಬೇಕು. ವಲಸಿಗರು-ನುಸುಳುಕೋರರ ಬಗ್ಗೆ ತೀವ್ರ ನಿಗಾ ಇಡಲಾಗಿದ್ದು, ಅಂತಹವರು ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಬೇರೆ ರಾಜ್ಯಗಳಿಂದ ಬಂದ ಸಾರ್ವಜನಿಕರು ಕೂಡಾ ಜಿಲ್ಲೆಗೆ ಆಗಮಿಸಿರುವ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಕೋರಿದರು.

ಜಿಲ್ಲೆಯ ಗಡಿಭಾಗವಾದ ಧೂಳಖೇಡದಲ್ಲಿ ಚೆಕ್‌ ಪೋಸ್ಟ್‌ನಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವವರ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಉತ್ತರ ಪ್ರದೇಶ, ರಾಜಸ್ಥಾನ, ಚಂಡೀಘಡ, ಗುಜರಾತ್‌, ಗೋವಾಗಳಿಂದ 57 ಜನರು ಆಗಮಿಸಿದ್ದಾರೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ 9,137 ಜನರು ಆಗಮಿಸಿದ್ದು, ಬೇರೆ ರಾಜ್ಯಗಳಿಗೆ ಹೋಗಬಯಸುವ ಪ್ರಯಾಣಿಕರ ಕುರಿತಂತೆ ಆಯಾ ಜಿಲ್ಲೆಗಳ ಜಿಲ್ಲಾ ಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿ ಸಿ ಕಳುಹಿಸಲಾಗುತ್ತಿದೆ. ಈಗಾಗಲೇ 17 ಬಸ್‌ ಗಳ ಮೂಲಕ ಹೊರ ರಾಜ್ಯಗಳಿಗೆ 540 ಜನರನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು.

ಅತೀ ಹೆಚ್ಚು ಕೋವಿಡ್‌ 19 ಸೋಂಕು ಹರಡಿರುವ ರಾಜ್ಯಗಳಿಂದ ಮತ್ತು ಇತರೆ ವಿವಿಧ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇರಿಸಬೇಕು. ಆಯಾ ಗ್ರಾಮ, ನಗರಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಬೇಕು. ಡಂಗುರ ಸಾರಬೇಕು. ಐದು ರಾಜ್ಯಗಳಿಂದ ಬಂದವರ ಕೈಗೆ ಸ್ಟ್ಯಾಂಪಿಂಗ್‌ ಮಾಡಿ, ಕ್ವಾರಂಟೈನ್‌ ಮಾಡಬೇಕು. ಮನೆಗೆ ನೋಟಿಸ್‌ ಅಂಟಿಸಿ ನೆರೆಹೊರೆ ಜನರ ಕಣ್ಗಾವಲಿಗೆ ತಿಳಿಸಬೇಕು ಎಂದರು.

Advertisement

ಕ್ವಾರಂಟೈನ್‌ ಕೇಂದ್ರಗಳಲ್ಲಿ ಹಾಸ್ಟೇಲ್‌ ವಾರ್ಡನ್‌,ಶಾಲಾ ಮುಖ್ಯೋಪಾಧ್ಯಾಯರಿಗೆ ಊಟ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಹೊಣೆ ನೀಡಬೇಕು. ತಹಶೀಲ್ದಾರರು, ತಾಪಂ ಇಒಗಳು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥ ಅಧಿಕಾರಿಗಳು ನಿತ್ಯವೂ ಕೈಗೊಂಡ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಈ ವರೆಗೆ ಕೋವಿಡ್ ಸೋಂಕಿತ 48 ಪ್ರಕರಣಗಳಲ್ಲಿ 25 ರೋಗಿಗಳು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮೂವರು ಮೃತಪಟ್ಟಿದ್ದು, 20 ಜನರು ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿದ 2,414 ಜನರಲ್ಲಿ 2,270 ಜನರ ವರದಿ ನೆಗೆಟಿವ್‌ ಬಂದಿದೆ. 96 ಜನರ ಪರೀಕ್ಷಾ ವರದಿ ಬರಬೇಕಾಗಿದೆ. ಕೋವಿಡ್‌-19 ಪಾಸಿಟಿವ್‌ 20 ರೋಗಿಗಳು ಆಸ್ಪತ್ರೆಯಲ್ಲಿದ್ದು, ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ.
ವೈ.ಎಸ್‌.ಪಾಟೀಲ.
ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಎಲ್ಲ ತಹಶೀಲ್ದಾರರು ತಮ್ಮ ತಾಲೂಕಿಗೆ ಬೇರೆ ರಾಜ್ಯಗಳಿಂದ ಬಂದವರ ದಾಖಲೆಗಳ ಆಧಾರದ ಮೇಲೆ ಹೋಂ ಕ್ವಾರಂಟೈನ್‌ಗೆ, ಸಾಂಸ್ಥಿಕ ಕ್ವಾರಂಟೈನ್‌ಗೆ ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಬಂದವರ ಬಗ್ಗೆ ಆಯಾ ಗ್ರಾಮ ಕಾರ್ಯಪಡೆ ಸಮಿತಿ ತೀವ್ರ ನಿಗಾ ಇಡಬೇಕು. ಅಗತ್ಯ ಬಿದ್ದಲ್ಲಿ ಪೊಲೀಸರ ನೆರವು ಪಡೆಯಬೇಕು.
ಗೋವಿಂದರಡ್ಡಿ,
ಸಿಇಒ, ಜಿಪಂ

Advertisement

Udayavani is now on Telegram. Click here to join our channel and stay updated with the latest news.

Next