ವಿಜಯಪುರ: ಜಗತ್ತಿನಲ್ಲಿ ಶುಶ್ರೂಷಕರ ಸೇವೆ ಅತ್ಯಮೂಲ್ಯವಾಗಿದ್ದು, ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಶುಶ್ರೂಷಕರ ಪಾತ್ರ ಮಹತ್ವದ ಜಗತ್ತಿನ ಪ್ರತಿ ನಾಗರಿಕರ ಅರಿವಿಗೂ ಬಂದಿದೆ. ಶುಶ್ರೂಷಕರ ಬದ್ಧತೆಯ ತೃಪ್ತಿದಾಯಕ ಸೇವೆಯನ್ನು ವಿಶ್ವವೇ ಕೊಂಡಾಡುತ್ತಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ| ಎಂ.ಎಸ್.ಬಿರಾದಾರ ಹೇಳಿದರು.
ಬಿಎಲ್‌ಡಿಇ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಶೂಶ್ರುಷಕರ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಆಸ್ತಿ ಶೂಶ್ರುಷಕರು ವೈದ್ಯರಷ್ಟೇ ಸಮಾನರು. ರೋಗಿಗಳ ಆರೈಕೆಯಲ್ಲಿ ತಮ್ಮ ಜೀವವನ್ನೇ ಲೆಕ್ಕಿಸದೇ ಕಾರ್ಯಪ್ರವೃತ್ತರಾಗಿ, ರೋಗಿಗಳು ಗುಣಮುಖವಾಗುವದರಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.
ಪ್ರಾಚಾರ್ಯ ಡಾ| ಅರವಿಂದ ಪಾಟೀಲ್ ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳನ್ನು ತಮ್ಮ ಜೀವದ ಹಂಗು ತೊರೆದು ಮನುಕುಲದ ರಕ್ಷಣೆಗಾಗಿ ಸಲ್ಲಿಸುತ್ತಿರುವ ಸೇವೆ ಅಪಾರ. ಶೂಶ್ರುಷಕರು ಜೀವ ಉಳಿಸುವ ಸಂಜೀವಿನಿ ಇದ್ದಂತೆ ಎಂದರು. ಶೂಶ್ರುಷಕ, ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ, ಡಾ| ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಅ ಧೀಕ್ಷಕ ಡಾ| ವಿಜಯಕುಮಾರ ವಾರದ, ಡಾ| ಅಶೋಕ ತರಡಿ, ಡಾ| ಅನ್ನಪೂರ್ಣ ಸಜ್ಜನ, ರಮೇಶಕುಮಾರ ಎಸ್., ಜಯಂತಿ ರಾಜೇಂದ್ರನ್ ರಾಜಶ್ರೀ ಪಾಟೀಲ್, ಗುರುಬಾಯಿ ಹಿರೇಮಠ, ಮಂಗಲಾ ಕೋಳಿ, ಅರುಣ ವೈ.ಸಿ. ಪಾಲ್ಗೊಂಡಿದ್ದರು.
ಭಾರತೀಯ ರೆಡ್ ಕ್ರಾಸ್: ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕ ಹಾಗೂ ಡಾ| ಅಶ್ವಿನಿ ಬಿದರಿ ಆಸ್ಪತ್ರೆ ವತಿಯಿಂದ ವಿಶ್ವ ಶೂಶ್ರುಷಕರ ದಿನಾಚರಣೆ ಆಚರಿಸಲಾಯಿತು. ವಿಜಯಪುರ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸುಮಾರು 40 ಪರಿಣಿತ ಸ್ಟಾಫ್ ನರ್ಸಗಳ ಸೇವಾ ಕಾರ್ಯವನ್ನು ಶ್ಲಾಘಿಸಿ, ಅಭಿನಂದನಾ ಪತ್ರ ಹಾಗೂ ಹೂಗುತ್ಛ ನೀಡಿ ಗೌರವಿಸಲಾಯಿತು. ರೆಡ್‌ಕ್ರಾಸ್ ಚೇರಮನ್ ಡಾ| ಎಲ್.ಎಚ್. ಬಿದರಿ ಮಾತನಾಡಿ, ನರ್ಸ್‌ಗಳ ಸೇವೆಯನ್ನು ಶ್ಲಾಘಿಸಿದರು. ಡಾ| ಅರವಿಂದ ಯರಿ, ಪ್ರೊ| ಶರದ್ ರೂಡಗಿ, ಸಂಗಪ್ಪ ಮುರನಾಳ, ಪ್ರಕಾಶ ಮಠ ಪಾಲ್ಗೊಂಡಿದ್ದರು.