ತಾಳಿಕೋಟೆ: ತಾಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮೂಕಿಹಾಳ ದರ್ಗಾದ ಬಳಿ ಇರುವ ನಿವಾಸಿಗಳಿಗೆ ನದಿಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು ಕಲುಷಿತವಾಗಿದ್ದು ಅದೇ ನೀರನ್ನೇ ಕುಡಿದು ಆಸ್ಪತ್ರೆಗಳಿಗೆ ದಾಖಲಾಗುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಗಂಭೀರ ಸಮಸ್ಯೆ ಇದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಇದೊಂದು ಸಮಸ್ಯೆಯೇ ಅಲ್ಲವೆಂಬಂತೆ ಕಣ್ಣು ಮುಚ್ಚಿ ಕೂತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ದರ್ಗಾದ ನಿವಾಸಿಗಳಾದ ರಿಯಾನ್ ಲಾಹೋರಿ, ಜಲಾಲಬಿ ಜಮಾದಾರ, ಶಾಂತಮ್ಮ ಭಜಂತ್ರಿ, ಹುಸೇನಮಾ ಜಮಾದಾರ ಹೇಳುವ ಹಾಗೆ, ಮೂಕಿಹಾಳ ದರ್ಗಾದ ಬಳಿ ಇರುವ ನಾವು ಅದ್ಯಾವ ಪಾಪ ಮಾಡಿದ್ದೇವೋ ಏನೋ ನಮ್ಮ ಸಮಸ್ಯೆ ಯಾರೊಬ್ಬರಿಗೂ ಅರ್ಥವಾಗುತ್ತಿಲ್ಲ. ಬಹುಹಳ್ಳಿ ಕುಡಿವ ನೀರಿನ ಯೋಜನೆಯಿಂದ ಪೂರೈಕೆಯಾಗುವ ನದಿ ನೀರಿನಲ್ಲಿ ಕ್ರೀಮಿ, ಕೀಟ, ಕಸ, ಕಡ್ಡಿ, ನಾಯಿ, ಕುರಿ ಕೂದಲುಗಳು, ಬಾಲ ಹುಳುಗಳು ಬರುತ್ತಿವೆ. ಅಲ್ಲದೇ ನೀರಿನ ಬಣ್ಣ ತಿಳಿ ಹಳದಿಯಾಗಿದ್ದು ಇದೇ ನೀರನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಬೇಕಾಗಿದೆ. ಅಲ್ಲದೇ ಈ ನೀರು ತುಂಬಾ ವಾಸನೆಯುಕ್ತವಾಗಿದ್ದು ಕುಡಿಯಲು ಅಸಾಧ್ಯವಾಗಿದೆ ಎಂದು ದೂರಿದರು.
ನದಿಯಿಂದ ಪೂರೈಕೆಯಾದ ನೀರು ಕುಡಿದರೆ ವಾಂತಿಭೇದಿ ಆರಂಭವಾಗುತ್ತದೆ. ಬಡವರು ಸರಕಾರಿ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ನಿವಾಸಿಗಳಾದ ರಜಾಕ್ ಲಾಹೋರಿ, ಬಸಮ್ಮ ಹಡಪದ, ಸುಲ್ತಾನಬಿ ಲಾವೋರಿ, ಸಲೀಮಾ ಮುಲ್ಲಾ, ಚನ್ನಮ್ಮ ದ್ಯಾಮಗೊಂಡ, ಚನ್ನಮ್ಮ ಅಮ್ಮಾಪುರ, ಮಾಬೂಬಿ ಅಮೀನಗಡ ಮತ್ತಿತರು ಆರೋಪಿಸಿದರು.
