Advertisement

ವ್ಯವಸ್ಥಿತ ಚುನಾವಣೆಗೆ ಸನ್ನದ್ಧರಾಗಲು ಸೂಚನೆ

11:51 AM Apr 15, 2019 | Naveen |

ವಿಜಯಪುರ: ರಾಷ್ಟ್ರೀಯ ಹಬ್ಬದಂತಿರುವ ಪ್ರಸಕ್ತ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿ-ಸಿಬ್ಬಂದಿಗಳು ತಮ್ಮ ಜವಾಬ್ದಾರಿಗಳ ಬಗ್ಗೆ ಅರಿತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಯಲ್ಲಿ ಸರ್ವ ಸನ್ನದ್ಧತೆಯಿಂದ ವ್ಯವಸ್ಥಿತ ರೀತಿಯಲ್ಲಿ ಚುನಾವಣೆ ನಡೆಸಲು ಮುಂದಾಗಬೇಕು ಎಂದು ವಿಜಯಪುರ ಲೋಕಸಭಾ ಚುನಾವಣೆ ಸಾಮಾನ್ಯ ವೀಕ್ಷಕ ಅಶೋಕ ಶಹಾ ಸೂಚಿಸಿದರು.

Advertisement

ರವಿವಾರ ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದ ಸಭಾಂಗಣದಲ್ಲಿ ಸ್ಥಾಪಿಸಲಾದ ಭದ್ರತಾ ಕೊಠಡಿಗಳ ಎಲ್ಲ ವ್ಯವಸ್ಥೆ ಪರಿಶೀಲಿಸಿದ ನಂತರ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‌ರು, ಪಿಬಿ ಹಾಗೂ ಇಡಿಸಿ ನೋಡಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾರ್ವತ್ರಿಕ ಲೋಕಸಭಾ ಚುನಾವಣೆ ರಾಷ್ಟ್ರೀಯ ಹಬ್ಬದಂತಿದೆ. ಚುನಾವಣೆಗೆ ನಿಯೋಜಿತ ಪ್ರತಿಯೊಬ್ಬ ಅಧಿಕಾರಿ-ಸಿಬ್ಬಂದಿ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ವಿಶೇಷವಾಗಿ ಸರಪಣಿ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಚುನಾವಣೆಯ ವಿವಿಧ ಕರ್ತವ್ಯಗಳಿಗೆ ನೇಮಕಗೊಂಡಿರುವ ಸಿಬ್ಬಂದಿಗಳ ಪರಸ್ಪರ ಪರಿಚಯ, ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ತಮಗೆ ನೀಡಲಾಗಿರುವ ಕರ್ತವ್ಯದ ಜವಾಬ್ದಾರಿ ಸೇರಿದಂತೆ ಪಾರದರ್ಶಕ ಚುನಾವಣೆ ಸಂದರ್ಭದಲ್ಲಿ ಮಾಡಬೇಕಾದ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಪೂರ್ವಭಾವಿ ಸಿದ್ಧತೆ ಪರೀಕ್ಷಿಸಿಕೊಂಡು ಮಾಹಿತಿ ಪಡೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಚುನಾವಣಾ ಸಂದರ್ಭದಲ್ಲಿ ಕಡ್ಡಾಯವಾಗಿ ಅಣುಕು ಮತದಾನ ಯಶಸ್ವಿಗೊಳಿಸಬೇಕು. ಚುನಾವಣೆ ಮುಕ್ತಾಯ ಆಗುವವರೆಗೆ ಮುಖ್ಯ ಚುನಾವಣಾ ಪ್ರಕ್ರಿಯೆಗಳು ಯಾವುದೇ ಲೋಪವಿಲ್ಲದೇ ನಡೆಯುವಂತೆ ನೋಡಿಕೊಳ್ಳಬೇಕು. ಚುನಾವಣಾ ಕರ್ತವ್ಯಕ್ಕೆ ನೇಮಿಸಲಾಗಿರುವ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಸಕ್ರೀಯವಾಗಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಬೇಕು. ಚುನಾವಣೆಗೆ ನೇಮಿಸಲಾದ ಸೆಕ್ಟರ್‌ ಅಧಿಕಾರಿಗಳ, ಮಾಸ್ಟರ್‌
