Advertisement

ಎಚ್ಡಿಕೆ ತಮ್ಮ ಮಗನನ್ನು ಸೇನೆಗೆ ಕಳಿಸಲಿ

01:02 PM Apr 14, 2019 | Naveen |

ವಿಜಯಪುರ: ದೇಶದ ರಕ್ಷಣೆಗಾಗಿ ಸೇನೆಗೆ ಸೇರುವವರು ಹೊಟ್ಟೆಗೆ ಹಿಟ್ಟಿಲ್ಲದೇ ಸೇರುತ್ತಾರೆ ಎಂದು ಜವಾಬ್ದಾರಿ ಸ್ಥಾನದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಭಾರತೀಯ ಸೇನೆಯನ್ನು ಅಪಮಾನ ಮಾಡಿರುವ ಅವರು ಸೇನೆ ಬಗ್ಗೆ ಮಾತನಾಡುವ ಬದಲು ತಮ್ಮ ಮಗನನ್ನು ಸೇನೆಗೆ ಕಳಿಸಿ ನೋಡಲಿ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಟೀಕಾ ಪ್ರಹಾರ ನಡೆಸಿದರು.

Advertisement

ಶನಿವಾರ ಸಂಜೆ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇನೆ ಕುರಿತು ಮಾತನಾಡಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಈ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಮೇ 23ರ ಬಳಿಕ ಸಿಎಂ ಪುತ್ರ ನಿರುದ್ಯೋಗಿ ಆಗೋದು ಖಚಿತ
ಎಂದು ಗೇಲಿ ಮಾಡಿದರು.

ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಬಂದ ಪರಿಸ್ಥಿತಿ ಈ ಬಾರಿ
ಮೋದಿ ಅವರಿಗೂ ಬರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ
ಟೀಕೆ ಮಾಡುವ ಮೊದಲು ಮೈಸೂರಲ್ಲಿ ತಮಗೆ ಎಂಥ ದುಸ್ಥಿತಿ ಬಂದಿದೆ
ಎಂಬುದನ್ನು ಆರಿಯಲಿ. ತವರಿನಲ್ಲಿ ಗೆಲ್ಲಲಾಗದ ಸಿದ್ದರಾಮಯ್ಯ ಉತ್ತರಕ್ಕೆ ಓಡಿ ಬಂದಿದ್ದು, ಮೊದಲು ತಮ್ಮ ದುಸ್ಥಿತಿ ಆತ್ಮಾವಲೋಕನ
ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದರು.

ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗುತ್ತಲೇ ಭಾರತ ಪರಿವರ್ತನೆ ಹಾದಿಯಲ್ಲಿ ಸಾಗಿದೆ. ಪದೇ ಪದೇ ಭಾರತದ ಮೇಲೆ ಕಾಲು ಕೆರೆದು ಕದನಕ್ಕೆ ಪ್ರಚೋದನೆ ನೀಡುತ್ತಿದ್ದ ಭಯೋತ್ಪಾಕರ ಪೋಷಕ ರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ
ಪಾಠ ಕಲಿಸಿದ್ದಾರೆ. ಪುಲ್ವಾಮಾ ಘಟನೆ ಬಳಿಕ ಪಾಕಿಸ್ತಾನದ ಮೇಲೆ ಸರ್ಜಿಕಲ್‌ ದಾಳಿ ಮೂಲಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ, 185 ಉಗ್ರರನ್ನು ಹತ್ಯೆ ಮಾಡಿ ಭಾರತೀಯ ಸೇನೆ ಪ್ರತಿಕಾರ ತೀರಿಸಿಕೊಂಡಿದೆ. ಜೊತೆಗೆ ನೆರೆಯ ಶತ್ರು
ದೇಶಕ್ಕೂ ತಕ್ಕ ಪಾಠ ಕಲಿಸುವಲ್ಲಿ ಅವಕಾಶ ಸಿಕ್ಕಿದೆ. ದೇಶದ ಸೇನೆ ಸಾಹಸಕ್ಕೆ ದೇಶಕ್ಕೆ ದೇಶವೇ ಪ್ರಶಂಸೆ ವ್ಯಕ್ತಪಡಿಸಿದೆ.ಗಮನೀಯ ಅಂಶ ಎಂದರೆ ಮಿರಾಜ್‌ 2000 ವಿಮಾನದ ಪೈಲೆಟ್‌ ಆಗಿದ್ದವರು ಮಹಿಳೆ ಎಂಬುದು ವಿಶೇಷ ಎಂದು ಬಣ್ಣಿಸಿದರು.

