ಉಪ್ಪಿನಂಗಡಿ: ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ಜ. 1ರಂದು ಸಂಭವಿಸಿದೆ.
ಶಿರಾಡಿ ಗ್ರಾಮದ ಪೇರಮಜಲು ಎಡಪ್ಪಾಟ್ ನಿವಾಸಿ ವರ್ಕಿ ಇ.ಪಿ. (59) ಮೃತಪಟ್ಟವರು. ವರ್ಕಿ ಅವರು ಅಡ್ಡಹೊಳೆ ಮಿತ್ತಮಜಲು ಎನ್ನುವಲ್ಲಿರುವ ಸಹೋದರ ಜೋಯಿ ಇ.ಪಿ. ಅವರ ಮನೆಗೆ ಕೆಲಸಕ್ಕೆ ಹೋದವರು ಅಲ್ಲಿ ತೆಂಗಿನಮರ ಏರಿ ಕಾಯಿ ಕೀಳುತ್ತಿರುವ ಸಮಯ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು ತತ್‌ಕ್ಷಣ ನೆಲ್ಯಾಡಿಯ ಆಸ್ಪತ್ರೆಗೆ ಕರೆತರಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದರು.
ಮೃತರ ಪುತ್ರ ಶ್ಯಾಮ್ ಇ.ವಿ. ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.