ವಿಜಯಪುರ: ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಆ ಯುವಕ ಬೀದಿಗೆ ಇಳಿದಿದ್ದ. ತಮ್ಮ ಬದುಕಿನುದ್ದಕ್ಕೂ ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದ್ದು, ರಾಜಕೀಯ ಪ್ರವೇಶದ ನಂತರ ತಮ್ಮ ಸುದೀರ್ಘ 4 ದಶಕಗಳ ಕಾಲ ಆಧಿಕಾರದ ರಾಜಕೀಯ ಜೀವನ ನಡೆಸಿರುವುದು ವಿಶೇಷ. ಇಂಥ ವಿಶಿಷ್ಟ ರಾಜಕೀಯ ಚರಿಸ್ಮಾ ಹೊಂದಿರುವವರು ರಮೇಶ ಜಿಗಜಿಣಗಿ. ಇದೀಗ ಸತತ 6ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಬರದ ನಾಡು ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಎಂಬ ಗ್ರಾಮದಲ್ಲಿ 1952ರ ಜೂನ್ 25ರಂದು ಜನಿಸಿದ ರಮೇಶ ಚಂದಪ್ಪ ಜಿಗಜಿಣಗಿ, ಧಾರವಾಡ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ಕಾಂಗ್ರೆಸ್ ವಿರೋಧಿ ರಾಜಕೀಯ ಮಾಡುತ್ತಲೇ ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ರಮೇಶ ಜಿಗಜಿಣಗಿ, ಇಂಡಿ ತಾಲೂಕು ಬೋರ್ಡ್ ಸಮಿತಿ ಸದಸ್ಯರಾಗಿ ನೇಮಕಗೊಳ್ಳುವ ಮೂಲಕ ಸಕ್ರೀಯ ರಾಜಕೀಯ ಜೀವನ ಆರಂಭಿಸಿದರು. ಇಂಡಿ ಭೂನ್ಯಾಯ ಮಂಡಳಿ ಸದಸ್ಯರಾಗಿದ್ದಾಗಲೇ 1982ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಆದಾಗ ರಾಮಕೃಷ್ಣ ಹೆಗಡೆ ಅವರ ಕಣ್ಣಿಗೆ ಬಿದ್ದರು. ಪರಿಣಾಮ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಬಳ್ಳೊಳ್ಳಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಜೆ.ಎಲ್. ಕಬಾಡೆ ಅವರನ್ನು 13 ಸಾವಿರ ಮತಗಳಿಂದ ಸೋಲಿಸಿ ವಿಜಯ ಸಾಧಿಸಿದರು.
ಅಲ್ಲಿಂದ ಆರಂಭವಾದ ಶಾಸನ ಸಭೆಗೆ ಆಯ್ಕೆಯಾಗುತ್ತಲೇ ರಾಜಕೀಯದ ಅಭ್ಯುದಯ ಆರಂಭಗೊಂಡಿತು. ಮರು ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳೊಳ್ಳಿ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸಿ 15 ಸಾವಿರ ಮತಗಳಿಂದ ಎಸ್.ಎಸ್. ಅರಕೇರಿ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಅಲ್ಲದೇ ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಗ್ರಹ, ಅಬಕಾರಿ ಹಾಗೂ ಕ್ರೀಡಾ ಇಲಾಖೆ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದರು.
1989ರಲ್ಲಿ ಮನೋಹರ ಐನಾಪುರ ವಿರುದ್ಧ ಬಳ್ಳೊಳ್ಳಿ ಕ್ಷೇತ್ರದಲ್ಲೇ ಸೋಲು ಅನುಭವಿಸಿದ ಜಿಗಜಿಣಗಿ, 1994ರಲ್ಲಿ ಮನೋಹರ ಐನಾಪುರ ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡರು. ಎಚ್.ಡಿ. ದೇವೇಗೌಡ ಸರ್ಕಾದಲ್ಲಿ ಸಂಪುಟ ದರ್ಜೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಹಲವು ಸುಧಾರಣೆಗಳನ್ನು ಮಾಡಿದರು. ರಾಜ್ಯದ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾದರು. ಎರಡು ದಶಕಗಳ ಕಾಲ ಜನತಾ ಪರಿವಾರದ ರಾಜ್ಯ ಸರ್ಕಾರಗಳಲ್ಲಿ ವಿವಿಧ ಸಚಿವ ಸ್ಥಾನ ನಿಭಾಯಿಸಿದ್ದರು. 1998ರಲ್ಲಿ ರಾಜ್ಯ ಸರ್ಕಾದಲ್ಲಿ ಕಂದಾಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪರಿಶಿಷ್ಟ ಜಾತಿಗೆ ಮೀಸಲಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿ.ಶಂಕರಾನಂದ ಎಂಬ ಕಾಂಗ್ರೆಸ್ ಹಿರಿಯ ನಾಯಕನನ್ನು ಸೋಲಿಸಿ ಕೇಂದ್ರದಲ್ಲೂ ತಮ್ಮ ಛಾಪು ಮೂಡಿಸಲು ಮುಂದಾದರು.
ಇದಾದ ಬಳಿಕ 1999 ಹಾಗೂ 2004ರಲ್ಲಿ ಬಿ.ಶಂಕರಾನಂದ ಅವರ ಪುತ್ರ ಪ್ರದೀಪ ಕಣಗಲಿ ಅವರನ್ನು ಸೋಲಿಸುವ ಮೂಲಕ ತಂದೆ-ಮಗ ಇಬ್ಬರನ್ನೂ ಸೋಲಿಸಿ ಹ್ಯಾಟ್ರಿಕ್ ವಿಜಯ ಸಾಧಿಸಿದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿ, 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ಪರಿಶಿಷ್ಟ ಜಾತಿಗೆ ಮೀಸಲಾದ ತವರು ಜಿಲ್ಲೆ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದರು. ತಮ್ಮ ಎದುರಾಳಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಕ್ರಿಕೆಟಿಗ ಪ್ರಕಾಶ ರಾಠೊಡ ಅವರನ್ನು ಸೋಲಿಸಿದ ಅವರು, 2014ರ ಲೋಕಸಭೆ ಚುನಾವಣೆಯಲ್ಲೂ ಪ್ರಕಾಶ ರಾಠೊಡ ಅವರನ್ನು ಸೋಲಿಸಿ ವಿಜಯಪುರ ಕ್ಷೇತ್ರದಲ್ಲಿ ವಿಜಯ ಸಾಧಿಸಿದರು. ವಿಜಯಪುರ ಕ್ಷೇತ್ರದಲ್ಲಿ 5ನೇ ಬಾರಿಗೆ ಆಯ್ಕೆಯಾಗಿ ಲೋಕಸಭೆ ಪ್ರವೇಶಿಸಿದ್ದಲ್ಲದೇ ಮೋದಿ ಸರ್ಕಾರದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ 6 ಬಾರಿ ಲೋಕಸಭೆ ಸದಸ್ಯರಾಗಿ ಸಂಸತ್ ಪ್ರವೇಶಿಸಿದ ದಾಖಲೆ ಬರೆದಿದ್ದಾರೆ. ಅಧಿಕಾರದ ರಾಜಕೀಯ ನಾಯಕ ಎಂಬ ಹಿರಿಮೆ ಸಂಪಾದಿಸಿದ್ದಾರೆ.
ಜಿ.ಎಸ್. ಕಮತರ