Advertisement

ವಿಪಕ್ಷ ಶಾಸಕರ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆ

02:59 PM May 25, 2019 | Team Udayavani |

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಐವರು ಶಾಸಕರು ಪ್ರತಿನಿಧಿಸುವ, ಅದರಲ್ಲೂ ಮೂವರು ಸಚಿವರು ಹಾಗೂ ಸಚಿವ ದರ್ಜೆ ಸ್ಥಾನ ಇರುವ ಅಧಿಕಾರ ಹೊಂದಿರುವ ಇಬ್ಬರು ಶಾಸಕರು ಇರುವ ಕ್ಷೇತ್ರದಲ್ಲೂ ಬಿಜೆಪಿ ಕೇಸರಿ ಬಾವುಟ ಹಾರಿಸಿದೆ. ಅಚ್ಚರಿ ಸಂಗತಿ ಎಂದರೆ ಮೈತ್ರಿ ಪಕ್ಷಗಳ ಜೆಡಿಎಸ್‌ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಅವರ ಪತಿ ದೇವಾನಂದ ಪ್ರತಿನಿಧಿಸುತ್ತಿರುವ ನಾಗಠಾಣ ಕ್ಷೇತ್ರದಲ್ಲೂ ಬಿಜೆಪಿ ಭಾರಿ ಮುನ್ನಡೆ ಪಡೆದಿದೆ. ಹೀಗಾಗಿ ಇದು ಜಿಲ್ಲೆಯ ಮತದಾರ ಮನಸ್ಥಿತಿಯನ್ನು ವಿಶ್ಲೇಷಿಸಲು ರಾಜಕೀಯ ತಜ್ಞರು ಕೂಡ ಸೋಲುವಂತೆ ಮಾಡಿದೆ.

Advertisement

ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ವಿಜಯಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆಗಳಲ್ಲಿ ಎಲ್ಲ ಕಡೆಯೂ ಭಾರಿ ಮುನ್ನಡೆ ಪಡೆದಿದ್ದಾರೆ. ಕಾರಣ ಕ್ಷೇತ್ರದ ಇತಿಹಾಸದಲ್ಲಿ ಹೆಚ್ಚಿನ ಮತಗಳ ಅಂತರದಿಂದ ವಿಜೇತ ಎಂಬ ಹಿರಿಮೆ ಸಂಪಾದಿಸಲು ಸಾಧ್ಯವಾಗಿದೆ.

ಬಿಜೆಪಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ಪ್ರತಿನಿಧಿಸುತ್ತಿರುವ ಮುದ್ದೇಬಿಹಾಳ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 71,874 ಮತ ಪಡೆದರೆ, ಹತ್ತಿರದ ಸ್ಪರ್ಧಿ ಡಾ| ಸುನೀತಾ ಚವ್ಹಾಣ 40,446 ಪಡೆಯಲು ಮಾತ್ರ ಸಾಧ್ಯವಾಯಿತು. ಇದರಿಂದಾಗಿ ಜಿಗಜಿಣಗಿ ಬಿಜೆಪಿ ಶಾಸಕ ಇರುವ ಈ ಕ್ಷೇತ್ರದಲ್ಲಿ 31,428 ಮತಗಳ ಭಾರಿ ಮುನ್ನಡೆ ಪಡೆಯಲು ಸಹಕಾರಿ ಆಯಿತು.

ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರು ಪ್ರತಿನಿಧಿಸುತ್ತಿರುವ ದೇವರಹಿಪ್ಪರಗಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಣಗಿ 68,508 ಮತಗಳನ್ನು ಪಡೆದರೆ, ಜೆಡಿಎಸ್‌ನ ಡಾ| ಸುನೀತಾ ಚವ್ಹಾಣ 42,147 ಮತಗಳನ್ನು ಮಾತ್ರ ಪಡೆದ ಕಾರಣ ಈ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 26,361 ಮತಗಳ ಮುನ್ನಡೆ ಪಡೆಯಲು ನೆರವಾಯಿತು.

ಇನ್ನು ಆರೋಗ್ಯ ಸಚಿವ ಶಿವಾನಂದ ಪಾಟೀಲ ಪ್ರತಿನಿಧಿಸುತ್ತಿರುವ ಬಸವನಬಾಗೇವಾಡಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 79,400 ಮತಗಳನ್ನು ಪಡೆದರೆ, ಜೆಡಿಎಸ್‌ನ ಡಾ| ಸುನೀತಾ ಚವ್ಹಾಣ 43,070 ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಇದರಿಂದಾಗಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ಕ್ಷೇತ್ರದಲ್ಲೂ ಬಿಜೆಪಿ 36,330 ಮುನ್ನಡೆ ಪಡೆಯುವ ಮೂಲಕ ಮೈತ್ರಿಯನ್ನು ವಿರೋಧಿಸಿರುವುದು ಸ್ಪಷ್ಟವಾಗಿದೆ.

