Advertisement

ಕೆರೆ ಅತಿಕ್ರಮಣ ದೂರು ನೀಡಿ

01:43 PM Feb 05, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್‌ ವ್ಯಾಪ್ತಿ ಕೆರೆಗಳ ಅತಿಕ್ರಮಣದ ಕುರಿತು ಸಾರ್ವಜನಿಕರು ದೂರು ಸಲ್ಲಿಸಲು ಅನುವಾಗಲು ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ವೈ. ಎಸ್‌. ಪಾಟೀಲ ಸೂಚಿಸಿದರು.

Advertisement

ಮಂಗಳವಾರ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಕೆರೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ಜಿಪಂ ಮತ್ತು ಸಣ್ಣ ನೀರಾವರಿ ಇಲಾಖೆಗಳ ವ್ಯಾಪ್ತಿ ಕೆರೆಗಳ ಈ ಒತ್ತುವರಿಯಾಗಿರುವ ಕೆರೆಗಳ ಮತ್ತು ದಾಖಲೀಕರಣ ಆಗಿರುವ ಹಾಗೂ ದಾಖಲೀಕರಣ ಆಗದ ಕುರಿತಂತೆ ಆಯಾ ತಾಲೂಕು ತಹಶೀಲ್ದಾರರಿಗೆ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ದೂರು ಸಲ್ಲಿಸುವಂತೆ ಮನವಿ ಮಾಡಿದರು.

ಜಲ ಮೂಲಗಳ ರಕ್ಷಣೆ, ಸಂರಕ್ಷಣೆ, ಮತ್ತು ಪುನಶ್ಚೇತನ ತುರ್ತಾಗಿ ಕೈಗೊಳ್ಳುವ ಕೆರೆ ಸಂರಕ್ಷಣೆ-ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಹಿನ್ನಲೆಯಲ್ಲಿ ಕೆರೆ ಸಂರಕ್ಷಣೆ-ಅಭಿವೃದ್ಧಿ ಕಾಯ್ದೆ ಕೂಡಾ ಜಾರಿಯಲ್ಲಿರುವುದರಿಂದ ಸಂಬಂಧಿತ ಅಧಿ ಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಕೆರೆಗಳ ನಿಖರ ಅಂಕಿ ಅಂಶಗಳನ್ನು ಒಳಗೊಂಡ ಸಮಗ್ರ ಮಾಹಿತಿ ತಕ್ಷಣ ಪರಿಶೀಲಿಸಿ ಸಂಗ್ರಹಿಸಬೇಕು. ಸಣ್ಣ ನೀರಾವರಿ ವ್ಯಾಪ್ತಿಯ 156 ಹಾಗೂ ಜಿಲ್ಲಾ ಪಂಚಾಯತ್‌ ವ್ಯಾಪ್ತಿ 113 ಕೆರೆಗಳ ಸಮಗ್ರ ಮಾಹಿತಿ, ಒತ್ತುವರಿ ಕುರಿತಂತೆ ತಕ್ಷಣ ಸಮೀಕ್ಷೆ ಕೈಗೊಳ್ಳಬೇಕು. ಜಿಲ್ಲಾ ಪಂಚಾಯತ್‌ ಕೆರೆಗಳಿಗೆ ಸಂಬಂಧಪಟ್ಟಂತೆ ಆಯಾ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ಗೊತ್ತುಪಡಿಸಿದ ಅಧಿಕಾರಿಗಳಾಗಿ ನಿಯೋಜಿಸಿ ಅಧಿಕೃತ ಕೆರೆಗಳ ಸಮಗ್ರ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಸರ್ಕಾರದ ಮಟ್ಟದಿಂದ ಸಕ್ಷಮ ಪ್ರಾಧಿಕಾರಿ ಅಧಿಕಾರಿಗಳನ್ನು ಸಹ ನಿಯೋಜನೆ ಕ್ರಮ ಆಗಲಿದೆ. ಕಾರಣ ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್‌ ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಒತ್ತುವರಿ ಕುರಿತು ಮಾಹಿತಿ ಜೊತೆಗೆ ಆಯಾ ಕೆರೆಗಳ ನಿಗದಿತ ಜಮೀನು, ನೀರಾವರಿ ವ್ಯಾಪ್ತಿಯ ಕ್ಷೇತ್ರ ಸೇರಿದಂತೆ ಗಡಿ ದೃಢ ಪಡಿಸುವುದು, ಆಯಾ ಕೆರೆಗಳ ವ್ಯಾಪ್ತಿಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಬೆಳವಣಿಗೆಗೂ ಸಹ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ತಮ್ಮ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳ ಸಮಗ್ರ ಮಾಹಿತಿ ನೀಡುವಲ್ಲಿ ವಿಫಲವಾದ ಸಣ್ಣ ನೀರಾವರಿ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹ ಅಭಿಯಂತರರಿಗೆ ಕಾರಣ ನೀಡಿ ನೋಟಿಸ್‌ ಜಾರಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಉಚ್ಛ ನ್ಯಾಯಾಲಯ ನಿರ್ದೇಶನ ಇರುವ ಹಿನ್ನಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಜಿಪಂ, ಸಣ್ಣ ನೀರಾವರಿ ಇಲಾಖೆ, ಮೀನುಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಜವಾಬ್ದಾರಿ ಹೊಂದಿರುವ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಸಮಗ್ರ ಸಂಪರ್ಕವನ್ನು ಸಾಧಿಸಿ ಕೆರೆಗಳ ರಕ್ಷಣೆ, ಸಂರಕ್ಷಣೆ, ಜಿರ್ಣೋದ್ಧಾರ, ಪುನರ್‌ ರೂಪಿಸಲು ಮುಂದಾಗಬೇಕು. ಪುನರ್‌ ಸಮೀಕ್ಷೆ ಮೂಲಕ ನಿಖರ ಅಂಕಿ ಅಂಶ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ| ಔದ್ರಮ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next