Advertisement

ಪಕ್ಷ ರಾಜಕಾರಣ ಮೆಟ್ಟಿ ನಿಂತ ಜಿಲ್ಲೆ ವಿಜಯಪುರ

03:11 PM Jul 28, 2019 | Naveen |

ವಿಜಯಪುರ: ಡಾ| ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ದಿ| ಬಿ.ಎಂ. ಪಾಟೀಲ ಅವರು ದೇಶಕ್ಕೆ ನೀಡಿದ ಕೊಡುಗೆ ಅನನ್ಯ. ಪಕ್ಷ ರಾಜಕಾರಣ ಮೀರಿ ಎತ್ತರದಲ್ಲಿ ಬೆಳೆದಿರುವ ವಿಜಯಪುರ ಜಿಲ್ಲೆಯಲ್ಲಿ ಬಿ.ಎಂ. ಪಾಟೀಲ, ಬಿ.ಕೆ. ಗುಡದಿನ್ನಿ ಅವರೆಲ್ಲ ಸಾತ್ವಿಕ ರಾಜಕಾರಣಕ್ಕೆ ಪರ್ಯಾಯ ಎಂಬಂತೆ ಜೀವಿಸಿದರು ಎಂದು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಬಣ್ಣಿಸಿದರು.

Advertisement

ಶನಿವಾರ ನಗರದ ಬಿಎಲ್ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ದಿ| ಬಿ.ಎಂ. ಪಾಟೀಲ ಸ್ಮರಣೆ ಪ್ರಯುಕ್ತ ಚಿಂತನ ಸಾಂಸ್ಕೃತಿಕ ಬಳಗ, ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬೆಳಕಿನ ದಾರಿಯಲ್ಲಿ ಭಾರತದ ಬಾವುಟ ಕುರಿತ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಳಕಟ್ಟಿ ಶ್ರೇಷ್ಠ ಸಂಶೋಧಕರು, ವಚನ ಸಾಹಿತ್ಯವನ್ನು ಸಂಶೋಧಿಸಿ, ಮುದ್ರಿಸಿ, ಮನೆ-ಮನಗಳಿಗೆ ಮುಟ್ಟಿಸಿದ ಕಾರಣಕ್ಕೆ ವಚನ ಪಿತಾಮಹ ಎನಿಸಿಕೊಂಡಿರುವ ಅವರು, ಬಸವಣ್ಣನವರ ಆಲೋಚನೆಯನ್ನು ಶಿಸ್ತು ಬದ್ಧವಾಗಿ ಜಗತ್ತಿಗೆ ಮುಟ್ಟಿಸಿದ ಕೀರ್ತಿಗೆ ಪಾತ್ರರಾಗಿದ್ದಾಸರೆ ಎಂದರು.

ಜಿಲ್ಲೆಯ ಮೂಲಕ ಈ ನಾಡಿಗೆ ಶೈಕ್ಷಣಿಕ ಗಂಗೆ ಹರಿಸಿದ ಬಂಥನಾಳ ಶಿವಯೋಗಿಗಳ ಕಾರ್ಯ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಸಾತ್ವಿಕ ರಾಜಕಾರಣಕ್ಕೆ ಇನ್ನೊಂದು ಹೆಸರಾಗಿದ್ದ ದಿ| ಬಿ.ಎಂ. ಪಾಟೀಲ ಅವರ ಹೆಸರು ಎಂದಿಗೂ ಅಜರಾಮರ. ರಾಜಕೀಯ ಸಂಸ್ಕೃತಿಯಲ್ಲಿ ಲಂಚ, ಶೋಷಣೆ ಇಲ್ಲದಂತೆ ರಾಜಕೀಯ ಮಾಡಿದ ಮಹಾನ್‌ ಪುರುಷರು ಇವರು. ಬಿ.ಎಂ. ಪಾಟೀಲ ಅವರೊಂದಿಗೆ ಒಡನಾಟ ಹೊಂದಿದ್ದ ಕಾರಣಕ್ಕೆ ಅವರು ನನ್ನನ್ನು ತಮ್ಮ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದರು. 1967ರಲ್ಲಿ ಕಾಂಗ್ರೆಸ್‌ ಇಬ್ಭಾಗವಾಗುವ ಕಾಲ ಬಂದಾಗ ಬಿ.ಎಲ್. ಪಾಟೀಲ, ಕೆ.ಎಚ್. ಪಾಟೀಲ ಹಾಗೂ ಬಿ.ಎಂ. ಪಾಟೀಲ ಅವರಿಂದ ಗಟ್ಟಿಕೊಂಡಿತ್ತು ಎಂದರು.

