ವಿಜಯಪುರ: ನೂತನವಾಗಿ ಆಯ್ಕೆಯಾಗಿರುವ ತಮಗೆ ವಿಜಯಪುರ ಮಹಾನಗರ ಪಾಲಿಕೆ ಚಾಲಕನೇ ಇಲ್ಲದ ಹಳೆ ವಾಹನ ನೀಡಿದೆ ಎಂದು ಅಸಮಾಧಾನಗೊಂಡ ಮೇಯರ್ ಅವರು ಟಾಂಗಾ ಸವಾರಿ ಮೂಲಕ ಪಾಲಿಕೆಗೆ ಆಗಮಿಸಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಪಕ್ಷದ ಮೇಹಜಬಿನ್ ಹೊರ್ತಿ ನೂತನವಾಗಿ ಮೇಯರ್ ಆಗಿ ಆಯ್ಕೆಗಿದ್ದಾರೆ. ಆದರೆ ಮೇಯರ್ ಗೆ ಹೊಸ ವಾಹನ ನೀಡದೇ ಹಳೆಯ ವಾಹನ ನೀಡಲಾಗಿದೆ. ಅಲ್ಲದೇ ಹಳೇ ವಾಹನಕ್ಕೂ ಚಾಲಕನ ನೇಮಕವಾಗಿಲ್ಲ. ಹೀಗಾಗಿ ಮೇಯರ್ ಮೆಹಜಬಿನ್ ಗುರುವಾರ ಟಾಂಗಾ ಸವಾರಿ ಮೂಲಕ ಪಾಲಿಕೆಗೆ ಆಗಮಿಸಿ ಅಧಿಕಾರಿಗಳ ವಿರುದ್ಧ ವಿನೂತನವಾಗಿ ಪ್ರತಿಭಟನೆ ದಾಖಲಿಸಿದ್ದಾರೆ.
ಮೇಯರ್ ಗೆ ನೀಡಿರುವ ವಾಹನದಲ್ಲಿ ಸಂಚಾರ ಸಮಸ್ಯೆ ಆಗುತ್ತಿದೆ. ಮೇಲಾಗಿ ಸದರಿ ವಾಹನಕ್ಕೆ ಚಾಲಕನ ನೇಮಕವೂ ಇಲ್ಲದ ಕಾರಣ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ವಾಹನ ಬಳಕೆಯೂ ಅಸಾಧ್ಯವಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ಮೇಯರ್ ಮೆಹಜಬಿನ್ ದೂರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದು, ಕಾಂಗ್ರೆಸ್ ಪಕ್ಷದವರೇ ಮೇಯರ್ ಆಗಿದ್ದರೂ ಇಲಾಖೆಯ ಅಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಕುದುರೆಯ ಟಾಂಗಾ ಏರಿ ಪಾಲಿಕೆಗೆ ಆಗಮಿಸಿ ಅಧಿಕಾರಿಗಳ ನಿರ್ಲಕ್ಷ್ಯದ ನಡೆಗೆ ವಿನೂತನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯುವ ಸಂದರ್ಭದಲ್ಲಿ ಮೇಯರ್ ಜಟಕಾ ಸವಾರಿ ಮೂಲಕ ಪಾಲಿಕೆಗೆ ಆಗಮಿಸಿ ಸಭೆಗೆ ಹಾಜರಾಹಿದ್ದಾರೆ. ಇದು ವಿಜಯಪುರ ಮಹಾನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೊಸ ವಾಹನ ಅಥವಾ ಬಾಡಿಗೆ ವಾಹನ ಪಡೆಯಲು ನಿಯಮದಲ್ಲಿ ಅವಕಾಶ ಇದ್ದರೂ ಮೇಯರ್ ಅನಗತ್ಯವಾಗಿ ಪ್ರಚಾರ ಪಡೆಯುವುದಕ್ಕಾಗಿ ಇಂತ ಜಟಕಾ ಸವಾರಿಯ ನಡೆ ಅನುಸರಿಸಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.