Advertisement

ದೋಸ್ತಿಯಲ್ಲಿ ನೆರೆ; ಕಮಲದಲ್ಲಿ ಬರ

04:27 PM Aug 21, 2019 | Naveen |

ಜಿ.ಎಸ್‌.ಕಮತರ
ವಿಜಯಪುರ:
ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಬಸವನಾಡಿಗೆ ಅಧಿಕಾರದ ಪ್ರವಾಹವೇ ಹರಿದಿದ್ದು ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಒಬ್ಬರಿಗೂ ಸಚಿವ ಸ್ಥಾನ ನೀಡದೇ ಅಧಿಕಾರ ಬರ ಆವರಿಸಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಮಳೆ ಇಲ್ಲದೇ ನೆರೆ ಹಾಗೂ ಬರ ಎರಡೂ ಪರಿಸ್ಥಿತಿಯನ್ನು ಏಕ ಕಾಲಕ್ಕೆ ಅನುಭವಿಸುವಂತಾಗಿದೆ. ಮತ್ತೂಂದೆಡೆ ರಾಜಕೀಯ ಅಧಿಕಾರದ ವಿಷಯದಲ್ಲಿ ವಿಜಯಪುರ ಜಿಲ್ಲೆಗೆ ಕಳೆದ ತಿಂಗಳ ಹಿಂದಷ್ಟೇ ಇದ್ದ ಅಧಿಕಾರದ ಪ್ರವಾಹ, ಇದೀಗ ಬರ ಎದುರಿಸುವಂತಾಗಿದೆ.

ಜಿಲ್ಲೆಯ 8 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ಮೂವರು ಶಾಸಕರು ಹಾಗೂ ಜೆಡಿಎಸ್‌ ಇಬ್ಬರು ಶಾಸಕರನ್ನು ಹೊಂದಿದೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲ ಅರೋಗ್ಯ ಸಚಿವ, ಜೆಡಿಎಸ್‌ನ ಎಂ.ಸಿ. ಮನಗೂಳಿ ತೋಟಗಾರಿಕೆ ಸಚಿವ ಸ್ಥಾನ, ಎಂ.ಬಿ. ಪಾಟೀಲ ಗೃಹ ಸಚಿವರಾಗಿದ್ದರು. ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ಕರ್ನಾಟಕ ನಗರ ನೀರು ಸರಬರಾಜು ಕೊಳಚೆ ಮಂಡಳಿ ಅಧ್ಯಕ್ಷರಾಗಿದ್ದರು. ಜೆಡಿಎಸ್‌ನ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಮುಖ್ಯಮಂತ್ರಿಗಳ ಶಿಕ್ಷಣ ಇಲಾಖೆ ಸಂಸದೀಯ ಕಾರ್ಯದರ್ಶಿಯಾಗಿದ್ದರು. ಮೈತ್ರಿ ಸರ್ಕಾರದ ಎಲ್ಲ 5 ಶಾಸಕರಿಗೆ ಅಧಿಕಾರ ದೊರಕುವ ಮೂಲಕ ಎರಡು ದಶಕಗಳ ಬಳಿಕ ಜಿಲ್ಲೆಗೆ ಅಧಿಕಾರದ ದೊಡ್ಡ ಪ್ರವಾಹ ಹರಿದು ಬಂದಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಮೂವರು ಬಿಜೆಪಿ ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ.

