Advertisement

ಆರೋಗ್ಯ ರಕ್ಷಕರಿಗೆ ಕ್ವಾರಂಟೈನ್‌ ಅನಗತ್ಯ

04:36 PM May 18, 2020 | Naveen |

ವಿಜಯಪುರ: ಕೋವಿಡ್‌-19 ರೋಗಿಗಳ ನಿರ್ವಹಣೆಯಲ್ಲಿ ತೊಡಗಿರುವ ಆರೋಗ್ಯ ರಕ್ಷಣಾ ಕಾರ್ಯಕರ್ತರು ಅಗತ್ಯ ಇರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ಆರೋಗ್ಯ ರಕ್ಷಕರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

Advertisement

ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಜರುಗಿದ ಕೋವಿಡ್‌-19 ನಿಯಂತ್ರಣಕ್ಕಾಗಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ. ಪಿಪಿಇ ಕಿಟ್‌ ಬಳಕೆ ಸೇರಿದಂತೆ ಅಗತ್ಯ ಇರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕರ್ತವ್ಯ ನಿರ್ವಹಿಸುವ ಕಾರಣ ಅಪಾಯ ಕಡಿಮೆ ಇರುತ್ತದೆ. ವೈದ್ಯರು, ದಾದಿಯರು, ಪ್ರಯೋಗಾಲಯದ ತಂತ್ರಜ್ಞರು ಸೇರಿದಂತೆ ಕೋವಿಡ್‌-19 ರೋಗಿಗಳ ನಿರ್ವಹಣೆಯಲ್ಲಿ ಕರ್ತವ್ಯದಲ್ಲಿ ಇರುವವರು 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ನಿಗಾದಲ್ಲಿ ಇರುವ ಅಗತ್ಯವಿಲ್ಲ ಎಂದರು.

ಕೋವಿಡ್‌ ಸೋಂಕಿತ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವವರಿಗೆ ಸೋಂಕಿನ ಲಕ್ಷಣ ಇಲ್ಲದಿದ್ದರೂ ಕ್ವಾರಂಟೈನ್‌ ನಿಗಾದಲ್ಲಿ ಇರಿಸುವುದು ಅಗತ್ಯವಿಲ್ಲ. ಪ್ರತಿದಿನ ತಮ್ಮ ದೇಹದ ಉಷ್ಣತೆ ಪರೀಕ್ಷೆ ಜತೆಗೆ ರೋಗ ಲಕ್ಷಣ ಇಲ್ಲದಿರುವ ಕುರಿತು ಖಚಿತ ಮಾಡಿಕೊಂಡರೆ ಸಾಕು. ಆಸ್ಪತ್ರೆಯಲ್ಲಿ ಎಂದಿನಂತೆ ತಮ್ಮ ಕರ್ತವ್ಯ ಮಾಡಬಹುದು. ಅದರಂತೆ ಕೋವಿಡ್‌ ಅಲ್ಲದ ಆಸ್ಪತ್ರೆಗಳಲ್ಲೂ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸುವಂತೆಯೂ ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಸಂಪೂರ್ಣ ಹತೋಟಿಗೆ ಬರುವಲ್ಲಿ ಹಾಗೂ ಸೋಂಕಿತರಲ್ಲಿ ಬಹುತೇಕರು ಗುಣಮುಖರಾಗಿ ಮನೆಗೆ ಮರಳುವಲ್ಲಿ ಕೋವಿಡ್‌ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪಾತ್ರ ಪ್ರಧಾನವಾಗಿದೆ. ಇದಕ್ಕಾಗಿ ನೀವೆಲ್ಲ ಅಭಿನಂದನಾರ್ಹರಾಗಿದ್ದು, ಭವಿಷ್ಯದಲ್ಲೂ ಸೇವೆಯಲ್ಲಿ ಸಣ್ಣ ಲೋಪವೂ ಆಗದಂತೆ ಹೊಣೆಗಾರಿಕೆಯಿಂದ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ಎಂದು ನಿರ್ದೇಶಿಸಿದರು. ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ ವಲಸೆ ಹೋಗಿದ್ದ 10,097 ವಲಸಿಗರು ಜಿಲ್ಲೆಗೆ ಮರಳಿದ್ದು, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ ನಿಗಾದಲ್ಲಿ ಇರಿಸಲಾಗಿದೆ. ವಿದೇಶಗಳಿಂದ ಬಂದ 2292 ಜನರ ಮೇಲೆ ತೀವ್ರ ನಿಗಾ ಇರಿಸಿದ್ದು, 1269 ಜನರು 28 ದಿನಗಳ ಐಸೋಲೇಶನ್‌ ಅವಧಿ ಮುಗಿಸಿದ್ದಾರೆ. 983 ಜನರು ರಿಪೋರ್ಟಿಂಗ್‌ ಅವಧಿ ಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಜಿಪಂ ಸಿಇಒ ಗೋವಿಂದರೆಡ್ಡಿ, ಎಡಿಸಿ ಡಾ| ಔದ್ರಾಮ್‌, ಜಿಲ್ಲಾಸ್ಪತ್ರೆ ಸರ್ಜನ್‌ ಡಾ| ಶರಣಪ್ಪ ಕಟ್ಟಿ, ಡಾ| ಲಕ್ಕಣ್ಣನವರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಎಂ.ಬಿ.ಬಿರಾದಾರ, ಡಾ| ಮುಕುಂದ ಗಲಗಲಿ, ಡಾ| ಧಾರವಾಡಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next