ವಿಜಯಪುರ : ಜಿಲ್ಲೆಯ ಕೂಡಗಿ ಬಳಿ ಇರುವ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ( NTPC) ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕ ಚಿಮಣಿ ಮೇಲಿಂದ ಬಿದ್ದು ಮೃತಪಟ್ಟಿರುವ ದುರಂತ ಘಟನೆ ಜರುಗಿದೆ.
ಮೃತ ಕಾರ್ಮಿಕನನ್ನು ಉತ್ತರ ಪ್ರದೇಶದ ಗಾಜಿಪುರ ಮೂಲದ ಕಿಶನಕುಮಾರ ಭಾರದ್ವಾಜ್ (32) ಎಂದು ಗುರುತಿಸಲಾಗಿದೆ. ಇಂಡಿಯನ್ ಬ್ಯಾಗ್ ಪ್ರೈವೇಟ್ ಲಿಮಿಟೆಡ್ ಮೂಲಕ ಕಿಶನಕುಮಾರ ಕೊಲ್ಹಾರ ತಾಲೂಕಿನ ಕೂಡಗಿ ಎನ್.ಟಿ.ಪಿ.ಸಿ. ಘಟಕದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ.
ಮಂಗಳವಾರ ಸಂಜೆ ಕೆಲಸದಲ್ಲಿ ತೊಡಗಿದ್ಸಾಗ 130 ಅಡಿ ಎತ್ತರದ ಚಿಮಣಿಗೆ ಕೇಬಲ್ ಅಳವಡಿಸುವ ಕಾರ್ಯದಲ್ಲಿ ನಿರತವಾಗಿದ್ದಾಗ ಆಯತಪ್ಪಿ ಕೆಳಗೆ ಬಿದ್ದು, ಮೃತಪಟ್ಟಿದ್ದಾನೆ.
ಕಿಶನಕುಮಾರ ದುರಂತ ಘಟನೆ ಬಳಿಕ ಆಕ್ರೋಶಗೊಂಡ ಕಾರ್ಮಿಕರು, ಅಪಾಯಕಾರಿ ಕೆಲಸದಲ್ಲಿ ತೊಡಗುವ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಇಲ್ಲ. ರಕ್ಷಣಾತ್ಮಕ ಪರಿಕರಗಳು ಇಲ್ಲದೇ ಕೆಲಸ ಮಾಡುವ ಕಾರ್ಮಿಕರು ಈ ರೀತಿ ದುರಂತ ಸಾವಿಗೆ ಈಡಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು ಘಟಕದ ಎದುರು ಪ್ರತಿಭಟನೆ ನಡೆಸಿದರು.
ಮೃತ ಕಿಶನಕುಮಾರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸುಧಾರಿತ ರಕ್ಷಣಾತ್ಮಕ ಪರಿಕರಗಳನ್ನು ಒದಗಿಸಬೇಕು. ಮೃತ ಕಾರ್ಮಿಕನ ಕುಟುಂಬಕ್ಕೆ ತುರ್ತಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಎನ್.ಟಿ.ಪಿ.ಸಿ. ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.