ವಿಜಯಪುರ: ಭಾರತ ಸಂವಿಧಾನದಡಿ ಬರುವ ಎಲ್ಲ ಕಾಯ್ದೆ ಕಾನೂನುಗಳು ಮಹಿಳೆಯರ ಮತ್ತು ಮಕ್ಕಳ ಹಾಗೂ ನಾಗರಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ನಾಗರಿಕರಿಗೆ ಕಾನೂನಿನ ಅರಿವು ಅತ್ಯವಶ್ಯಕ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ನ್ಯಾಯಾಧೀಶರಾದ ರವೀಂದ್ರ ಕಾರಬಾರಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ಬಾಲ್ಯ ವಿವಾಹ ಹಾಗೂ ಬಾಲ ಅಪರಾಧ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರದ ಮೂಲ ಉದ್ದೇಶ ಎಲ್ಲ ನಾಗರಿಕರಿಗೂ ಉಚಿತ ಕಾನೂನು ಸೇವೆ ಒದಗಿಸುವುದಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದ ಒಳಿತಿಗಾಗಿ ಎಲ್ಲ ಕಾನೂನುಗಳ ಬಗ್ಗೆ ಸಮಗ್ರ ಮಾಹಿತಿ ಹೊಂದುವಂತೆ ಕರೆ ನೀಡಿದರು. ಮಹಿಳೆ ಮತ್ತು ಮಕ್ಕಳ ಮೇಲೆ ದಿನ ನಿತ್ಯ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಹಾಗೂ ಅದರ ವಿರುದ್ಧ ಹೋರಾಡಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ದೇಶದ ಹಿತರಕ್ಷಣೆಗೆ ಸದಾ ಬದ್ಧರಾಗಿರುವಂತೆ ಹೇಳಿದರು.
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಇದರ ಪ್ರಯೋಜನದಿಂದ ಸಣ್ಣ ಪುಟ್ಟ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಅದರಂತೆ ಸಂತ್ರಸ್ತರಿಗೆ ನೆರವಾಗಲೆಂದೆ ಇಂತಹ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿ ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಚ್. ಖಾಸನೀಸ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕುಟುಂಬವೇ ಆಸ್ತಿ ಎಂದು ಭಾವಿಸಿ ತಮ್ಮ ಪಾಲಕರ ಘನತೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು. ಯಾವುದೇ ತರಹದ ಕಲುಷಿತ ಮನೋಭಾವ ಬಿಟ್ಟು ತಮ್ಮ ಬದುಕನ್ನು ಸಾಕಾರಗೊಳಿಸಿಕೊಳ್ಳಬೇಕು. ಜ್ಞಾನಾರ್ಜನೆ ಸಮಯದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು. ಕಾನೂನನ್ನು ರಕ್ಷಿಸುವುದು ಹಾಗೂ ಪಾಲಿಸುವುದು ತಮ್ಮ ಆದ್ಯ ಕರ್ತವ್ಯವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ನಿರ್ಮಲಾ ದೊಡಮನಿ ಬೇಟಿ ಬಚಾವೋ ಬೇಟಿ ಪಡಾವೋ ವಿಷಯದ ಕುರಿತು ಮಾತನಾಡಿ, ಪ್ರಸ್ತುತ ವಿಜಯಪುರ ಜಿಲ್ಲೆಯಲ್ಲಿ 1,000 ಪುರುಷರಿಗೆ 931 ಮಹಿಳೆಯರಿದ್ದು, ಲಿಂಗಾನುಪಾತ ಹೆಚ್ಚಾಗಿ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಈ ಅಸಮತೋಲನ ಸರಿದೂಗಿಸಲು ಕಾನೂನಿನ ಅರಿವು ಬಹು ಮುಖ್ಯವಾಗಿದೆ. ಇದರ ಜೊತೆಗೆ ಉತ್ತಮ ಶಿಕ್ಷಣ ಆರೋಗ್ಯವನ್ನು ಮಹಿಳಾ ಸಮುದಾಯಕ್ಕೆ ಒದಗಿಸಬೇಕಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀಧರ ಕುಲಕರ್ಣಿ ಅವರು ಬಾಲ ಅಪರಾಧ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಡಾ| ಆರ್.ಎಸ್. ಕಲ್ಲೂರ ಮಠ, ಡಿಡಿಪಿಐ ಜೆ.ಎಸ್. ಪೂಜೇರಿ, ಎಸ್.ಬಿ. ಸಾವಳಸಂಗ ಇದ್ದರು. ವಿದ್ಯಾರ್ಥಿನಿ ಪ್ರೀತಿ ಪ್ರಾರ್ಥಿಸಿದರು. ಚಿದಾನಂದ ಎಸ್. ಸ್ವಾಗತಿಸಿದರು. ಡಾ| ದ್ರಾಕ್ಷಾಯಿಣಿ ಜಿ.ಎನ್. ವಂದಿಸಿದರು.