Advertisement

ಮೋದಿ ಸಂಪುಟದಲ್ಲಿ ಸ್ಥಾನ ಪಡೆಯದ ಜಿಗಜಿಣಗಿ

10:31 AM May 31, 2019 | Team Udayavani |

ಜಿ.ಎಸ್‌.ಕಮತರ
ವಿಜಯಪುರ:
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ನರೇಂದ್ರ ಮೋದಿ ಅವರು ಸತತ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ಕಂತಿನ ಸಂಪುಟದಲ್ಲಿ ಬಿಜೆಪಿ ಭದ್ರಕೋಟೆ ಎನಿಸಿರುವ ವಿಜಯಪುರ ಜಿಲ್ಲೆಯ ಕ್ಷೇತ್ರಕ್ಕೆ ಅವಕಾಶ ಸಿಕ್ಕಿಲ್ಲ. ಹಿಂದಿನ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಲ್ಲಿ ರಾಜ್ಯ ಖಾತೆ ಸಚಿವರಾಗಿದ್ದ ರಮೇಶ ಜಿಗಜಿಣಗಿ ಅವರು ಈ ಬಾರಿ ಸಚಿವ ಸ್ಥಾನ ಪಡೆಯುವಲ್ಲಿ ವಿಫ‌ಲವಾಗಿದ್ದಾರೆ.

Advertisement

ರಾಜ್ಯದ ಜನತಾ ಪರಿವಾರದ ಸರ್ಕಾಗಳಲ್ಲಿ ಕಂದಾಯ, ಗೃಹ, ಅಬಕಾರಿ, ಸಮಾಜ ಕಲ್ಯಾಣ ಸೇರಿದಂತೆ ಹಲವು ಸಚಿವ ಖಾತೆ ನಿಭಾಯಿಸಿದ್ದ ರಮೇಶ ಜಿಗಜಿಣಗಿ ರಾಜಕೀಯ ಹಿರಿತನೊಂದಿಗೆ ಅನುಭವಿ ನಾಯಕರೂ ಹೌದು. ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆಯಾಗಿದ್ದ ಜಿಗಜಿಣಗಿ ಅವರು, 2008ರಲ್ಲಿ ಕ್ಷೇತ್ರ ಮರುವಿಂಗಡೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದಾಗ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ತವರಿಗೆ ಮರಳಿ ಬಂದಿದ್ದರು. ಸತತ ಎರಡು ಬಾರಿ ಆಯ್ಕೆಯಾಗಿರುವ ಅವರನ್ನು ಮೋದಿ ಅವರ ಮೊದಲ ಸರ್ಕಾರದಲ್ಲಿ ಕೊನೆ ಎರಡು ವರ್ಷಗಳ ಅವಧಿಯಲ್ಲಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಜ್ಯ ಖಾತೆ ಸಚಿವರಾಗಿ ನೇಮಿಸಲಾಗಿತ್ತು.

ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆ ಅನುಷ್ಠಾನದ ಗ್ರಾಮೀಣ ನ್ಯೆರ್ಮಲ್ಯ ಖಾತೆ ಜತೆಗೆ ಗ್ರಾಮೀಣ ಕುಡಿಯುವ ನೀರಿನ ಖಾತೆಯನ್ನೂ ನಿಭಾಯಿಸಿದ್ದರು. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಸತತ 6 ಬಾರಿ ಲೋಕಸಭೆ ಪ್ರವೇಶಿಸಿ ಡಬಲ್ ಹ್ಯಾಟ್ರಿಕ್‌ ಸಾಧನೆ ಮಾಡಿದ್ದ ರಮೇಶ ಜಿಗಜಿಣಗಿ ಅವರಿಗೆ ಮತ್ತೆ ಸಚಿವ ಸ್ಥಾನ ಖಾತ್ರಿ ಎಂದೇ ನಂಬಲಾಗಿತ್ತು. ಆದರೆ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ.

