Advertisement
ಜಿಲ್ಲೆಯ ಇಂಡಿ, ಬಸವನಬಾಗೇವಾಡಿ ಹಾಗೂ ತಾಳಿಕೋಟೆ ಪುರಸಭೆಗಳ ತಲಾ 23 ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗದಿ ಮಾಡಿ ಜಿಲ್ಲಾ ಚುನಾವಣೆ ಅಧಿಕಾರಿ ಎಂ. ಕನಗವಲ್ಲಿ ಅಧಿಸೂಚನೆ ಹೊರಡಿಸಿದ್ದಾರೆ. ಹಿಂದಿನ ಸಂಖ್ಯಾಬಲ ಅವಲೋಕಿಸಿದರೆ ತಾಳಿಕೋಟೆ ಪುರಸಭೆಯಲ್ಲಿ ಪಕ್ಷೇತರರದ್ದೇ ಪಾರುಪತ್ಯ ಇತ್ತು. 23 ಸದಸ್ಯ ಬಲದ ಈ ಪುರಸಭೆಯಲ್ಲಿ 19 ಪಕ್ಷೇತರರು ಆಯ್ಕೆ ಆಗಿದ್ದರೆ, ಕಾಂಗ್ರೆಸ್ 3 ಹಾಗೂ ಬಿಜೆಪಿ ಕೇವಲ 1 ಸ್ಥಾನ ಮಾತ್ರ ಗೆದ್ದಿತ್ತು.
Related Articles
Advertisement
ಉಸ್ತುವಾರಿಗಳ ನೇಮಕ: ಜೆಡಿಎಸ್ ನಾಯಕರಿಗೆ ಸ್ವತಂತ್ರ ಸ್ಪರ್ಧೆಗೆ ಅಭ್ಯರ್ಥಿಗಳನ್ನು ಅಯ್ಕೆ ಮಾಡಿಕೊಳ್ಳುವಂತೆ ಹೈಕಮಾಂಡ್ ಸ್ಪಷ್ಟ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಈಗಾಗಲೇ ಮೂರು ಸ್ಥಳೀಯ ಸಂಸ್ಥೆಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ತಾಳಿಕೋಟೆ ಪುರಸಭೆಗೆ ಎಂ.ಆರ್. ಪಾಟೀಲ ಬಳ್ಳೊಳ್ಳಿ, ಚಂದ್ರಶೇಖರ ಹಿರೇಮಠ ಹಾಗೂ ಯಾಖೂಬ್ ಕೋಪರ ಅವರನ್ನು ನೇಮಿಸಿದ್ದರೆ, ಬಸವನಬಾಗೇವಾಡಿ ಪುರಸಭೆಗೆ ಬಸವರಾಜ ಹೊನವಾಡ, ದಿಲಾವರ ಖಾಜಿ ಹಾಗೂ ಗೋವಿಂದ ಜೋಶಿ ಅವರನ್ನು ನೇಮಿಸಲಾಗಿದೆ. ಇಂಡಿ ಪುರಸಭೆ ವ್ಯಾಪ್ತಿಯ ಉಸ್ತುವಾರಿಗೆ ರಿಯಾಜ್ ಫಾರೂಖೀ, ಸಿದ್ದು ಕಾಮತ್ ಇವರನ್ನು ಉಸ್ತುವಾರಿ ನೇಮಕ ಮಾಡಿ ಸಂಘಟನೆ ಬಿರುಸುಗೊಳಿಸಿದೆ.
ಈ ಉಸ್ತುವಾರಿಗಳು ಸ್ಥಳೀಯ ಮಟ್ಟದಲ್ಲಿ ನಾಯಕರು ಹಾಗೂ ಕಾರ್ಯಕರ್ತರ ಸಭೆ ನಡೆಸಿ, ಗೆಲ್ಲುವ ಆರ್ಹತೆ ಇರುವ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ನೀಡಲಿದ್ದಾರೆ. ಈಗಾಲೇ ಆಯಾ ಉಸ್ತುವಾರಿಗಳು ಸಭೆ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ.