ವಿಜಯಪುರ ನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ಬಸನಗೌಡ ಪಾಟೀಲ ಎರಡು ಬಾರಿ ಸಂಸದರಾಗಿ, ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ, ಎರಡು ಬಾರಿ ವಿಧಾನಸಭೆ ಹಾಗೂ ಒಂದು ಬಾರಿ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರಿದ್ದಾರೆ. ರಾಜಕೀಯವಾಗಿ ಹಿರಿಯ ಹಾಗೂ ಅನುಭವಿ ಎನಿಸಿಕೊಂಡಿದ್ದರೂ ಸಚಿವ ಸ್ಥಾನದ ಸಂಭಾವ್ಯರ ಪಟ್ಟಿಯಲ್ಲಿ ಯತ್ನಾಳ ಅವರ ಹೆಸರು ಮಾಧ್ಯಮಗಳಲ್ಲಿ ಹರಿದಾಡಿದರೂ ಅಂತಿಮವಾಗಿ ಯತ್ನಾಳ ಅವರಿಗೆ ಮಂತ್ರಿ ಭಾಗ್ಯ ಸಿಗಲಿಲ್ಲ.

ಮತ್ತೂಂದೆಡೆ ಮುದ್ದೇಬಿಹಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎ.ಎಸ್‌.ಪಾಟೀಲ ನಡಹಳ್ಳಿ ಸತತ ಮೂರು ಬಾರಿ ವಿಧಾನಸಭೆ ಸದಸ್ಯರಾಗಿದ್ದಾರೆ. ಈ ಹಿಂದೆ ಎರಡು ಬಾರಿ ದೇವರಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕಾಗಿದ್ದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿ, ಮುದ್ದೇಬಿಹಾಳ ಕ್ಷೇತ್ರಕ್ಕೆ ವಲಸೆ ಬಂದು ಅಲ್ಲಿಂದಲೂ ಗೆದ್ದಿದ್ದಾರೆ. ಅಲ್ಲದೇ ತಾವು ಎರಡು ಅವಧಿಗೆ ಶಾಸಕರಾಗಿದ್ದ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋಮನಗೌಡ ಪಾಟೀಲ ಸಾಸನೂರು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಜಯಪುರ ಜಿಲ್ಲೆಯ ನೀರಾವರಿ ಸೇರಿದಂತೆ ಉತ್ತರ ಕರ್ನಾಟದ ಅಭಿವೃದ್ಧಿ ವಿಷಯವಾಗಿ ಹಲವು ರೀತಿಯಲ್ಲಿ ಧ್ವನಿ ಎತ್ತುವ ಮೂಲಕ ಹೋರಾಟಗಾರ ಶಾಸಕ ಎಂದು ರಾಜ್ಯದ ಗಮನ ಸೆಳೆದವರು. ಇಷ್ಟಿದ್ದರೂ ನಡಹಳ್ಳಿ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ.

Advertisement

ಇನ್ನು ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಸಾಸನೂರು ಮೊದಲ ಬಾರಿಗೆ ಶಾಸಕಾಗಿದ್ದಾರೆ ಎಂದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವಿಜಯಪುರ ಜಿಲ್ಲೆ ಮೂವರು ಶಾಸಕರನ್ನು ನೀಡಿದೆ. ಹೀಗಾಗಿ ಯಡಿಯೂರಪ್ಪ ಸರ್ಕಾರದಲ್ಲಿ ಜಿಲ್ಲೆಯ ಯತ್ನಾಳ ಅಥವಾ ನಡಹಳ್ಳಿ ಅವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಖಾತ್ರಿ ಎನ್ನಲಾಗಿತ್ತು. ಆದರೆ, ಅದೆಲ್ಲ ಹುಸಿಯಾಗಿದೆ.

ಇದರ ಮಧ್ಯೆಯೇ ತಮಗೆ ಮಂತ್ರಿ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿಲ್ಲ ಎಂಬುದನ್ನು ಯತ್ನಾಳ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ರಾಜ್ಯ ನೆರೆಯಿಂದ ತತ್ತರಿಸಿದ್ದು, ನೂತನ ಸಚಿವರು ತಕ್ಷಣ ಸಂತ್ರಸ್ತರ ಜನರ ನೆರವಿಗೆ ಬರಬೇಕು. ಹಾರ-ತುರಾಯಿಗೆ ಸಮಯ ವ್ಯರ್ಥ ಮಾಡದೇ ಕೆಲಸ ಆರಂಭಿಸಲಿ ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next