ಸಿಂದಗಿ: ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ ಅವರು ಮನಸ್ಸು ಮಾಡಿದರೇ ವಿಜಯಪುರ ಜಿಲ್ಲೆ ಅಭಿವೃದ್ಧಿ ಮಾಡಬಹುದಿತ್ತು ಆದರೆ ಆ ಗೋಜಿಗೆ ಹೋಗಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು. ಪಟ್ಟಣದ ವಿಜಯಪುರ ರಸ್ತೆಯ ಮಾಂಗಲ್ಯ ಭವನದಲ್ಲಿ ನಡೆದ ವಿಜಯಪುರ ಲೋಕಸಭಾ ಚುಣಾವಣೆಯ ಮೈತ್ರಿ ಪಕ್ಷದ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಪ್ರಚಾರಾರ್ಥ ನಡೆದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆ ಬರದಿಂದ ಪ್ರತಿ ವರ್ಷ ಬಳಲುತ್ತಿದ್ದರು ಕೇಂದ್ರದ ನೀರು ಮತ್ತು ನೈರ್ಮಲ್ಯ ಇಲಾಖೆ ಸಚಿವ ರಮೇಶ ಜಿಗಜಿಣಗಿ ಅವರು ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಸೊಲ್ಲಾಪುರದಿಂದ ವಿಜಯಪುರ ಎನ್.ಎಚ್
.13 ರಸ್ತೆಯನ್ನು ನಾನು ಮಾಡಿದ್ದೇನೆ ಎಂದು ಹೇಳುತ್ತಿರುವ
ಸಚಿವರು ಒಮ್ಮೇ ಆಲೋಚಿಸಲಿ, ಅದು ಕಳೆದ ಯುಪಿಎ ಸರ್ಕಾರ ಮಂಜೂರಾತಿ ಪಡೆದುಕೊಂಡು 4 ಬಾರಿ ಟೆಂಡರ್ ಪ್ರಕ್ರಿಯೆಗೊಂಡಿದ್ದು ಅದನ್ನು ನಾನು ಮಾಡಿದ್ದೇನೆ ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಅನೇಕ ಯೋಜನೆಗಳು ಹಿಂದಿನ ಯುಪಿಎ ಸರ್ಕಾರದಲ್ಲಿ ಅನುಮೋದನೆಗೊಂಡಿದ್ದವು, ಅವುಗಳನ್ನು ಮುಂದುವರಿಸಿಕೊಂಡು ಹೋದರೆ ಅದು ನಿಮಗೆ ಸಲ್ಲುವ ಶ್ರೇಯಸ್ಸಲ್ಲ. ವಿಜಯಪುರ ತಾಲೂಕಿನ ಮಕಣಾಪುರ ಗ್ರಾಮವನ್ನು ದತ್ತು ತಗೆದುಕೊಂಡು 5 ಕೋಟಿ ರೂ. ವೆಚ್ಚ ಮಾಡಿದ್ದರು ಕೂಡಾ ಆ ಗ್ರಾಮ ಅಭಿವೃದ್ಧಿಯಾಗಿಲ್ಲ. ನಾನು ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ 15 ಸಾವಿರ ಕೋಟಿಗಳ ರೂ. ನೀರಾವರಿ ಯೋಜನೆಯನ್ನು ಮಾಡಿದ್ದೇನೆ. ಅದರಿಂದ ಲಕ್ಷಾಂತರ ಎಕರೆ ಭೂ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ನಾವು ಮೈತ್ರಿಗೆ ಒಪ್ಪಿದ್ದು ಅಭಿವೃದ್ಧಿಗೆ ಹೊರತು ಅಧಿಕಾರಕ್ಕೆ ಅಲ್ಲ. ಈ ಬಾರಿ ಜೆಡಿಎಸ್‌ನ ಡಾ| ಸುನೀತಾ ಚವ್ಹಾಣ ಅವರಿಗೆ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ, ಪಶು ಸಂಗೋಪನಾ ಸಚಿವ ವೆಂಕಟಗೌಡ ನಾಡಗೌಡ, ಮಾಜಿ ಸಚಿವ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎಂ.ಎನ್. ಕೋನರೆಡ್ಡಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜೆಡಿಎಸ್ ಮುಖಂಡ ಅಶೋಕ ಮನಗೂಳಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿ, ಬಿಜೆಪಿ ಸೈನಿಕರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷದಲ್ಲಿ ಮಾಡಿದ್ದೇನು? ಕೇವಲ ಮಾತುಗಳೆ ಅವರ ಸಾಧನೆ. ರಾಜ್ಯ ಸರ್ಕಾರ ಸುಮಾರು 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ ಇದು ಮೈತ್ರಿ ಸರ್ಕಾರದ ಐತಿಹಾಸಿಕ ಸಾಧನೆಯಾಗಿದೆ. ಕೇಂದ್ರ ಸರ್ಕಾರ ಬಡವರ, ಹಿಂದುಳಿದವರ ಪರವಾಗಿರುವ ಸರ್ಕಾರ ಅಲ್ಲ ಕೇವಲ ಶ್ರೀಮಂತರ
ಪರವಾಗಿರುವ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಅಭ್ಯರ್ಥಿ ಡಾ| ಸುನೀತಾ ಚವ್ಹಾಣ, ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಮಲ್ಲಣ್ಣ ಸಾಲಿ, ವಿಠ್ಠಲ ಕಟಕದೊಂಡ, ಅಶೋಕ ವಾರದ, ಆರ್.ಕೆ. ಪಾಟೀಲ, ಚನ್ನು ವಾರದ, ಸಿದ್ದು
ಪಾಟೀಲ, ತಾಪಂ ಅಧ್ಯಕ್ಷೆ ಪ್ರಭಾವತಿ ಶಿರಸಗಿ, ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ, ಕಾಂತಾ ನಾಯಕ, ಶೈಲಜಾ ಸ್ಥಾವರಮಠ,
ಶರಣಪ್ಪ ವಾರದ, ಶಿವು ಹತ್ತಿ, ಎಂ.ಎ. ಖತೀಬ, ಮುಸ್ತಾಕ್ ಮುಲ್ಲಾ, ಪ್ರಭು ವಾಲೀಕಾರ, ಯಾಕೂಬ ನಾಟೀಕಾರ, ಗೊಲ್ಲಾಳಪ್ಪಗೌಡ ಪಾಟೀಲ, ಕುಮಾರ ದೇಸಾಯಿ, ಅರವಿಂದ ಹಂಗರಗಿ, ನೂರಹ್ಮದ್ ಅತ್ತಾರ, ಸಿದ್ದಣ್ಣ ಚೌಧರಿ, ಮಲ್ಲಿಕಾರ್ಜುನ ಶಂಬೇವಾಡ, ಭೀಮನಗೌಡ ಬಿರಾದಾರ, ಮಹೇಶ ಮನಗೂಳಿ ಕಾಂತು ಒಡೆಯರ ಸೇರಿದಂತೆ ತಾಲೂಕಿನ ಮೈತ್ರಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.