ಇನ್ನು ಮಿತ್ರ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಇಲ್ಲದೇ ಸ್ವತಂತ್ರ ಸ್ಪರ್ಧೆಗೆ ಪಕ್ಷದ ಹೈಕಮಾಂಡ್ ನಿರ್ದೇಶನ ಇಲ್ಲದಿದ್ದರೂ ಕಾಂಗ್ರೆಸ್ ಈಗಷ್ಟೇ ಅರ್ಜಿ ಸ್ವೀಕಾರಕ್ಕೆ ಮುಂದಾಗಿದೆ. ಬ್ಲಾಕ್ ಮಟ್ಟದಲ್ಲಿ ಅರ್ಜಿ ಸ್ವೀಕಾರಕ್ಕೆ ಮುಂದಾಗಿದ್ದು, ಸಾಮಾನ್ಯ ವರ್ಗದವರಿಗೆ 2 ಸಾವಿರ ರೂ. ಹಾಗೂ ಪರಿಶಿಷ್ಟ ಸಮುದಾಯಕ್ಕೆ 1 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದೆ. ಬ್ಲಾಕ್ ಮಟ್ಟದಲ್ಲಿ ಸ್ವೀಕೃತ ಅರ್ಜಿಗಳನ್ನು ಜಿಲ್ಲಾ ಸಮಿತಿ ಮೂಲಕ ಕೆಪಿಸಿಸಿ ಸಮಿತಿಗೆ ಸಲ್ಲಿಸಲಾಗುತ್ತದೆ. ಅಲ್ಲಿಂದಲೇ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡು ಬಿ ಫಾರ್ಮ್ ಕಳಿಸಿಕೊಡಲು ನಿರ್ಧರಿಸಲಾಗಿದೆ.
ಇನ್ನು ಬಿಜೆಪಿ ಚುನಾವಣೆ ಘೋಷಣೆಗೆ ಮುನ್ನವೇ ಮೂರು ಪುರಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಹಾಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮುಂದಾಗಿದೆ. ಬಿಜೆಪಿ ಕೂಡ ಪ್ರತಿ ಪುರಸಭೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನು ಉಸ್ತುವಾರಿಗಳನ್ನು ನೇಮಿಸಿದ್ದು, ಇಂಡಿ ಪುರಸಭೆಗೆ ರವಿಕಾಂತ ಬಗಲಿ ಸಂಗರಾಜ ದೇಸಾಯಿ ಅವರನ್ನು ನೇಮಿಸಿದೆ. ಬಸವನ ಬಾಗೇವಾಡಿ ಪುರಸಭೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಆರ್.ಎಸ್. ಪಾಟೀಲ ಕೂಚನಬಾಳ ಅವರನ್ನು ನೇಮಿಸಿದ್ದರೆ, ತಾಳಿಕೋಟೆ ಪುರಸಭೆಗೆ ವಿವೇಕಾನಂದ ಡಬ್ಬಿ ಅವರನ್ನು ನೇಮಿಸಿದೆ.
ಶುಲ್ಕ ರಹಿತವಾಗಿ ಅರ್ಜಿ ಸ್ವೀಕರಿಸುವ ಈ ಉಸ್ತುವಾರಿಗಳು ಹೆಚ್ಚಿನ ಆಕಾಂಕ್ಷಿಗಳು ಕಂಡು ಬಂದ ವಾರ್ಡ್‌ಗಳಲ್ಲಿ ಮಂಡಲ ಅಧ್ಯಕ್ಷರ ನೇತೃತ್ವದ ಸಮಿತಿಯಲ್ಲಿ ಗೆಲ್ಲುವ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದೆ. ಇದಲ್ಲದೇ ಅಭ್ಯರ್ಥಿಯ ಆಯ್ಕೆ ಸಂಸರ್ಭದಲ್ಲಿ ಸಾಮಾಜಿಕ ನ್ಯಾಯ ಕಾಯುವ ಜೊತೆಗೆ ಹಣಬಲ ಇಲ್ಲದಿದ್ದರೂ ಪಕ್ಷದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ದುಡಿದವರನ್ನು ಪರಿಗಣಿಸುವಲ್ಲಿ ಅದ್ಯತೆ ನೀಡುವಂತೆ ಸೂಚನೆ ನೀಡಿದೆ. ಕನಿಷ್ಠ ಪ್ರತಿ ಸ್ಥಳೀಯ ಸಂಸ್ಥೆಯಲ್ಲಿ ಆರ್ಥಿಕ ದುರ್ಬಲತೆ ಇರುವ 3-4 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಕೆಗೆ ಪರಿಗಣಿಸಿ, ಗೆಲ್ಲಿಸಲು ಶ್ರಮಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಕಾವು ಮುಗಿದು ತಣ್ಣಗಾಗುತ್ತಲೇ ಇದೀಗ ಮತ್ತೆ ಪುರಸಭೆ ಚುನಾವಣೆ ಮೂಲಕ ಮತ್ತೆ ರಾಜಕೀಯ ಸದ್ದು ಜೋರಾಗಲು ವೇದಿಕೆ ಸಿದ್ಧವಾಗುತ್ತಿದೆ.
