ವಿಜಯಪುರ: ದೇಶದಲ್ಲಿ ಈಚೆಗೆ ಎಡ ಪಂಥ, ಬಲ ಪಂಥ ಅಂತೆಲ್ಲ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ದೇಶದ ಅಭಿವೃದ್ಧಿ ಹಾಗೂ ನೆಮ್ಮದಿಗಾಗಿ ಬಸವ ಪಂಥ ಮಾತ್ರವೇ ಇಂದಿನ ಅತ್ಯಂತ ಅವಶ್ಯ ಎಂದು ಗದಗ ತೋಂಟದಾರ್ಯ ಮಠದ ಡಾ| ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಬುಧವಾರ ನಗರದ ಬಿಎಲ್ಡಿಇ ಸಂಸ್ಥೆಯ ವೈದ್ಯಕೀಯ ವಿಶ್ವವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು ಮಾತನಾಡಿದರು. ಎಡ-ಬಲ ಪಂಥ ಎಂಬ ವಿಷಯಗಳ ಕುರಿತು ಈಚೆಗೆ ವ್ಯಾಪಕವಾಗಿ ಕೇಳಿಬರುತ್ತಿವೆ. ಆದರೆ ಇದೆಲ್ಲವೂಗಳಿಗಿಂತ ಸಮಾನತೆ, ಕಾಯಕ ಶ್ರೇಷ್ಠತೆಯನ್ನು ಸಾರುವ ಹಾಗೂ ದೇಶ ಕಟ್ಟುವ ಬಸವ ಪಂಥವೇ ಶ್ರೇಷ್ಠ ಎಂದು ಪ್ರತಿಪಾದಿಸಿದರು.
12ನೇ ಶತಮಾನದಲ್ಲಿ ಇದ್ದ ಶ್ರದ್ಧೆಯ ಭಕ್ತಿ ಭಾವ ಈಗ ಏಕೆ ಕಾಣುತ್ತಿಲ್ಲ ಎಂಬ ವಿದ್ಯಾರ್ಥಿನಿ ಗಂಭೀರವಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾಣೆಹಳ್ಳಿಯ ಡಾ| ಪಂಡಿತಾರಾಧ್ಯ ಶ್ರೀಗಳು, 12ನೇ ಶತಮಾನದಲ್ಲಿ ಶರಣರು ಸ್ಥಾವರ ಪೂಜೆಗೆ ಆಸ್ಪದ ನೀಡದೇ ಆತ್ಮ ಸಾಕ್ಷಾತ್ಕಾರಕ್ಕಾಗಿ ಇಷ್ಟಲಿಂಗದ ಮೂಲಕ ಭಕ್ತಿ ಭಾವ ಮೂಡಿಸಿದರು. ಹೀಗಾಗಿ ತನ್ನಿಂದ ತಾನೇ ಭಕ್ತಿಭಾವದ ಪೂಜೆ, ಶ್ರದ್ಧೆ ನೆಲೆಗೊಂಡಿತು. ಆದರೆ ಈಗ ಸ್ಥಾವರ ಪೂಜೆ ಮೇಲುಗೈ ಸಾಧಿಸಿದ ಪರಿಣಾಮ ಗಲ್ಲಿಗಳಲ್ಲಿ ನಾಲ್ಕಾರು ಗುಡಿ-ಮಂದಿರಗಳು ತಲೆ ಎತ್ತುವಂತಾಗಿದೆ ಎಂದು ವಿಷಾದಿಸಿದರು.
ಇನ್ನು ವರ್ಷ ಪೂರ್ತಿ ದೇವರತ್ತ ಕಣ್ಣೆತ್ತಿ ನೋಡದ ವಿದ್ಯಾರ್ಥಿ ಯುವ ಸಮೂಹ ಪರೀಕ್ಷೆ ಬರುತ್ತಲೇ ದೇವರನ್ನೆಲ್ಲ ಹುಡುಕಿಕೊಂಡು ಆಲೆಯುತ್ತಾರೆ, ಕಾಯಿ-ಕರ್ಪೂರ ಮಾಡಿಸುತ್ತಾರೆ. ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಹಣ್ಣು-ಕಾಯಿ ಸೇರಿದಂತೆ ಇತರೆ ಕಾಣಿಕೆ-ದೇಣಿಗೆ ನೀಡುವುದಾಗಿ ಹರಕೆ ಹೊರುವ ಮೂಢನಂಬಿಕೆ ಮೈಗೂಡಿಸಿಕೊಂಡಿದ್ದಾರೆ. ಬದಲಾಗಿ ಶಿಕ್ಷಣ ಪಡೆಯುವಾಗ ವಿದ್ಯಾರ್ಥಿ ಯುವ ಸಮೂಹ ಓದಿನಲ್ಲಿ ಶ್ರದ್ಧೆ ಇರಿಸಿಕೊಂಡು, ಬದ್ಧತೆಯಿಂದ ಶಿಕ್ಷಣ ಪಡೆದಲ್ಲಿ ಪರೀಕ್ಷೆಗಳಲ್ಲಿ ಸ್ವಯಂ ಪರಿಶ್ರಮದ ಓದಿನ ಉತ್ತರ ಬರೆದಲ್ಲಿ ಮಾತ್ರವೇ ಉತ್ತೀರ್ಣರಾಗಲು ಸಾಧ್ಯ ಎಂಬುದನ್ನು ಅರಿಯಬೇಕು ಎಂದು ವಿವರಿಸಿದರು.
