ವಿಜಯಪುರ: ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಬಾಧಿಸಿದ ಪ್ರವಾಹ ಹಾಗೂ ನಿರಂತರ ಮಳೆಗೆ ಗ್ರಾಮೀಣ ರಸ್ತೆಗಳು ಬಹುತೇಕ ಹಾಳಾಗಿವೆ. ಪ್ರವಾಹ ಪೀಡಿದ ಸಂದರ್ಭದಲ್ಲಿ ಜಿಲ್ಲೆಯ ನೂರಾರು ಗ್ರಾಮಗಳ ಜನರು ನಿರಂತರ ಮಳೆಯಿಂದಾಗಿ ಹಾಳಾದ ರಸ್ತೆಗಳು ದುರಸ್ತಿ ಕಾಣದ ಕಾರಣ ಪರಿತಪಿಸುವಂತಾಗಿದೆ. ಜಿಲ್ಲೆಯ ಹಾಳಾದ ಹಳ್ಳಿಗಳ ರಸ್ತೆ ದುರಸ್ತಿಗೆ 74.10 ಕೋಟಿ ರೂ. ಅನುದಾನ ನೀಡುವಂತೆ ಕೋರಲಾಗಿರುವ ಪ್ರಸ್ತಾವನೆಗೆ ಸರ್ಕಾರ ಈವರಗೆ ಅನುಮೋದನೆ ನೀಡಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ.
Advertisement
ಕಳೆದ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಇಲ್ಲದೇ ಕೃಷ್ಣಾ ಹಾಗೂ ಭೀಮಾ ನದಿಗಳು ಉಕ್ಕಿ ಹರಿದ ಕಾರಣ ನದಿ ತೀರದ ಹಳ್ಳಿಗಳು ಹಾಗೂ ರಸ್ತೆಗಳು ಸಂಪೂರ್ಣ ಹಾಳಾಗಿದ್ದವು. ಪ್ರವಾಹ ಪೀಡಿತ ಹಳ್ಳಿಗಳ ಹಾಗೂ ನಂತರ ಸುರಿದ ಭಾರಿ ಮಳೆಗೆ ಜಿಲ್ಲೆಯ ನೂರಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದ್ದವು. ಮಳೆ ಹಾಗೂ ಪ್ರವಾಹ ತಗ್ಗಿದ ಬಳಿಕ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಸಾರಿಗೆ ವ್ಯವಸ್ಥೆಗೂ ಸಮಸ್ಯೆಯಾಗಿದೆ. ಸ್ವಂತ ವಾಹನ ಹೊಂದಿರುವವರು ಕೂಡ ಈ ಹಾಳಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ಪರದಾಡುವಂತಾಗಿದೆ.
209.5 ಕಿ.ಮೀ. ರಸ್ತೆ ತುರ್ತು ದುರಸ್ತಿಗೆ ಜಿಲ್ಲಾಡಳಿತ ಆಸ್ತು ಎಂದಿದೆ. ಇದಕ್ಕಾಗಿ 91 ಕಾಮಗಾರಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳು 1.41 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈ ಹಣದಲ್ಲೇ ಕೆಲವು ಹಳ್ಳಿಗಳ ತುರ್ತು ದುರಸ್ತಿ ಅಗತ್ಯ ಒರುವ ರಸ್ತೆಗಳ ದುರಸ್ತಿಗೆ ಮುಂದಾಗಿದೆ.
Related Articles
Advertisement
ಗದಗ ಜಿಲ್ಲೆಯ ಉಸ್ತುವಾರಿ ಹೊಣೆ ಇರುವ ಗಣಿ-ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಅವರು, ವಿಜಯಪುರ ಜಿಲ್ಲೆಯ ಹೆಚ್ಚುವರಿ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಸಿ.ಸಿ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಎರಡು ಬಾರಿ ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲೆಗೆ ಭೇಟಿ ನೀಡಿದ ಎರಡು ಪ್ರವಾಸಗಳಲ್ಲಿ ಒಮ್ಮೆ ಮಾತ್ರ ಜಿಲ್ಲೆ ಅಭಿವೃದ್ಧಿ ಕುರಿತು ಸಭೆ ನಡೆಸಿದ್ದಾರೆ. ಸದರಿ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಅದರಲ್ಲೂ ಪ್ರವಾಹ ಬಾಧಿತರ ಸಮಸ್ಯೆ ಕುರಿತು ಗಂಭೀರ ಚಿಂತನೆ ಮಾಡಿಲ್ಲ ಎಂಬ ದೂರುಗಳಿವೆ. ಇದರ ಭಾಗವಾಗಿ ಹೆಚ್ಚುವರಿ ಹೊಣೆ ಇರುವ ವಿಜಯಪುರ ಜಿಲ್ಲೆಯ ಪ್ರವಾಹ ಬಾಧಿತ ರಸ್ತೆಗಳ ದುರಸ್ತಿಗೆ ಸಲ್ಲಿಕೆಯಾಗಿರುವ ಅನುದಾನ ಬಿಡುಗಡೆಯ ದುರಸ್ತಿಗೆ ಅನುದಾನ ತರುವಲ್ಲಿಯೂ ವಿಶೇಷ ಕಾಳಜಿ ವಹಿಸುವವರೇ ಇಲ್ಲವಾಗಿದೆ.
ಇದೀಗ ಉಪ ಚುನಾವಣೆ ಮುಕ್ತಾಯ ಕಂಡಿದ್ದು ಬಿಜೆಪಿ ಪರವಾಗಿ ತೀರ್ಪು ಬಂದಿದ್ದು ಸರ್ಕಾರ ಸುಭದ್ರವಾಗಿದೆ. ಜಿಲ್ಲೆಗೆ ಇನ್ನಾದರೂ ಜಿಲ್ಲೆಯ ಸಚಿವರು, ಇಲ್ಲವೇ ಜಿಲ್ಲೆಗೆ ಪ್ರತ್ಯೇಕ ಪೂರ್ಣ ಪ್ರಮಾಣದ ಉಸ್ತುವಾರಿ ಸಚಿವರ ನೇಮಕ ಅಗತ್ಯವಿದೆ.
ಸರ್ಕಾರ ರಚನೆಯ ಗೊಂದಲದಿಂದ ಇನ್ನಾದರೂ ಹೊರ ಬಂದು ಜಿಲ್ಲೆ ಅಭಿವೃದ್ಧಿಗೆ ಅಗತ್ಯ ಇರುವ ಅನುದಾನ ತರುವುದಕ್ಕೆ ಸರ್ಕಾರದ ಮುಂದಿರುವ ಎಲ್ಲ ಪ್ರಸ್ತಾವನೆಗಳಿಗೆ ಅನುಮೋದನೆ ಸಹಿತ ಅಗತ್ಯ ಅನುದಾನ ಬಿಡುಗಡೆಗೆ ಮುಂದಾಗಬೇಕಿದೆ.