Advertisement

ಇನ್ನು ಗೃಹ ಸಚಿವ ಎಂ.ಬಿ. ಪಾಟೀಲ ಅವರನ್ನು ಸತತವಾಗಿ ಗೆಲ್ಲಿಸುತ್ತಲೇ ಇರುವ ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 77,176 ಮತಗಳನ್ನು ಪಡೆದರೆ, ಹತ್ತಿರದ ಸ್ಪರ್ಧಿ ಜೆಡಿಎಸ್‌ನ ಡಾ| ಸುನೀತಾ ಚವ್ಹಾಣ 47,487 ಮತ ಮಾತ್ರ ಪಡೆಯಲು ಸಾಧ್ಯವಾಗಿದೆ. ಇದರಿಂದಾಗಿ ಸಹಜವಾಗಿ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಈ ಕ್ಷೇತ್ರದಲ್ಲಿ ಬಿಜೆಪಿ 29,689 ಮುನ್ನಡೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ.

ಇನ್ನು ತಮ್ಮನ್ನು ಬಹಿರಂಗವಾಗಿ ವಿರೋಧಿಸುತ್ತಲೇ ಬಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರತಿನಿಧಿಸುತ್ತಿರುವ ವಿಜಯಪುರ ನಗರಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 75,083 ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಡಾ| ಸುನೀತಾ ಚವ್ಹಾಣ ಅವರು 58,530 ಮತಗಳನ್ನು ಪಡೆದಿದ್ದರೂ ಜಿಗಜಿಣಗಿ ಅವರು ಇಲ್ಲಿಯೂ 16,553 ಮತಗಳ ಮುನ್ನಡೆ ಪಡೆದ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.

ಮೈತ್ರಿ ಪಕ್ಷಗಳ ಜೆಡಿಎಸ್‌ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಅವರ ಪತಿ ದೇವಾನಂದ ಚವ್ಹಾಣ ಪ್ರತಿನಿಧಿಸುತ್ತಿರುವ ವಿಧಾನಸಭೆ ಕ್ಷೇತ್ರ ನಾಗಠಾಣ. ಈ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ 34,334 ಮತಗಳ ಮುನ್ನಡೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಈ ಕ್ಷೇತ್ರದಲ್ಲಿ 92,585 ಮತಗಳನ್ನು ಪಡೆದರೆ, ಜೆಡಿಎಸ್‌ ಇಲ್ಲಿ ಪಡೆದಿರುವುದು ಕೇವಲ 58,251 ಮತಗಳನ್ನು ಮಾತ್ರ.

ಶಾಸಕ ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್‌ ಪಕ್ಷದಿಂದ ಎರಡು ಬಾರಿ ವಿಧಾನಸಭೆ ಪ್ರವೇಶಿಸಿರುವ ಇಂಡಿ ವಿಧಾನಸಭೆ ಕ್ಷೇತ್ರದಲ್ಲೂ ಬಿಜೆಪಿ ಭರ್ಜರಿ ಮುನ್ನಡೆ ಪಡೆದಿದೆ. ರಮೇಶ ಜಿಗಜಿಣಗಿ ಈ ಕ್ಷೇತ್ರದಲ್ಲಿ 89,394 ಮತಗಳನ್ನು ಪಡೆದರೆ, ಜೆಡಿಎಸ್‌ನ ಡಾ| ಸುನೀತಾ ಚವ್ಹಾಣ 43,310 ಮತಗಳನ್ನು ಮಾತ್ರ ಪಡೆಯುವ ಮೂಲಕ 46,084 ಮತಗಳ ಹಿನ್ನಡೆ ಅನುಭವಿಸಿ, ವಿಜೇತ ಅಭ್ಯರ್ಥಿಗೆ ಭಾರಿ ಮುನ್ನಡೆ ಪಡೆಯುವಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ಪ್ರತಿನಿಧಿಸುವ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲೂ ಬಿಜೆಪಿ ಭರ್ಜರಿ ಮುನ್ನಡೆ ಪಡೆದಿದೆ. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು 79,848 ಪಡೆದಿರುವ ಈ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಡಾ| ಸುನೀತಾ ಚವ್ಹಾಣಗೆ 44,099 ಮತಗಳು ಮಾತ್ರ ಬಿದ್ದಿವೆ. ಪರಿಣಾಮ ಜಿಗಜಿಣಗಿ ಹ್ಯಾಟ್ರಿಕ್‌ ಗೆಲುವಿನಲ್ಲಿ ಈ ಕ್ಷೇತ್ರದಲ್ಲಿ ಸಿಕ್ಕ 35,749 ಮತಗಳ ಮುನ್ನಡೆಯೂ ಸಹಕಾರಿ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next