ಮೂಕಿಹಾಳದ ದರ್ಗಾ ದಲ್ಲಿ 80ಕ್ಕೂ ಹೆಚ್ಚು ಮನೆಗಳಿವೆ. ಹತ್ತು ಬೋರ್‌ವೆಲ್ ಕೊರೆಯಲಾಗಿದ್ದು ಒಂದರಲ್ಲೂ ನೀರು ಬಂದಿಲ್ಲ. ಗಬ್ಬು ವಾಸನೆ ನೀರು ಕುಡಿಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಶುದ್ಧ ಕುಡಿವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಸದ್ಯಕ್ಕೆ ದರ್ಗಾದಿಂದ ಊರಲ್ಲಿರುವ ಎರಡು ಕಿ.ಮೀ. ಅಂತರದಲ್ಲಿರುವ ತೆರೆದ ಬಾವಿಯ ನೀರನ್ನು ತಂದು ದಾಹ ತೀರಿಸಿಕೊಳ್ಳುವ ಕಷ್ಟ ಇದೆ. ಬಾವೂರ ಗ್ರಾಮದಲ್ಲಿ ನೀರಿನ ಸಂಗ್ರಹ ಇದ್ದು ಅಲ್ಲಿ ಬೋರ್ ಕೊರೆದು ಪೈಪ್‌ಲೈನ್ ಮಾಡಿಸಿ ದರ್ಗಾಕ್ಕೆ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಿಡಿಒ ಹೇಳಬೇಕಂತೆ: ರಾಡಿ ನೀರು ಪೂರೈಕೆಯಾಗುತ್ತಿದೆ ಎಂದು ಪಿಡಿಒ ಬಂದು ಹೇಳಿದರೆ ನಾನು ಗಮನಿಸುತ್ತೇನೆ. ಜನರು ಹೇಳುವುದು ಮುಖ್ಯವಲ್ಲ. ನಮಗೆ ಪಿಡಿಒ ಹೇಳುವುದೇ ಮುಖ್ಯ. ಅವರು ಅಲ್ಲಿ ಸಮಸ್ಯೆ ಇದೆ ಎಂದು ಇಲ್ಲಿವರೆಗೂ ಹೇಳಿಲ್ಲ ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ತಿಳಿಸಿದರು.
ಮೂಕಿಹಾಳದ ದರ್ಗಾದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನುವ ಬಗ್ಗೆ ಪಿಡಿಒ ಏನೂ ಹೇಳಿಲ್ಲ.ಅವು ಹೇಳಿದ್ರೆ ಸಮಸ್ಯೆ ಗಮನಿಸ್ತಿನಿ. ಮೂಕಿಹಾಳದ ಅಧ್ಯಕ್ಷರು ನಮ್ಮ ಜೊತೆ ಇದ್ದಾರೆ. ಅವರೇನು ಅಲ್ಲಿ ಸಮಸ್ಯೆ ಇದೆ ಎಂದು ಹೇಳಿಲ್ಲ. ಪಿಡಿಒ ನಮಗೆ ಮುಖ್ಯ. ಅವರು ಬಂದು ಎಇಇ, ಇಒ ಅವರಿಗೆ ಹೇಳಿದ್ರೆ ಗಮನಿಸಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ ತಹಶೀಲ್ದಾರ್.
ಬಪ್ಪರಗಿ ಕೆರೆಯಲ್ಲಿ ಸಂಗ್ರಹವಾಗಿರುವ ನೀರನ್ನು ಮೂಕಿಹಾಳದ ಟ್ಯಾಂಕರ್‌ಗೆ ಪೂರೈಸಲಾಗುತ್ತದೆ. ನೀರು ಟ್ಯಾಂಕರ್‌ಗೆ ತುಂಬಿಸುವ ಜವಾಬ್ದಾರಿ ಆರ್‌ಡಬ್ಲೂಎಸ್‌ನವರದ್ದು. ನೀರು ಹಳದಿ ಬಣ್ಣದ್ದಾಗಿದೆ ಎಂಬುದರ ಬಗ್ಗೆ ಸಂಬಂಧಿಸಿದ ಆರ್‌ಡಬ್ಲೂಎಸ್ ಇಲಾಖೆಯವರ ಗಮನಕ್ಕೆ ತಂದಿದ್ದೇನೆ. ಅವರು ಕುಡಿಯಲು ಯೋಗ್ಯವಾಗಿದೆ ಎಂದು ತಿಳಿಸಿದ್ದರಿಂದ ನೀರು ಪೂರೈಸಲಾಗುತ್ತಿದೆ. ದರ್ಗಾದ ಬಳಿ ಅಂತಹ ಗಂಭೀರ ಸಮಸ್ಯೆ ಏನೂ ಇಲ್ಲ. ಅಲ್ಲದೇ ಕಲುಷಿತ ನೀರು ಪೂರೈಕೆಯಾಗುವುದಿಲ್ಲ.
•
ಸಾವಿತ್ರಿ ಬಿರಾದಾರ ಮೂಕಿಹಾಳ ಪಿಡಿಒ