Advertisement

ಪೌರತ್ತ್ವ ತಿದ್ದುಪಡಿ ಕಾಯ್ದೆ ಕಿತ್ತು ಕೊಳ್ಳಲ್ಲ, ಕೊಡುತ್ತದೆ: ರಡ್ಡಿ

04:23 PM Dec 25, 2019 | Naveen |

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ನಾಗರಿಕರಿಗೆ ಪೌರತ್ವದ ಹಕ್ಕು ನೀಡಲು ರೂಪಿಸಿರುವುದೇ ಹೊರತು ಇರುವ ಪೌರತ್ವ ಕಿತ್ತುಕೊಳ್ಳುವ ಕಾಯ್ದೆ ಅಲ್ಲ. ಈ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಮುಸ್ಲಿಮರಲ್ಲಿ ಭಯ ಮೂಡಿಸಿ, ಗೊಂದಲ ಸೃಷ್ಟಿಸಿ ರಾಜಕೀಯ ಮಾಡುತ್ತಿವೆ. ಹೀಗಾಗಿ ಭಾರತೀಯ ಮುಸ್ಲಿಮರು ಪೌರತ್ವದ ವಿಷಯದಲ್ಲಿ ಭಯ ಪಡುವ ಅಗತ್ಯವಿಲ್ಲ ಎಂದು ಖ್ಯಾತ ನ್ಯಾಯವಾದಿ ವಿವೇಕ್‌ ರಡ್ಡಿ ಅಭಿಪ್ರಾಯಪಟ್ಟರು.

Advertisement

ಮಂಗಳವಾರ ನರಗದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ಮಂಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಸಂವಿಧಾನದ ಆಶಯದಂತೆ ರೂಪಿಸಲಾಗಿದೆಯೇ ಹೊರತು, ದೇಶದ ಮೂಲ ಯಾವುದೇ ನಾಗರಿಕನಿಗೆ ಇದರಿಂದ ಧಕ್ಕೆ ಇಲ್ಲ. ಆದರೆ ಮೂಲ ಆಶಯವನ್ನು ತಿರುಚುವ ಮೂಲಕ ಕಾಂಗ್ರೆಸ್‌ ಹಾಗೂ ವಿಪಕ್ಷಗಳು ದೇಶ-ವಿದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿಗೆ ಧಕ್ಕೆ ತರುವ ದುರುದ್ಧೇಶದಿಂದ ಸತ್ಯವನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ ಎಂದು ದೂರಿದರು.

ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳು ಸೇರಿದಂತೆ ಅದರ ಮಿತ್ರ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಅಪ ಪ್ರಚಾರದ ಮೂಲಕ ದೇಶದ ಮುಸ್ಲಿಮರಲ್ಲಿ ಅಭದ್ರತೆ ವಾತಾವರಣ ಮೂಡಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ದೇಶದಲ್ಲಿ ರಕ್ತಪಾತ ಮಾಡಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ರಾಷ್ಟ್ರಗಳಿಂದ ದೌರ್ಜನ್ಯಕ್ಕೀಡಾಗಿ ರಕ್ಷಣೆ ಕೋರಿ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಬೌದ್ಧ, ಸಿಖ್‌ ಸಮುದಾಯದ ನಿರಾಶ್ರಿತರಿಗೆ ಭಾರತದ ಪೌರತ್ವ ಕಲ್ಪಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಉದ್ದೇಶವನ್ನು ತಿರುಚುವ ಮೂಲಕ ಭಾರತೀಯ ಮುಸ್ಲಿಮರಲ್ಲಿ ಅಭದ್ರತೆ ಹುಟ್ಟು ಹಾಕುವ ಕುತಂತ್ರದ ರಾಜಕೀಯ ಮಾಡಲಾಗುತ್ತದೆ ಎಂದು ಹರಿಹಾಯ್ದರು.