ಈಗಾಗಲೇ ಮೂರು ಪುರಸಭೆ ವ್ಯಾಪ್ತಿಯಲ್ಲಿ ಉಸ್ತುವಾರಿಗಳು ಪಕ್ಷದ ಸಂಘಟನೆ ಹಾಗೂ ಅಭ್ಯರ್ಥಿಗಳ ಆಯ್ಕಗಾಗಿ ಸಭೆ ನಡೆಸಿ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳ ಶೋಧಕ್ಕೆ ಮುಂದಾಗಿದ್ದಾರೆ. ಹೆಚ್ಚಿನ ಅರ್ಜಿಗಳು ಬಂದ ವಾರ್ಡ್‌ಗಳಲ್ಲಿ ಎಲ್ಲ ಆಕಾಂಕ್ಷಿಗಳನ್ನು ಕೂಡಿಸಿ ಒಮ್ಮತ ಅಭ್ಯರ್ಥಿ ಕಣಕ್ಕಿಳಿಸಲು ಯೋಜಿಸಲಾಗುತ್ತಿದೆ.•ಚಂದ್ರಶೇಖರ ಕವಟಗಿ,
ಬಿಜೆಪಿ ಜಿಲ್ಲಾಧ್ಯಕ್ಷರು, ವಿಜಯಪುರ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಮೂರು ಪುರಸಭೆಗಳಲ್ಲಿ ಸ್ವತಂತ್ರ ಸ್ಪರ್ಧೆಗೆ ಮುಂದಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಈಗಾಗಲೇ ಮೂರು ಪುರಸಭೆಗೆ ವೀಕ್ಷಕರನ್ನು ನೇಮಿಸಿದ್ದು, ಪ್ರವಾಸ ಮಾಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಕಾರ್ಯಕರ್ತರ ಚುನಾವಣೆ ಆಗಿರುವ ಕಾರಣ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ.
•ರಾಜು ಹಿಪ್ಪರಗಿ,
ಜೆಡಿಎಸ್ ಜಿಲ್ಲಾ ವಕ್ತಾರರು, ವಿಜಯಪುರ ಪುರಸಭೆ ಚುನಾವಣೆಗಾಗಿ ಬ್ಲಾಕ್‌ವಾರು ಅರ್ಜಿ ಸ್ವೀಕಾರಕ್ಕೆ ಮುಂದಾಗಿದ್ದೇವೆ. ಬ್ಲಾಕ್ ಮಟ್ಟದಲ್ಲಿ ಶುಲ್ಕ ಸಹಿತ ಸಲ್ಲಿಕೆ ಆಗುವ ಅರ್ಜಿಗಳನ್ನು ಜಿಲ್ಲಾ ಸಮಿತಿ ಮೂಲಕ ಕೆಪಿಸಿಸಿಗೆ ಕಳಿಸಿ, ಅಲ್ಲಿಂದಲೇ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ. ಜೆಡಿಎಸ್ ಜೊತೆ ಮೈತ್ರಿ ಕುರಿತು ಹೈಕಮಾಂಡ್ ಯಾವ ಸೂಚನೆಯನ್ನೂ ನೀಡಿಲ್ಲ. ಪಕ್ಷ ಮೈತ್ರಿಗೆ ಸೂಚಿಸಿದರೆ ಸೂಚನೆ ಪಾಲಿಸಲಾಗುತ್ತದೆ.
•ರವಿಗೌಡ ಪಾಟೀಲ,
ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ವಿಜಯಪುರ •ಜಿ.ಎಸ್.ಕಮತರ