Advertisement

ಜಿಗಜಿಣಗಿ ರಾಜಕೀಯ ನಿವೃತ್ತಿ ಪಡೆಯಲಿ: ಪಾಟೀಲ

04:14 PM Apr 05, 2019 | Naveen |

ವಿಜಯಪುರ: ನಾಲ್ಕು ದಶಕಗಳ ಕಾಲ ಅಧಿಕಾರದ ರಾಜಕೀಯದಲ್ಲಿದ್ದು, 20 ವರ್ಷಗಳಿಂದ ಸಂಸದರಾಗಿ, ಕೇಂದ್ರದಲ್ಲಿ
ಸಚಿವರಾಗಿದ್ದರೂ ರಮೇಶ ಜಿಗಜಿಣಗಿ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ. ಹೀಗಾಗಿ ಜಿಗಜಿಣಗಿ ಅವರು ರಾಜಕೀಯ ನಿವೃತ್ತಿ ಪಡೆಯುವುದು ಸೂಕ್ತ ಎಂದು ಗೃಹ ಸಚಿವ ಡಾ| ಎಂ.ಬಿ. ಪಾಟೀಲ ಕುಟುಕಿದರು.

Advertisement

ಗುರುವಾರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಾಮಪತ್ರದ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಅವರು, 20 ವರ್ಷ ಸಂಸದರಾದರೂ ಸಂಸತ್‌ನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಈಗ ಕೇಂದ್ರದಲ್ಲಿ ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಸಚಿವರಾದರೂ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಇರುವ ಒಂದು ಹಳ್ಳಿಗೂ ನೀರು ಕೊಡಲು ವಿಫಲವಾಗಿದ್ದಾರೆ. ಇಂಥವರು ಇನ್ನು ರಾಜಕೀಯದಿಂದ ನಿವೃತ್ತಿ ಪಡೆಯುವುದು ಸೂಕ್ತ ಎಂದು ಟೀಕಿಸಿದರು.

ಜಿಲ್ಲೆಗೆ ಎನ್‌.ಟಿ.ಪಿ.ಸಿ. ತರುವಲ್ಲಿ ಅಂದು ಸಚಿವರಾಗಿದ್ದ ಸುಶೀಲ ಕುಮಾರ ಶಿಂಧೆ ಕೊಡುಗೆಯೇ ಹೊರತು ಇದರಲ್ಲಿ ಜಿಗಜಿಣಗಿ ಅವರ ಸಣ್ಣ ಪ್ರಯತ್ನವೂ ಇಲ್ಲ. ಜಿಲ್ಲೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣದಲ್ಲಿ ರಾಜ್ಯ ಸರ್ಕಾರದ ಪಾಲಿದೆ. ಜಿಗಜಿಣಗಿ ಅವರ
ಕೊಡುಗೆ ಶೂನ್ಯ. ವಿಜಯಪುರದ ಮೊದಲ ಸಂಸದ ರಾಜಾರಾಮ ದುಬೆ ಅವರು ವಿಮಾನ ನಿಲ್ದಾಣಕ್ಕೆ ನೆಹರುಗೆ ಪತ್ರ ಬರೆದಿದ್ದರು.
ಆದರೆ ಇಂದಿಗೂ ವಿಮಾನ ಹಾರಿಲ್ಲ. ಕಳೆದ ಚುನಾವಣೆಯಲ್ಲಿ ಈ ಕುರಿತು ಜಿಗಜಿಣಿ ನೀಡಿದ್ದ ಭರವಸೆಯೂ ಹುಸಿಯಾಗಿದೆ ಎಂದು ವಾಗ್ಧಾಳಿ ನಡೆಸಿದರು.

ಇನ್ನು ಚುನಾವಣಾ ಪೂರ್ವ ಕ್ಷೇತ್ರ ಹೊಂದಾಣಿಕೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಿಟ್ಟುಕೊಡುವಂತೆ ಕೇಳಿದ್ದು ನಿಜ. ಆದರೆ ಪಕ್ಷದ ವರಿಷ್ಠರ ನಿರ್ಧಾರದಂತೆ ವಿಜಯಪುರ ಕ್ಷೇತ್ರ ಜೆಡಿಎಸ್‌ ಪಕ್ಷಕ್ಕೆ ಬಿಟ್ಟು ಕೊಡಲಾಗಿದೆ. ಇನ್ನು ನಮ್ಮಲ್ಲಿ ಯಾವುದೇ ಅತೃಪ್ತಿ ಇಲ್ಲ. ಮೈತ್ರಿ ಪಕ್ಷಗಳ ನಾಯಕರ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಎರಡೂ ಪಕ್ಷಳ ನಾಯಕರು-ಕಾರ್ಯಕರ್ತರು ಒಗ್ಗಟ್ಟಿನಿಂದ
ಪರಿಶ್ರಮದಿಂದ ಕೆಲಸ ಮಾಡಲಿದ್ದೇವೆ. ಉಭಯ ಪಕ್ಷಗಳ ಕಾರ್ಯಕರ್ತರು ಕೂಡ ಒಗ್ಗಟ್ಟಿನಿಂದ ಕೆಲಸ ಮಾಡಿ ಡಾ| ಸುನಿತಾ
ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next