ವಿಜಯಪುರ: ಜಿಲ್ಲೆಯ 3 ಪುರಸಭೆಗಳಿಗೆ ಮೇ 29ರಂದು ಚುನಾವಣೆ ನಡೆದಿದ್ದು ಶುಕ್ರವಾರ ಮತ ಎಣಿಕೆ ನಡೆದು ಫಲಿತಾಂಶ ಹೊರ ಬಿದ್ದಿದೆ. ಮೂರರಲ್ಲಿ ಒಂದು ಪುರಸಭೆಯಲ್ಲಿ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಏರಲು ಸನ್ನದ್ಧವಾಗಿದೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಮತ್ತೂಂದರಲ್ಲಿ ಕಾಂಗ್ರೆಸ್-ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಹಾಗೂ ಪಕ್ಷೇತರ ಸಹಕಾರ ಪಡೆಯಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನಂತೆ ಒಂದು ಪುರಸಭೆಯಲ್ಲಿ ಪಕ್ಷೇತರರು ತಮ್ಮ ಪ್ರಾಬಲ್ಯ ಮುಂದುವರಿಸಿದ್ದು, ಇಲ್ಲಿಯೂ ಅತಂತ್ರ ಪರಿಸ್ಥಿತಿ ಎದುರಾಗಿದೆ.
Advertisement
3 ಪುರಸಭೆಗಳ 69 ಸ್ಥಾನಗಳಲ್ಲಿ ಕಾಂಗ್ರೆಸ್ 24 ಸ್ಥಾನ ಗಳಿಸಿದ್ದರೆ, ಬಿಜೆಪಿ 20 ಸ್ಥಾನ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 22 ಸ್ಥಾನ ಪಡೆದಿರುವ ಪಕ್ಷೇತರರ ಹಿಂದಿನಂತೆ ತಮ್ಮ ಪ್ರಾಬಲ್ಯ ಮುಂದುವರಿಸಿದ್ದು, ರಾಜಕೀಯ ಪಕ್ಷಗಳನ್ನು ಹಿಂದಿಕ್ಕಿ ಸಂಖ್ಯಾ ಬಲದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್ ಕೇವಲ 3 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಮಾತ್ರ ತೃಪ್ತಿ ಪಟ್ಟಿದೆ.
Related Articles
Advertisement
23 ಸದಸ್ಯ ಬಲದ ಬಸವನಬಾಗೇವಾಡಿ ಪುರಸಭೆಯಲ್ಲಿ ಕಾಂಗ್ರೆಸ್ 13 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದು, ಕಳೆದ ಬಾರಿಗಿಂತ 3 ಸ್ಥಾನ ಹೆಚ್ಚಿಗೆ ಗೆಲ್ಲುವ ಮೂಲಕ ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಸನ್ನದ್ಧವಾಗಿದೆ. ಬಿಜೆಪಿ 6 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದ್ದು, ಹಿಂದಿಗಿಂತ 3 ಸ್ಥಾನಗಳನ್ನು ಕಳೆದುಕೊಂಡಿದೆ. ಪಕ್ಷೇತರರು ಹಿಂದಿನಂತೆ 4 ಸ್ಥಾನಗಳಲ್ಲಿ ವಿಜಯ ಸಾಧಿಸಿ ತಮ್ಮ ಶಕ್ತಿಯನ್ನು ಮತ್ತೆ ಉಳಿಸಿಕೊಂಡಿದ್ದಾರೆ.
ಅರೋಗ್ಯ ಸಚಿವ ಶಿವಾನಂದ ಪಾಟೀಲ ಅವರ ಪ್ರಭಾವದಲ್ಲಿರುವ ಬಸವಜನ್ಮಭೂಮಿ ಬಸವನಬಾಗೇವಾಡಿ ಮತದಾರರು ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡುವ ಮೂಲಕ ಹಿಂದಿನ ಆತಂತ್ರ ಸ್ಥಿತಿಗೆ ತೆರೆ ಎಳೆದಿದ್ದಾರೆ. ವಿಧಾನಸಭೆ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿದ್ದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಲೋಕಸಭೆ ಚುನಾವಣೆ ಹಂತದಲ್ಲಿ ಮಾತೃ ಪಕ್ಷ ಬಿಜೆಪಿಗೆ ಮರಳಿದರೂ ಬಿಜೆಪಿಗೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. ಶಿವಾನಂದ ಪಾಟೀಲ ಅವರ ರಾಜಕೀಯ ಎದುರಾಳಿ ಜೆಡಿಎಸ್‌ನ ಆಪ್ಪುಗೌಡ ಪಾಟೀಲ ಅವರಿಗೂ ಈ ಪುರಸಭೆಯಲ್ಲಿ ಒಂದೇ ಒಂದು ಸ್ಥಾನದಲ್ಲಿ ಖಾತೆ ತೆರೆಯಲು ಆಗಿಲ್ಲ.
ಇಂಡಿ ಪುರಸಭೆಯಲ್ಲಿ 23 ಸದಸ್ಯ ಬಲ ಇದ್ದು, ಬಿಜೆಪಿ 11 ಸ್ಥಾನ ಗೆದ್ದು ಬೀಗಿದರೂ ಆಧಿಕಾರಕ್ಕೇರಲು ಬೇಕಾದ ಸಂಖ್ಯಾ ಬಲ ಪಡೆಯಲು ಸಾಧ್ಯವಾಗಿಲ್ಲ. ಕಳೆದ ಬಾರಿಗಿಂತ 3 ಸ್ಥಾನ ಹೆಚ್ಚು ಗೆದ್ದಿದ್ದೇ ಹೆಚ್ಚುಗಾರಿಕೆ ಎನ್ನುವಂತಾಗಿದೆ. ಹಿಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕೆಜೆಪಿ 3 ಸದಸ್ಯರು ಈ ಪುರಸಭೆಯಲ್ಲಿ ಗೆದ್ದಿದ್ದರು ಎಂಬುದು ಗಮನೀಯ. ಇನ್ನು 8 ಸ್ಥಾನ ಗೆದ್ದಿರುವ ಕಾಂಗ್ರೆಸ್, ಈ ಬಾರಿ 1 ಸ್ಥಾನ ಹೆಚ್ಚಿಗೆ ಮಾಡಿಕೊಂಡಿದೆ. ಕಳೆದ ಬಾರಿ 3 ಸ್ಥಾನ ಗೆದ್ದಿದ್ದ ಜೆಡಿಎಸ್ ಈ ಬಾರಿ 2ಕ್ಕೆ ಕುಸಿದಿದೆ. ಪಕ್ಷೇತರರು ಹಿಂದಿನಂತೆ 2 ವಾರ್ಡ್‌ಗಳಲ್ಲಿ ವಿಜಯ ಸಾಧಿಸಿ ತಮ್ಮ ಸಂಖ್ಯೆ ಉಳಿಸಿಕೊಂಡಿದ್ದಾರೆ.
ಇಂಡಿ ವಿಧಾನಸಭೆಯಿಂದ ಎರಡು ಬಾರಿ ಗೆದ್ದಿರುವ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದ ಈ ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದ ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್‌ನ ಇಬ್ಬರು ಹಾಗೂ ಇಬ್ಬರು ಪಕ್ಷೇತರರ ಬಲದೊಂದಿಗೆ ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ. ಆದರೆ ಸರಳ ಬಹುಮತಕ್ಕೆ ಕೇವಲ 2 ಸದಸ್ಯರ ಬಲ ಬೇಕಿದ್ದು, ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಲು ಚಿಂತನೆ ನಡೆಸಿದೆ.