Advertisement

ಸಮಸ್ಯೆಗಳ ನಡುವೆ ಮತದಾನ

01:31 PM Apr 24, 2019 | Team Udayavani |

ಮುದ್ದೇಬಿಹಾಳ: ಮತದಾನಕ್ಕೆ ಅಡ್ಡಿ ಉಂಟು ಮಾಡಿದ ವಿವಿ ಪ್ಯಾಟ್ ಸಮಸ್ಯೆ, ಮತದಾನ ಸಿಬ್ಬಂದಿಯ ನಿಧಾನ ಪ್ರವೃತ್ತಿ, ಮತಗಟೆಗಳಲ್ಲಿ ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ಹೀಗೆ ಕೆಲವು ಸಮಸ್ಯೆಗಳು ಮಂಗಳವಾರ ನಡೆದ ಮತದಾನದ ವೇಳೆ ಕಂಡು ಬಂದು ಮತದಾರರ ಟೀಕೆಗೆ ಗುರಿಯಾದವು.

Advertisement

ಬೆಳಗ್ಗೆಯಿಂದಲೇ ಹೆಚ್ಚಿನ ಬಿಸಿಲಿತ್ತು. ಹೀಗಾಗಿ ಕೆಲವು ಮತಗಟ್ಟೆಗಳಲ್ಲಿ ವಿವಿ ಪ್ಯಾಟ್ ಕೈಕೊಟ್ಟು ಕೆಲ ಸಮಯ ಮತದಾನ ಸ್ಥಗಿತಗೊಂಡಿತ್ತು. ನಂತರ ಸೆಕ್ಟರ್‌ ಅಧಿಕಾರಿಗಳು ಆಯಾ ಮತಗಟ್ಟೆಗಳಿಗೆ ತೆರಳಿ ವಿವಿ ಪ್ಯಾಟ್ ಬದಲಾಯಿಸಿ ಮತ್ತೇ ಮತದಾನ ಸುಗಮವಾಗಿ ನಡೆಯುವಂತೆ ನೋಡಿಕೊಂಡರು.

ಗುಡಿಹಾಳದ 72ನೇ ಮತಗಟ್ಟೆಯಲ್ಲಿ ಅದೇ ಊರಿನ ಸರ್ಕಾರಿ ಶಾಲೆ ಮುಖ್ಯಾಧ್ಯಾಪಕರೊಬ್ಬರು ಮತದಾನ ಸಿಬ್ಬಂದಿ ಜೊತೆ ಕುಳಿತು ಕೆಲಸ ಮಾಡಿದ್ದು, ಮುದ್ದೇಬಿಹಾಳದ 131ನೇ ಮತಗಟ್ಟೆಯಲ್ಲಿ ಪಿಆರ್‌ಒ ಅವರು ಮತದಾನ ಏಜೆಂಟ್ರೊಂದಿಗೆ ವಾಗ್ವಾದ ನಡೆಸಿದ ಘಟನೆಗಳು ಕಂಡು ಬಂದವು.

ಚಿರ್ಚನಕಲ್ ಗ್ರಾಮದ ಮತಗಟ್ಟೆಯಲ್ಲಿ 95ರ ವಯೋವೃದ್ಧೆ ದ್ಯಾಮವ್ವ ಮೇಟಿ ಬೇರೆಯವರ ಸಹಾಯ ಇಲ್ಲದೆ ತಾನೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದು, ಮುದ್ದೇಬಿಹಾಳದ ನೇತಾಜಿ ನಗರದ ಮತಗಟ್ಟೆಯಲ್ಲಿ ಅಂಗವಿಕಲ ವಯೋವೃದ್ಧೆಯೊಬ್ಬರು ವೀಲ್ಚೇರ್‌ ಮೇಲೆ ಆಗಮಿಸಿ ತಾನೂ ಎಲ್ಲರ ಜೊತೆ ಸರದಿಯಲ್ಲಿ ನಿಂತೇ ಮತ ಚಲಾಯಿಸಿದ್ದು, ಮುದ್ದೇಬಿಹಾಳದ ಸರ್ಕಾರಿ ಸಂಯುಕ್ತ ಪಪೂ ಕಾಲೇಜಿನ 121ನೇ ಸಖೀ ಮತಗಟ್ಟೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಶ್ರೀಶೈಲ ಹಿರೇಮಠ ಎನ್ನುವವರು ಸಹಾಯಕರೊಂದಿಗೆ ಮತ ಚಲಾಯಿಸಿದ್ದು ಸೇರಿ ಹಲವೆಡೆ ಅಂಗವಿಕಲರು ಸಹಾಯಕರೊಂದಿಗೆ ಮತ ಚಲಾಯಿಸಿ ಭೇಷ್‌ ಎನಿಸಿಕೊಂಡರು.

ಕೆಲ ಮತಗಟ್ಟೆಗಳಲ್ಲಿ ಮತದಾನ ಸಿಬ್ಬಂದಿಯ ನಿಧಾನ ಪ್ರವೃತ್ತಿಯಿಂದಾಗಿ ಮತದಾನ ವೇಗ ಪಡೆದುಕೊಳ್ಳದೆ ಮತ ಹಾಕಲು ಬಂದಿದ್ದ ಮತದಾರರು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದು, ಕೆಲ ಮತಗಟ್ಟೆಗಳಲ್ಲಿ ಮತದಾರರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಅಲ್ಲಲ್ಲಿ ಕಂಡು ಬಂದವು.