ಕೆಲವರು ಸರ್ಜಿಕಲ್‌ ದಾಳಿ ಸಾಕ್ಷಿ ಕೇಳಿದರು. ಆದರೆ ವೈರಿಗಳ ವಿರುದ್ದ ಯುದ್ಧ ಮಾಡುವ ಸೈನಿಕರಿಗೆ ಶತ್ರು ದೇಶದ ಸೇನೆಯನ್ನು ಹತ್ತಿಕ್ಕುವುದು ಮುಖ್ಯವೇ ಹೊರತು, ಅಲ್ಲಿ ಸತ್ತವರ ಹೆಣಗಳು ಎಷ್ಟು ಎಂದು ಲೆಕ್ಕ ಹಾಕುತ್ತ ಕುಳಿತುಕೊಳ್ಳುವುದಲ್ಲ ಎಂದು ತಿರುಗೇಟು ನೀಡಿದರು. 2022ಕ್ಕೆ ಸ್ವಾಂತತ್ರ್ಯ ಬಂದು 75 ವರ್ಷಗಳಾದ ವೇಳೆ ನಮಗೆ ಹಲವು ಕನಸುಗಳಿವೆ. ಪ್ರತಿ ಮನೆಗೆ ವಿದ್ಯುತ್‌, ಇಂಟರ್‌ ನೆಟ್‌ ವ್ಯವಸ್ಥೆ, ಗ್ಯಾಸ್‌ ವ್ಯವಸ್ಥೆ ಸೇರಿ ಮೂಲಭೂತ
ಸೌಕರ್ಯ ಸಿಗಬೇಕೆಂಬ ಕನಸು ನನಸಾಗಲು ಮೋದಿ ಅವರೇ ಮತ್ತೂಮ್ಮೆ ಪ್ರಧಾನಿ ಆಗಬೇಕಿದೆ. ಇದಕ್ಕಾಗಿ ದೇಶದ ಜನ ಸಂಕಲ್ಪ ಮಾಡಿದ್ದು, ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಆಧಿಕಾರಕ್ಕೆ ಬರುವ ಜೊತೆಗೆ ದೇಶದ ಎಲ್ಲ ವರ್ಗದ ಜನರ ಆಶಯಗಳು ಈಡೇರುವುದು ಖಚಿತ. ಮೋದಿ ಸರ್ಕಾರ ಯೋಗ್ಯತೆ ಇದ್ದವರಿಗೆ ಬೆಲೆ ನೀಡಿದೆ. ಕನ್ನಡ ನಾಡಿನ ಸಾಲು ಮರದ ತಿಮ್ಮಕ್ಕನಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದ್ದೇ ಉದಾಹರಣೆ ಎಂದು
ವಿಶ್ಲೇಷಿಸಿದರು.

Advertisement

ಕೇಂದ್ರ ಸಚಿವ ಹಾಗೂ ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಶಾಸಕರಾದ ಎ.ಎಸ್‌. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರು, ಅರುಣ ಶಹಾಪುರ, ಮಾಜಿ ಸಚಿವರಾದ ಎಸ್‌.ಕೆ. ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಮ್ಮ ಜೋಗುರ, ವೂಡಾ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರು, ಗೋಪಾಲ ಕಾರಜೋಳ, ದಯಾಸಾಗರ ಪಾಟೀಲ, ರವೀಂದ್ರ ಬಗಲಿ, ಸಂಗರಾಜ ದೇಸಾಯಿ, ಶಿವರುದ್ರ ಬಾಗಲಕೋಟ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next