ಬಿಎಲ್ಡಿಇ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಬಿ.ಎಂ. ಪಾಟೀಲ ಅವರ ಸಾತ್ವಿಕ ಜೀವನವೇ ಕಾರಣ. ಅದರೊಂದಿಗೆ ಹಜರತ್‌ ಹಾಸಿಂಪೀರ್‌ ದರ್ಗಾದ 13ನೇ ಸಜ್ಜಾದೆನಶೀನ್‌ ಅವರೊಂದಿಗೂ ಅಗಾಧ ಬಾಂಧವ್ಯ ಹೊಂದಿದ್ದೆ. 13ನೇ ಪೀಠಾಧಿಪತಿಗಳು ದೇಶ, ಸಮಾಜ, ರಾಜಕಾರಣ, ಜನರ ಅಭಿವೃದ್ಧಿ ಕುರಿತು ಅನೇಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು ಎಂದರು.

Advertisement

ಬಿ.ಎಂ. ಪಾಟೀಲ ಅವರ ಪುತ್ರರಾಗಿರುವ ಎಂ.ಬಿ. ಪಾಟೀಲ ಸಹ ನೀರಾವರಿ ಸಚಿವರಾಗಿ ಪ್ರೀತಿಗೆ ಪಾತ್ರವಾಗಿದ್ದಾರೆ. ಹಿರಿಯರು ಕಟ್ಟಿ ಬೆಳೆಸಿದ ಬಿಎಲ್ಡಿಇ ಎಂಬ ಅದ್ಭುತ ಸಂಸ್ಥೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕಟ್ಟಿ, ಬೆಳೆಸಿದ ಎಂ.ಬಿ. ಪಾಟೀಲ ಇವರು, ಶಿಕ್ಷಣ ಸಂಸ್ಥೆ ಮೂಲಕ ನಾಡಿಗೆ ಉಪಕೃತ ಕೆಲಸ ಮಾಡಿದ ಮಹಾಮಹಿಮರನ್ನು ಸ್ಮರಿಸುವ ಕಾರ್ಯ ಮಾಡುತ್ತಿರುವುದು ಅನುಕರಣೀಯ ಎಂದರು.

ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬೆಳಕಿನ ದಾರಿಯಲ್ಲಿ ಭಾರತದ ಬಾವುಟ ಎಂಬ ವಿಷಯದ ಕುರಿತು ಡಾ| ರಾಘವೇಂದ್ರ ಮಠಪತಿ ಉಪನ್ಯಾಸ ನೀಡಿದರು. ಮೇಲ್ಮನೆ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕರಾದ ಆರ್‌.ಆರ್‌. ಕಲ್ಲೂರ, ಪ್ರೊ| ರಾಜು ಆಲಗೂರ, ಎನ್‌.ಎಸ್‌. ಖೇಡ, ಆರ್‌.ಆರ್‌. ಕುಲಕರ್ಣಿ, ಎಸ್‌.ಜಿ. ನಂಜಯ್ಯನಮಠ, ವಿಠ್ಠಲ ಕಟಕದೊಂಡ, ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಎಂ.ಎಸ್‌. ಮದಭಾವಿ, ಹಿರಿಯ ಸಾಹಿತಿ ಡಾ| ಆರ್‌.ಕೆ. ಕುಲಕರ್ಣಿ, ಮಹಾಂತ ಗುಲಗಂಜಿ, ಚಂದ್ರಕಾಂತ ಬಿಜ್ಜರಗಿ, ಕೆ.ಎಫ್‌. ಅಂಕಲಗಿ ಇದ್ದರು.

ಚಿಂತನ ಬಳಗದ ಕಾರ್ಯದರ್ಶಿ ಡಾ| ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಬಸವರಾಜ ಹಿರೇಮಠ ಪ್ರಾರ್ಥಿಸಿದರು.ವಿ.ಡಿ. ಐಹೊಳ್ಳಿ ಹಾಗೂ ಡಾ|ಎಸ್‌.ಟಿ. ಮೇರವಾಡೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next