Advertisement

ತಾಲೂಕಿನ ಸುಕ್ಷೇತ್ರ, ಹಾಲುಮತದ ಮೂಲ ಗುರುಪೀಠ ಜಗದ್ಗುರು ರೇವಣಸಿದ್ದೇಶ್ವರ ಪೀಠದ ಅಗತೀರ್ಥ ಸ್ವಾಮೀಜಿ, ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ಸ್ವಗ್ರಾಮ ಸರೂರಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಪಟ್ಟಣದ ಸರ್ಕಾರಿ ಸಂಯುಕ್ತ ಪಪೂ ಕಾಲೇಜಿನ ಕೊಠಡಿಯೊಂದರಲ್ಲಿ 121ನೇ ಮತಗಟ್ಟೆಯನ್ನು ಸಖೀ ಮತಗಟ್ಟೆಯನ್ನಾಗಿ ಪರಿವರ್ತಿಸಿ ಸರ್ವಾಲಂಕೃತಗೊಳಿಸಿ ಮತದಾರರನ್ನು ಆಕರ್ಷಿಸಲು ಕ್ರಮ ಕೈಕೊಳ್ಳಲಾಗಿತ್ತು.

792 ಮತದಾರರಿರುವ ಈ ಮತಗಟ್ಟೆಯಲ್ಲಿ 376 ಮಹಿಳಾ ಮತದಾರರು ಇದ್ದರು. ಹೊರಗಡೆ ಬಲೂನುಗಳಿಂದ, ಸ್ವಾಗತ ಕಮಾನು ನಿರ್ಮಿಸಿ ಸಖೀ ಮತಗಟ್ಟೆಯ ಬೋರ್ಡ್‌ ಹಾಕಿ ಮತದಾರರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಮತಗಟ್ಟೆಗೆ ಪಿಆರ್‌ಒ ಆಗಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಾಜೇಶ್ವರಿ ನಾಡಗೌಡರ, ಮತದಾನ ಸಿಬ್ಬಂದಿಗಳಾಗಿ ಎಸ್‌.ಡಿ. ಹೊಸಗೌಡರ, ಲತಾ ಕೊಣ್ಣೂರ, ಬಿ.ಬಿ. ರುದ್ರಗಂಟಿ ಕಾರ್ಯ ನಿರ್ವಹಿಸಿದರು.

ತಾಲೂಕಿನ ಅಗಸಬಾಳ ಮತ್ತು ಹೊಕ್ರಾಣಿ ಗ್ರಾಮಗಳಲ್ಲಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮತದಾನಕ್ಕೆ ಬಹಿಷ್ಕಾರ ಹಾಕಲು ತೀರ್ಮಾನಿಸಲಾಗಿತ್ತು. ಆದರೆ ತಾಲೂಕಾಡಳಿತ ಅಲ್ಲಿನ ಜನರ ಮನವೊಲಿಸಿದ್ದರಿಂದ ಎರಡೂ ಗ್ರಾಮಗಳಲ್ಲಿ ಸುಗಮ ಮತದಾನ ಯಥಾರೀತಿ ನಡೆಯಿತು. ಅಗಸಬಾಳ ಗ್ರಾಮದಲ್ಲಿ 3 ಬೇಡಿಕೆ ಪೈಕಿ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಹೊಸದಾಗಿ ಕೊಳವೆ ಬಾವಿ ಕೊರೆಸಲು ಕ್ರಮ ಕೈಕೊಳ್ಳಲಾಗಿತ್ತು. ಹೊಕ್ರಾಣಿ ಗ್ರಾಮಸ್ಥರು ಕೆರೆ ತುಂಬಿಸುವ ಬೇಡಿಕೆ ಇಟ್ಟಿದ್ದರಿಂದ ಮೇ 25ರ ನಂತರ ಟೆಂಡರ್‌ ಕರೆದು ಕೆರೆ ತುಂಬಿಸಲು ಕ್ರಮ ಕೈಕೊಳ್ಳುವ ಭರವಸೆ ನೀಡಲಾಗಿತ್ತು.

ಗಣ್ಯರ ಮತದಾನ: ಸ್ಥಳೀಯ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ತಮ್ಮ ತಂದೆ ಸಂಗನಗೌಡ, ತಾಯಿ ಗಂಗಾಬಾಯಿ, ಪತ್ನಿ ಮಹಾದೇವಿ, ಹಿರಿಯ ಪುತ್ರ ಭರತ್‌ ಜೊತೆ ಸ್ವಗ್ರಾಮ ನಡಹಳ್ಳಿಯ 54ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ತಮ್ಮ ಪತ್ನಿ ರೂಪಾ ಅವರೊಂದಿಗೆ ಮಡಿಕೇಶ್ವರದ 44ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮಾಜಿ ಸಚಿವ ಸಿ.ಎಸ್‌. ನಾಡಗೌಡ ಬಲದಿನ್ನಿಯಲ್ಲಿ, ಜೆಡಿಎಸ್‌ ನಾಯಕಿ ಮಂಗಳಾದೇವಿ ಬಿರಾದಾರ ಅವರು ತಮ್ಮ ಪತಿ ಶಾಂತಗೌಡ ಬಿರಾದಾರ ಅವರೊಂದಿಗೆ ನಾಗರಾಳ ಗ್ರಾಮದ 110ನೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮತದಾನಕ್ಕೆ ಲಂಡನ್‌ನಿಂದ ಬಂದ ಶಾಸಕರ ಪುತ್ರ: ಸ್ಥಳೀಯ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರ ಹಿರಿಯ ಪುತ್ರ ಭರತ್‌ ಲಂಡನ್‌ನ ಕಾರ್ಡಿಫ್‌ ಯುನಿವರ್ಸಿಟಿಯಲ್ಲಿ ಎಂಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದು ಮೊದಲ ಬಾರಿಗೆ ಮತ ಚಲಾಯಿಸಿದರು. ಇದಕ್ಕೆಂದೇ ಅವರು ಲಂಡನ್‌ನಿಂದ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next