Advertisement

Vijayapura Municipal Corporation:7ಸದಸ್ಯರು ಕಾಂಗ್ರೆಸ್ ತೆಕ್ಕೆಗೆ;ಮೇಯರ್ ಸ್ಥಾನ ನಿಚ್ಚಳ

02:58 PM Oct 11, 2023 | Team Udayavani |

ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆಯ ಏಳು ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ಇಲ್ಲಿನ ನಿವಾಸದಲ್ಲಿ ಬುಧವಾರ ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.

Advertisement

ಪಾಲಿಕೆಯ ಇನ್ನೋರ್ವ ಸದಸ್ಯರು ಕೂಡ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದು, ಅವರು ಕಾರಣಾಂತರಗಳಿಂದ ಬಂದಿರಲಿಲ್ಲ. ಇದರೊಂದಿಗೆ, 35 ಸದಸ್ಯ ಬಲದ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ಸಿನ ಬಲ 18ಕ್ಕೆ ಏರಿದಂತಾಗಿದೆ. ಪಕ್ಷಕ್ಕೆ ಬಂದ ಇವರನ್ನೆಲ್ಲ ಸ್ವತಃ ಪಾಟೀಲರು ಮತ್ತು ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಶಾಲು ಹಾಕಿ, ಸ್ವಾಗತಿಸಿದರು.

ಪಕ್ಷೇತರರಾದ ಅಶೋಕ ನ್ಯಾಮಗೌಡ, ರಾಜು ಜಾದವ, ಅಲ್ತಾಫ್ ಇಟಗಿ, ರಫೀಕ್ ಕಾಗೆ, ಎಂಐಎಂ ಪಕ್ಷದಿಂದ ಆರಿಸಿ ಬಂದಿದ್ದ ಕೈಸರ್ ಇನಾಮದಾರ ಮತ್ತು ಸೂಫಿಯಾ ವಾಟಿ ಹಾಗೂ ಜೆಡಿಎಸ್ ಸದಸ್ಯ ರಾಜು ಚವಾಣ ಅವರು ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾದವರು.

ಸಚಿವ ಪಾಟೀಲರು ಕಳೆದ ಎರಡು ವಾರಗಳಿಂದ ಅಧಿಕೃತ ಪ್ರವಾಸದ ಮೇರೆಗೆ ಅಮೆರಿಕದಲ್ಲಿದ್ದರು. ಅವರು ಬುಧವಾರ ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಇದುವರೆಗೆ ಕಾಂಗ್ರೆಸ್ ಕೇವಲ 10 ಸದಸ್ಯರನ್ನು ಮಾತ್ರ ಹೊಂದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಅದರ ಬಲ 18 ಆಗಿದೆ. ಜತೆಗೆ ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿ ಅದರ ಬಲ 32ಕ್ಕೇರಿದಂತಾಗಿದೆ. ಹೀಗಾಗಿ ಸದ್ಯದಲ್ಲೇ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ಸಿನ ಗೆಲುವು ನಿಚ್ಚಳವಾಗಿದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, ‘ಕಾಂಗ್ರೆಸ್ ಮಾತ್ರ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿದೆ. ಹೀಗಾಗಿ ಪಕ್ಷೇತರರು ಮತ್ತು ಉಳಿದ ಪಕ್ಷಗಳ ಸದಸ್ಯರು ತಾವಾಗಿಯೇ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಇವರನ್ನೆಲ್ಲ ನಾನು ಸ್ವಾಗತಿಸುತ್ತೇನೆ. ಮುಂಬರುವ ದಿನಗಳಲ್ಲಿ ವಿಜಯಪುರ ನಗರಕ್ಕೆ ನಮ್ಮಿಂದ ಸಮರ್ಥ ಆಡಳಿತ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next