ವಿಜಯಪುರ: ನಗರದಲ್ಲಿ ಮಹಿಳೆಯರ ರಕ್ಷಣೆಗೆ ಟೊಂಕ ಕಟ್ಟಿದ್ದ ಮಹಿಳಾ ಪೊಲೀಸರ ಕಿತ್ತೂರು ಚನ್ನಮ್ಮ ಪಡೆ, ಇದೀಗ ಜೀಪ್ ಬದಲಾಗಿ ಓಬವ್ವ ಹೆಸರಿನಲ್ಲಿ ಬೈಕ್ ಏರಿ ನಗರದಲ್ಲಿ ಗಸ್ತು ತಿರುಗಲು ಮುಂದಾಗಿದೆ. ಬೀದಿ ಕಾಮಣ್ಣರಿಂದ ರಕ್ಷಣೆ ಕೊಡಿಸುವ ಜೊತೆಗೆ ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಜಿಲ್ಲಾ ಪೊಲೀಸ್ ವ್ಯವಸ್ಥೆ ಮಹಿಳೆಯರಲ್ಲಿ ಸ್ವಯಂ ರಕ್ಷಣೆಗೆ ಮಹಿಳಾ ಪೇದೆಗಳ ಮೂಲಕ ಯುವತಿಯರಲ್ಲಿ ಜಾಗೃತಿಗೆ ಮುಂದಾಗಿದೆ.
Advertisement
ಐತಿಹಾಸಿಕ ವಿಜಯಪುರ ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ಕಳೆದ ವರ್ಷ ಜಿಲ್ಲಾ ಪೊಲೀಸ್ ವ್ಯವಸ್ಥೆಯಲ್ಲಿ ಕಿತ್ತೂರು ಚನ್ನಮ್ಮ ಹೆಸರಿನಲ್ಲಿ ಮಹಿಳಾ ಪೊಲೀಸರ ಪ್ರತ್ಯೇಕ ಪಡೆಯನ್ನು ನಿಯೋಜಿಸಿತ್ತು. ಚನ್ನಮ್ಮ ಪಡೆಗೆ ಪ್ರತ್ಯೇಕ ಜೀಪ್ ವ್ಯವಸ್ಥೆ ಕೂಡ ಇದ್ದು, ನಗರದಲ್ಲಿ ಈ ಜೀಪ್ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಗಸ್ತು ತಿರುಗುತ್ತಿತ್ತು. ಆದರೆ ಕಳೆದ ಏಪ್ರಿಲ್ ತಿಂಗಳಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಚನ್ನಮ್ಮ ಪಡೆಯನ್ನು ರದ್ದು ಮಾಡಲಾಗಿತ್ತು. ಇದೀಗ ದೇಶದಲ್ಲಿ ಮತ್ತೆ ಮಹಿಳೆಯರ ಮೇಲೆ ದೌರ್ಜನ್ಯಗಳು, ಅದರಲ್ಲೂ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ, ಹತ್ಯೆ, ಹಲ್ಲೆಗಳಂಥ ಕೃತ್ಯಗಳು ಹೆಚ್ಚುತ್ತಲೇ ಜಿಲ್ಲೆಯ ಪೊಲೀಸರು ಕೂಡ ಮತ್ತೆ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದ್ದಾರೆ.
Related Articles
Advertisement
ಪ್ರತಿದಿನ ಬೆಳಗ್ಗೆ 8ರಿಂದ 9, 10ರಿಂದ 11:30 ಹಾಗೂ ಸಂಜೆ 4ರಿಂದ 6ರವರೆಗೆ ಓಬವ್ವ ಪೇದೆಗಳಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದು ಓಬವ್ವ ಪಡೆ ಕಾರ್ಯಾಚರಣೆಗೆ ಮುಂದಾದ ನಂತರ ನಗರದಲ್ಲಿರುವ ಮಹಿಳಾ ವಿಶ್ವವಿದ್ಯಾಲಯ, ಪ್ರೌಢ ಶಾಲೆಗಳು, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ತಮ್ಮ ಮೇಲೆ ಏಕಾಏಕಿ ಎದುರಾಗುವ ದೌರ್ಜನ್ಯದ ಸಂದರ್ಭದಲ್ಲಿ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದಲ್ಲಿ ಹೊಸ ವರ್ಷದ ಮೊದಲ ವಾರ ಇಲ್ಲವೇ ಜನೇವರಿ 26ರಂದು ಓಬವ್ವ ಪಡೆ ಕಾರ್ಯಾಚರಣೆಗೆ ಸಿದ್ಧವಾಗಲಿದೆ.
ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಓಬವ್ವ ಪಡೆಯನ್ನು ರಚಿಸಲಾಗುತ್ತಿದ್ದು, ಜನೇವರಿ ಮೊದಲ ವಾರದಲ್ಲಿ ಈ ಪಡೆ ನಗರದಲ್ಲಿ ಕಾರ್ಯಾಚರಣೆ ನಡೆಸಲಿದೆ. ಓಬವ್ವ ಪಡೆಗೆ ಆಯ್ಕೆ ಮಾಡಲಾಗಿರುವ ಮಹಿಳಾ ಪೇದೆಗಳಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡಲಾಗುತ್ತಿದೆ. ಈ ತಂಡದ ತಲಾ ಇಬ್ಬರು ಓಬವ್ವ ಪೇದೆಗಳಿಗೆ ನಗರದ ಸಾರ್ವಜನಿಕರ ಸ್ಥಳಗಳಲ್ಲಿ ನಿರಂತರ ಗಸ್ತು ತಿರುಗಲು ಅಪಾಚಿ ಬೈಕ್ ನೀಡಲಾಗುತ್ತಿದೆ.ಪ್ರಕಾಶ ನಿಕ್ಕಂ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