ಟ್ರೇನರ್‌ಗಳ ಹಾಗೂ ವಾಹನ ಚಾಲಕರ ಕಡ್ಡಾಯವಾಗಿ ದೂರವಾಣಿ ಸಂಖ್ಯೆಯನ್ನು ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳು ಇರಿಸಿಕೊಳ್ಳಬೇಕು. ಮತಯಂತ್ರ ಕೆಟ್ಟು ಹೋದ ಸಂದರ್ಭದಲ್ಲಿ 25 ನಿಮಿಷದಲ್ಲಿ ಬದಲಾಯಿಸಿ ಚುನಾವನಾ ಪ್ರಕ್ರಿಯೆ ಯಾವುದೇ ಲೋಪವಿಲ್ಲದೇ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಇದೇ ಸಂದರ್ಭದಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ವೀಕ್ಷಕರು ಕಂಟ್ರೋಲ್‌ ಯೂನಿಟ್‌, ಬ್ಯಾಲೆಟ್‌ ಯೂನಿಟ್‌, ವಿವಿ ಪ್ಯಾಟ್‌ ಕಾರ್ಯನಿರ್ವಹಣೆ ಕುರಿತಂತೆ ಸಮಗ್ರ ಮಾಹಿತಿ ಪಡೆಯಬೇಕು. ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಯಾರೆಲ್ಲ ಸಿಬ್ಬಂದಿಗಳು ಪ್ರವೇಶ ಮಾಡಬಹುದೆಂಬುದರ ಬಗ್ಗೆ ಮಾಹಿತಿ ಪಡೆದ ಅವರು, ಚುನಾವಣೆ ಪಾರದರ್ಶಕ ರೀತಿಯಲ್ಲಿ ಹಾಗೂ ಶಿಸ್ತುಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾ ಚುನಾವಣಾ ಅಧಿಕಾರಿ ಎಂ.ಕನಗವಲ್ಲಿ ಮಾತನಾಡಿ, ಮತದಾರರ ಗುರುತಿನ ಚೀಟಿ ಹಾಗೂ ಮತದಾರರ ಮಾರ್ಗದರ್ಶಿ ಕೈಪಿಡಿಗಳ ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಅಣುಕು ಮತದಾನಕ್ಕೆ ಸಂಬಂಧಿಸಿದಂತೆ ಹಾಗೂ ತರಬೇತಿಯಲ್ಲಿ ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಕಾರ್ಯ ನಿರ್ವಹಿಸಬೇಕು. ಸಹಾಯಕ ಚುನಾವಣಾಧಿಕಾರಿಗಳು
ಪ್ರತಿಯೊಬ್ಬ ಸಿಬ್ಬಂದಿಗಳೊಂದಿಗೆ ಪರಸ್ಪರ ಸಲಹೆ ವಿನಿಮಯ ಮಾಡಿಕೊಳ್ಳಬೇಕು. ಸಮಸ್ಯೆಗಳು ಕಂಡು ಬಂದಲ್ಲಿ ನಿವಾರಣೆಗೆ ಅಗತ್ಯ ಮಾರ್ಗದರ್ಶನ ನೀಡಿ, ಸಹಕರಿಸಬೇಕು. ಸೆಕ್ಟರ್‌ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ವಾಹನಕ್ಕೆ ಜಿಪಿಎಸ್‌ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ವಿವಿಧ ಇಲಾಖೆಗಳ 9500 ಸಿಬ್ಬಂದಿಗಳು ಮತದಾನದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರು ಮತ ಚಲಾಯಿಸಲು ಅನುಕೂಲವಾಗುವಂತೆ ಪಿಬಿ ಹಾಗೂ ಇಡಿಸಿ ಹಂಚಿಸುವ ಜವಾಬ್ದಾರಿಯನ್ನು ಆಯಾ ನೋಡಲ್‌ ಅಧಿಕಾರಿಗಳು ವಹಿಸಿಕೊಳ್ಳಬೇಕು. ಈ ವಿಷಯದಲ್ಲಿ ಸಮಸ್ಯೆಯಾದಲ್ಲಿ ನೋಡಲ್‌ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಮಸ್ಟರಿಂಗ್‌ ಹಾಗೂ ಡಿ-ಮಸ್ಟರಿಂಗ್‌ ಕುರಿತ ತರಬೇತಿ ಪರಿಣಾಮಕಾರಿ ತರಬೇತಿ ನೀಡಬೇಕು. ಮಸ್ಟರಿಂಗ್‌ ಹಾಗೂ ಡಿ-ಮಸ್ಟರಿಂಗ್‌ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು. ಪ್ರತಿ ಮತಗಟ್ಟೆ
ಸಿಬ್ಬಂದಿಗಳಿಗೆ ಈಗಾಗಲೇ ಊಟ-ಉಪಹಾರ, ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಪಟ್ಟಂತೆ ಅವಶ್ಯಕ ಕ್ರಮ ಸಹ ಕೈಗೊಳ್ಳಲಾಗಿದೆ. ಕಂಟ್ರೋಲ್‌ ಯೂನಿಟ್‌, ಬ್ಯಾಲೆಟ್‌ ಯೂನಿಟ್‌, ವಿವಿ ಪ್ಯಾಟ್‌ ಗೆ ಸಂಬಂಧಪಟ್ಟಂತೆ ಯಾವುದೇ ಲೋಪ ಕಂಡು
ಬಂದಲ್ಲಿ ತಕ್ಷಣ ಮಾಸ್ಟರ್‌ ರಜಿಸ್ಟರ್‌ದಲ್ಲಿ ನೋಂದಣಿ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿ ಕಾರಿ ಎಚ್‌.ಪ್ರಸನ್ನ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‌ರು, ಪಿಬಿ ಮತ್ತು ಇಡಿಸಿ ನೋಡಲ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next