ಸಂವಿಧಾನದ ಜಾತ್ಯತೀಯ ತತ್ವದಲ್ಲಿ ದೇಶವನ್ನು ಬಲಿಷ್ಠವಾಗಿ ಕಟ್ಟುವ ಜೊತೆಗೆ, ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ತುಳಿತಕ್ಕೊಳಗಾದ ಶೋಷಿತರಿಗೆ ಸಮಾನತೆಯ ಆಶಯ ಈಡೇರಿಸುವ ಸಬಲೀಕರಣದ ಉದ್ದೇಶವಿದೆ. ಸಂಕಷ್ಟದಲ್ಲಿರುವ ಜನರಿಗೆ ಆಸರೆ ಕಲ್ಪಿಸುವಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ಭಾರತಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ಇನ್ನಷ್ಟು ಬಲ ನೀಡಲಿದೆ.

Advertisement

ಹೀಗಾಗಿ ಭಾರತೀಯ ಮುಸ್ಲಿಮರನ್ನು ಎತ್ತಿ ಕಟ್ಟಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷದಿಂದ ಜಾತ್ಯತೀತ ಪಾಠ ಕೇಳುವ ಅಗತ್ಯವಿಲ್ಲ ಎಂದು ಕಿಡಿಕಾರಿದರು. ಭಾರತ-ಪಾಕ್‌ ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಭೇಟಿಯೇ ಮಾಡದ ಹಾಗೂ ಭಾರತ ಉಪಖಂಡದ ಗಡಿಯೇ ಗೊತ್ತಿರದ ನ್ಯಾಯವಾದಿ ಮಾಡಿದ ಯಡವಟ್ಟಿಗೆ ಕೇವಲ 15 ದಿನಗಳಲ್ಲಿ ಕೋಟ್ಯಂತರ ಜನರು ಮೂಲ ನೆಲೆ ಬಿಟ್ಟು ಅನ್ಯ ರಾಷ್ಟ್ರಗಳಿಗೆ ಆಶ್ರಯಕ್ಕೆ ಶಾಶ್ವತ ವಲಸೆ ಹೋಗಿರುವುದು ವಿಶ್ವದ ಇತಿಹಾಸದಲ್ಲೇ ಮೊದಲು. ವಿಭಜನೆ ಸಂದರ್ಭದಲ್ಲಿ ದೇಶಾಂತರ ಹೊರಟವರ ಸಮೀಕ್ಷೆಗೆ ವಿಮಾನಗಳನ್ನು ಬಳಸಿದ್ದು ಕೂಡ ಜಾಗತಿಕ ಮಟ್ಟದಲ್ಲಿ ಮೊದಲು. ದೇಶಾಂತರವಾಗಿ ಬಾಂಗ್ಲಾದೇಶಕ್ಕೆ ಹೋಗಿದ್ದ ಮೊದಲ
ಕಾನೂನು ಮಂತ್ರಿ ಹಿಂದೂ ಸಮುದಾಯಕ್ಕೆ ಸೇರಿದ ಒಂದೇ ಕಾರಣಕ್ಕೆ ತನ್ನ ಕೊನೆ ದಿನಗಳನ್ನು ನಿರಾಶ್ರಿತರ ಕೇಂದ್ರದಲ್ಲಿ ಕಳೆಯುವ ದುಸ್ಥಿತಿಗೆ ಸಾಕ್ಷಿಯಾದರು ಎಂದು ವಿವರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಮಾಜಿ ಶಾಸಕ ಮನೋಹರ ಐನಾಪುರ, ರವಿಕಾಂತ ಬಗಲಿ, ಆರ್‌.ಎಸ್‌. ಪಾಟೀಲ ಕೂಚಬಾಳ, ವಿಜುಗೌಡ ಪಾಟೀಲ, ವಿವೇಕಾನಂದ ಡಬ್ಬಿ, ಚಿದಾನಂದ ಚಲವಾದಿ, ಶಂಭು ಕಕ್ಕಳಮೇಲಿ, ಮಲ್ಲಮ್ಮ ಜೋಗೂರ, ಗೀತಾ ಕೂಗನೂರ, ರಜನಿ ಸಂಬಣ್ಣಿ, ರವೀಂದ್ರ ಬಿಜ್ಜರಗಿ, ಎಸ್‌.ಎಸ್‌. ಮಿಟ್ಟಲಕೋಟ, ಪ್ರಕಾಶ ಉಡುಪಿಕರ, ಎಸ್‌.ಎಸ್‌. ಬೀಳಗಿಪೀರ, ಕೃಷ್ಣಾ ಗುನ್ನಾಳಕರ, ವಿಜಯ ಜೋಶಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next