ಒಂದೊಮ್ಮೆ ರಮೇಶ ಜಿಗಜಿಣಗಿ ಅವರು ಪ್ರಧಾನಿ ಮೋದಿ ಅವರ ಎರಡನೇ ಅವಧಿ ಸರ್ಕಾರದಲ್ಲಿ ಸಚಿವರಾಗಿದ್ದರು ದಾಖಲೆ ನಿರ್ಮಾಣವಾಗುತ್ತಿತ್ತು. ವಿಜಯಪುರ ಲೋಕಸಭೆ ಇತಿಹಾಸದಲ್ಲಿ ಈ ಹಿಂದೆ ಎರಡು ಬಾರಿ ಗೆದ್ದಿದ್ದ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಖಾತೆ ಸಚಿವರಾಗಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದರು. ಜವಳಿ ಹಾಗೂ ರೈಲ್ವೆ ಖಾತೆ ನಿಭಾಯಿಸಿದ್ದ ಯತ್ನಾಳ ಜಿಲ್ಲೆಯಿಂದ ಕೇಂದ್ರ ಮಂತ್ರಿಯಾಗಿದ್ದ ಮೊದಲಿಗರು ಎಂಬ ದಾಖಲೆ ಬರೆದಿದ್ದರು.

ಇದಾದ ಬಳಿಕ ರಮೇಶ ಜಿಗಜಿಣಗಿ ಅವರು ಮೋದಿ ಅವರ ಮೊದಲ ಸರ್ಕಾರದಲ್ಲಿ ಸಚಿವರಾಗುವ ಮೂಲಕ ಜಿಲ್ಲೆಯಿಂದ ಕೇಂದ್ರದಲ್ಲಿ ಸಚಿವರಾದ ಎರಡನೇ ಸಂಸದ ಎಂಬ ಕೀರ್ತಿ ಸಂಪಾದಿಸಿದ್ದು, ಈ ಬಾರಿಯ ಸಂಪುಟದಲ್ಲೂ ಸಚಿವರಾಗಿದ್ದರೆ ಸತತ ಎರಡನೇ ಬಾರಿಗೆ ಸಚಿವರಾದ ದಾಖಲೆ ಜಿಗಜಿಣಗಿ ಅವರ ಹೆಸರಿನಲ್ಲಿ ಬರೆಯಲ್ಪಡುತ್ತಿತ್ತು. ಅದರೆ ಪ್ರಧಾನಿ ಮೋದಿ ಅವರು ತಮ್ಮ ನೇತೃತ್ವದ ಎರಡನೇ ಅವಧಿ ಸರ್ಕಾರದಲ್ಲಿ ಜಿಗಜಿಣಗಿ ಅವರನ್ನು ಪರಿಗಣಿಸದ ಕಾರಣ ಐತಿಹಾಸಿಕ ವಿಜಯಪುರ ಜಿಲ್ಲೆಗೆ ದಾಖಲೆ ಬರೆಯುವ ಅವಕಾಶ ಕ್ಯೆತಪ್ಪಿದೆ.

Advertisement

ಮೋದಿ ಅವರ ಎರಡನೇ ಅವಧಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಇಲ್ಲ. ಸಚಿವ ಸ್ಥಾನ ಸೇರಿದಂತೆ ಯಾವುದೇ ಅಧಿಕಾರಕ್ಕಾಗಿ ನಾನು ಆಕಾಂಕ್ಷಿಯಾಗಿ ಲಾಭಿ ಮಾಡಿಲ್ಲ. ಪಕ್ಷ ನೀಡುವ ಯಾವುದೇ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತ ಬಂದಿದ್ದೇನೆ. ಹಿಂದಿನ ಸರ್ಕಾರದಲ್ಲಿ ನನಗೆ ನೀಡಿದ್ದ ಸಚಿವ ಸ್ಥಾನವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ ತೃಪ್ತಿ ಇದೆ.
ರಮೇಶ ಜಿಗಜಿಣಗಿ,
ಕೇಂದ್ರದ ಮಾಜಿ ಸಚಿವ,
ಹಾಲಿ ಸಂಸದ-ವಿಜಯಪುರ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next