ಗುರು, ಲಿಂಗ, ಜಂಗಮ ತಾತ್ಪರ್ಯವೇನು ಎಂದು ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು ಹಾಗೂ ಜಂಗಮನಿಗೆ ಧನ ಅರ್ಪಿಸುವುದು, ಧನ ಎಂದರೆ ಸ್ವಾಮೀಜಿಗಳಿಗೆ ಹಣ ಕೊಡಬೇಕು ಎಂದರ್ಥವಲ್ಲ. ಸಂಗ್ರಾಮ ಮನಸ್ಥಿತಿ ಬೇಡ ಎಂಬುದನ್ನು ಹಾಗೂ ಬದಲಾಗಿ ಅರಿವು-ಆಚಾರವುಳ್ಳ ಪ್ರತಿ ವ್ಯಕ್ತಿಯೂ ಜಂಗಮ ಎಂಬುದನ್ನು ಹೇಳುವುದಾಗಿದೆ. ಗಂಡು-ಹೆಣ್ಣು, ಜಾತಿ-ಧರ್ಮ, ಕಸಬುಗಳ ಮೇಲ್ಮೆ-ಕೀಳರಿಮೆ ಬೇಧವಿಲ್ಲದ ಹಾಗೂ ಸಂಗ್ರಹ ಪ್ರವೃತ್ತಿ ಇಲ್ಲದ ಬದುಕು ನಿಜವಾದ ಶರಣತ್ವಕ್ಕೆ ಸಾಕ್ಷಿ. ಈ ಕಾರಣಕ್ಕಾಗಿಯೇ ತನು, ಮನ, ಧನವನ್ನು ಅರ್ಪಿಸಬೇಕು ಎಂದು ಶಿವಶರಣು ಸಾರಿದ್ದಾರೆ ಎಂದು ವಿಶ್ಲೇಷಿಸಿದರು.
ಗುರು ಎಂದರೆ ಅಕ್ಷರ ಕಲಿಸದಾತ, ಜ್ಞಾನ ಉಣ ಬಡಿಸಿದಾತ ಇತನಿಗೆ ನಾವು ಗೌರವಿಸಬೇಕು. ಅಂದರೆ ನಮ್ಮ ತನು ಗುರುವಿಗೆ ಸಮರ್ಪಿಸಬೇಕು ಎಂಬರ್ಥ, ಲಿಂಗವೆಂದರೆ ಭಗವಂತನಲ್ಲ, ಭಗಂತನ ಕುರುಹು ಅಷ್ಟೇ, ನಮ್ಮೊಳಗಿನ ಶಿವನ ಚೈತನ್ಯ ರೂಪದ ಸಾಂಕೇತಿಕ ಸಾಧನವೇ ಇಷ್ಟಲಿಂಗ ಎಂದು ವಿವರಿಸಿದರು.
ವಿದ್ಯಾರ್ಥಿಯೊಬ್ಬ ನಾನು ಲಿಂಗಾಯತ ಎಂದ ಮಾತ್ರ ಮೋಕ್ಷ ಸಿಗುತ್ತದೆಯೇ ಎಂದಾಗ ಉತ್ತರಿಸಿದ ಪಂಡಿತಾರಾಧ್ಯ ಶ್ರೀಗಳು, ಕೇವಲ ಲಿಂಗಾಯತನಾದರೆ ಮೋಕ್ಷ ಸಿಗುವುದಿಲ್ಲ. ಲಿಂಗಾಯತ ಧರ್ಮದ ತತ್ವಗಳನ್ನು ಅನುಷ್ಠಾನಗೊಳ್ಳಬೇಕು, ಕಾಯಕ, ದಾಸೋಹ, ಲಿಂಗಪೂಜೆ ತತ್ವಗಳು ಶ್ರದ್ಧೆಯಿಂದ ಮನದಲ್ಲಿ ಸಾಕಾರ ರೂಪ ಪಡೆಯಬೇಕು, ಆಗ ಅದು ಮೋಕ್ಷಕ್ಕೆ ದಾರಿಯಾಗುತ್ತದೆ ಎಂದರು. 12ನೇ ಶತಮಾನದಿಂದಲೂ ಸಮಾನತೆಯ ಕೂಗು ಮೊಳಗಿದರೂ 21ನೇ ಶತಮಾನದಲೂ ಸಾಧ್ಯವಾಗಿಲ್ಲ ಏಕೆ ಎಂದು ಓರ್ವ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಪ್ರತಿ ವ್ಯಕ್ತಿಯಲ್ಲಿ ಸಮಾನತೆ ಕೇಳುವ ಹಾಗೂ ಸಮಾಜದಲ್ಲಿ ಸಮಾನತೆ ಮೂಡಿಸುವ ಮನಸ್ಥಿತಿ ಬಂದಾಗಲೇ ಸಮಾನತೆ ಸಮಾಜ ನಿರ್ಮಾಣ ಸಾಧ್ಯ ಎಂದರು.