Advertisement
ನಗರದ ಸೈನಿಕ ಶಾಲೆಯಲ್ಲಿ ಬಹುತೇಕ ಜಿಲ್ಲೆಯ ಪ್ರಮುಖ ಎಲ್ಲ ಚುನಾವಣೆಗಳ ಮತ ಎಣಿಕೆ ನಡೆಯುತ್ತವೆ. ಹಿಂದೆಲ್ಲ ಮತ ಎಣಿಕೆ ದಿನ ಬೆಳಗಿನಿಂದಲೇ ವಿವಿಧ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಹತ್ತಾರು ಸಾವಿರ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸುತ್ತಿದ್ದರು. ಆದರೆ ಗುರುವಾರ ನಡೆದ ಲೋಕಸಭೆ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಮಧ್ಯಾಹ್ನ 12 ಗಂಟೆವರೆಗೂ ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಕಾಣಿಸಿಕೊಳ್ಳದೇ ಅಚ್ಚರಿ ಮೂಡಿಸಿದ್ದರು.
Related Articles
Advertisement
ಮತ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಯಲ್ಲಿ ಇರುವ ಜೊತೆಗೆ, ಪೊಲೀಸ್ ಬಿಗಿ ಬಂದೋಬಸ್ತ್ ಕಾರಣಕ್ಕೆ ಸಂಭ್ರಮದಲ್ಲಿದರೂ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸದ್ದು ಕೇಳಿಸಲು ಅವಕಾಶ ದೊರೆಯಲಿಲ್ಲ. ಆದರೆ ಜಿಗಜಿಣಗಿ ಅವರು ವಿಜಯ ಸಾಧಿಸುತ್ತಲೇ ಬಿಜೆಪಿ ಕೆಲ ನಾಯಕರು ಗುಲಾಲಿನೊಂದಿಗೆ ಕೇಂದ್ರಕ್ಕೆ ಆಗಮಿಸಿ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.
ಮತ ಎಣಿಕೆ ಅರ್ಧ ಪೂರ್ಣಗೊಳ್ಳುವ ಹಂತದಲ್ಲಿ ಮತ ಎಣಿಕೆ ಕೇಂದ್ರದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಒಬ್ಬರೇ ಬೇಸರದ ಮುಖ ಮಾಡಿಕೊಂಡು ಕುಳಿತಿದ್ದರು. ಸೋಲು ಖಚಿತವಾಗುತ್ತಲೇ ಒಂಟಿಯಾಗಿಯೇ ಎಣಿಕೆ ಕೇಂದ್ರದಿಂದ ಹೊರ ನಡೆದರು.
ಆದರೆ ವಿಜೇತ ಅಭ್ಯರ್ಥಿ-ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮಾತ್ರ ಮತ ಎಣಿಕೆ ಪೂರ್ಣಗೊಂಡ ಬಳಿಕವೂ ಪಕ್ಷದ ಶಾಸಕರಾದ ಆರುಣ ಶಹಾಪುರ, ಸೋಮನಗೌಡ ಪಾಟೕಲ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ವಿಜುಗೌಡ ಪಾಟೀಲ ಸೇರಿದಂತೆ ಇತರೆ ಗಣ್ಯರೊಂದಿಗೆ ಮತ ಎಣಿಕೆ ಕೇಂದ್ರದಲ್ಲೇ ಠಿಕಾಣಿ ಹೂಡಿದ್ದರು.
ಗೆಲುವಿನ ಸಂಭ್ರಮದಲ್ಲಿದ್ದ ಅವರು ಮಾಧ್ಯಮ ಕೇಂದ್ರಕ್ಕೆ ಬಂದು ವಿಜಯದ ಸಂಭ್ರಮ ಹಂಚಿಕೊಂಡರು. ನಂತರ ಸುಮಾರು ಒಂದು ಗಂಟೆ ಕಾಲ ತಮ್ಮ ಪಕ್ಷದ ಗಣ್ಯರೊಂದಿಗೆ ಮಾಧ್ಯಮ ಕೇಂದ್ರದ ಹೊರ ಭಾಗದ ಮೆಟ್ಟಿಲುಗಳ ಮೇಲೆ ಕುಳಿತು ದೇಶದ ಚುನಾವಣೆ ಫಲಿತಾಂಶದ ಕುರಿತು ಹರಟಿದರು.
ಇದಾದ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ಬಂದ ರಮೇಶ ಜಿಗಜಿಣಗಿ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮ ಆಚರಿಸಿದ ಬಿಜೆಪಿ ಕಾರ್ಯಕರ್ತರು, ನಂತರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ದರು. ಮಹಾತ್ಮ ಗಾಂಧೀಜಿ ವೃತ್ತದ ಮಾರ್ಗದಲ್ಲಿರುವ ಚುನಾವಣಾ ಪ್ರಚಾರ ಕಚೇರಿ, ನಂತರ ಭೂತನಾಳ ಕೆರೆ ಬಳಿ ಇರುವ ತಮ್ಮ ತೋಟದ ಮನೆಯ ಆವರಣದಲ್ಲಿ ಕಾರ್ಯಕರ್ತರೊಂದಿಗೆ ಪರಸ್ಪರ ಬಣ್ಣ ಎರಚಿಕೊಂಡು, ಸಿಹಿಸಿ ಹಂಚಿ ಸಂಭ್ರಮಿಸಿದರು.
ಮತ ಎಣಿಕೆ ಕೇಂದ್ರದಲ್ಲೂ ಏನೇನೋ ನೆಪ ಹೇಳಿಕೊಂಡು, ಕೊರಳಲ್ಲಿ ಯಾರ್ಯಾರದೋ ಪಾಸ್ ಹಾಕಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಹಾಗೂ ಮಾಧ್ಯಮ ಕೇಂದ್ರಕ್ಕೆ ನುಗ್ಗುತ್ತಿದ್ದ ರಾಜಕೀಯ ಕಾರ್ಯಕರ್ತರು ಈ ಬಾರಿ ಮತ ಎಣಿಕೆ ಕೇಂದ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿದ್ದ ನಾಯಕರು ಹಾಗೂ ಏಜೆಂಟರನ್ನು ಬಿಟ್ಟರೆ ಇಡಿ ಮತ ಎಣಿಕೆ ಕೇಂದ್ರ ನಿರುಮ್ಮಳ ಸ್ಥಿತಿಯಲ್ಲಿ ಪ್ರಶಾಂತವಾಗಿತ್ತು.