ವಿಜಯಪುರ: ಪತ್ನಿ ಶೀಲ ಶಂಕಿಸಿ ಹತ್ಯೆ ಮಾಡಿದ ಹಾಗೂ ಹತ್ಯೆ ತಡೆಯಲು ಮುಂದಾದ ಮಕ್ಕಳ ಮೇಲೂ ದಾಳಿ ನಡೆಸಿದವನಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಸವನಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶರಣಸೋಮನಾಳ ಗ್ರಾಮದಲ್ಲಿ ಬಿಸ್ಮಿಲ್ಲಾ ಮೈಬೂಪಾಷಾ ಮಕಾಂದಾರ ಎಂಬ ಮಹಿಳೆಯ ಹತ್ಯೆಯಾಗಿತ್ತು. ಸದರಿ ಪ್ರಕರಣದಲ್ಲಿ ಆಕೆಯ ಪತಿ ಮೈಬೂಪಾಷಾ ಮಕಂದಾರ ಎಂಬವನಿಗೆ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜೀವಾವಧಿ ಶಿಕ್ಷೆ ಹಾಗು 10 ಸಾವಿರ ರೂ. ದಂಡ ವಿಧಿಸಿದೆ.
ಮೈಬೂಪಾಷಾ ತನ್ನ ಪತ್ನಿ ಬಿಸ್ಮಿಲ್ಲಾಳ ಶೀಲದ ಬಗ್ಗೆ ಶಂಕೆ ಹೊಂದಿದ್ದ. ಇದೇ ಕಾರಣಕ್ಕೆ 2022 ಜನವರಿ 11 ರಂದು ರಾತ್ರಿ ವೇಳೆ ಮನೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಪತ್ನಿಯನ್ನು ಮೈಬೂಪಾಷಾ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದ. ಅಲ್ಲದೇ ತಾಯಿಯ ರಕ್ಷಣೆಗೆ ದಾವಿಸಿದ ಮಕ್ಕಳಾದ ಫರೀದಾ, ಹಮೀದಾ (16) ಹಾಗೂ ಖಾದೀರಬಾಷಾ (15) ಹಾಗೂ ಶಮಶಾದ (10) ಇವರ ಮೇಲೂ ದಾಳಿ ಮಾಡಿ ಗಾಯಗೊಳಿಸಿದ್ದ.
ಸದರಿ ಪ್ರಕರಣದ ಕುರಿತು ಫರೀದಾ ನೀಡಿದ್ದ ದೂರು ಆಧರಿಸಿ ಬಸವನಬಾಗೇವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಖೆ ನಡೆಸಿದ್ದರು. ಸಿಪಿಐ ಬಿ.ಎಂ.ಪಾಟೀಲ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಜಾಚರಣೇ ನಡೆಸಿದ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಭಾಸ ಸಂಕದ ಅವರು ಸಾಕ್ಷಿ-ಪುರಾವೆಗಳನ್ನು ಪರಿಗಣಿಸಿ ದಾಖಲಾದ ಎರಡು ಬೇರೆ ಬೇರೆ ಕಲಂಗಳಿಗೆ ಸಂಬಂಧಿಸಿದಂತೆ ಪ್ರತಿ ಕಲಂಗೆ 2 ವರ್ಷ ಜೈಲು ಶಿಕ್ಷೆ, ಹತ್ಯೆ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ 1ನೇ ಅಧಿಕ ಸರ್ಕಾರಿ ಅಭಿಯೋಜಕಿ ವಿ.ಎಸ್.ಇಟಗಿ ಸಮರ್ಥವಾಗಿ ವಾದ ಮಂಡಿಸಿದ್ದರು.