Advertisement

ಕಾರ್ಮಿಕರ ನೋಂದಣಿ ಉತ್ತೇಜಿಸಿ

12:26 PM Dec 23, 2019 | Naveen |

ವಿಜಯಪುರ: ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ ಅಡಿ ಜಿಲ್ಲೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನಿಗದಿತ ಗುರಿಯಂತೆ ನೋಂದಣಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ ಕುರಿತು ನಡೆಸಿದ ಜಿಲ್ಲಾ ಮಟ್ಟದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2019-20ನೇ ಸಾಲಿನ ಅಂತ್ಯಕ್ಕೆ ಸರ್ಕಾರದಿಂದ ನಿಗದಿ ಪಡಿಸಿರುವ 27,200 ಅಸಂಘಟಿತ ಕಾರ್ಮಿಕರ ನೋಂದಣಿ ಗುರಿ ಸಾಧಿಸಬೇಕು. ಯೋಜನಾಬದ್ಧವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಸಂಘಟಿತ ಕಾರ್ಮಿಕರಿಗೆ ಈ ಯೋಜನೆ ಮಾಹಿತಿ ನೀಡುವ ಜೊತೆಗೆ ಲಾಭ ಪಡೆಯಲು ಪ್ರೇರೇಪಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ಸದರಿ ಯೋಜನೆ ವ್ಯಾಪ್ತಿಯಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು,ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು,
ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ, ಬೀಡಿ, ಕೈಮಗ್ಗ ಕಾರ್ಮಿಕರು ಬರಲಿದ್ದಾರೆ. ಈ ನಿಟ್ಟಿನಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ಸಮಯದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಕಾರ್ಮಿಕರು ಇದರ ಸದ್ಬಳಕೆ ಮಾಡಿಕೊಳ್ಳುವಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಬಿ.ಎಸ್‌. ಜಾಧವ ಮಾತನಾಡಿ, ಪಿಎಂ-ಎಸ್‌ವೈಎಂ ಯೋಜನೆ ಫಲಾನುಭವಿಗಳು 18 ವರ್ಷದಿಂದ
40 ವರ್ಷದವರಾಗಿರಬೇಕು. ಅವರ ಮಾಸಿಕ ಆದಾಯವು 15 ಸಾವಿರಕ್ಕಿಂತ ಕಡಿಮೆ ಇರಬೇಕು. ಇಎಸ್‌ಐ, ಪಿಎಫ್‌, ಎನ್‌ಪಿಎಸ್‌ ಹಾಗೂ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರಬಾರದು ಎಂಬ ಷರತ್ತಿಗೆ ಒಳಪಟ್ಟು ನೋಂದಣಿಯಾಗಲಿದ್ದಾರೆ ಎಂದರು.

ಅರ್ಹ ಫಲಾನುಭವಿಗಳು ಕಾಮನ್‌ ಸರ್ವಿಸ್‌ ಸೆಂಟರ್‌(ಸಿಎಸ್‌ ಸಿ)ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದಾಗಿರುತ್ತದೆ. ಸಿಎಸ್‌ಸಿ ವಿವರಗಳನ್ನು ಹತ್ತಿರದ ಎಲ್‌ಐಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇಎಸ್‌ಐ ಕಾರ್ಪೋರೇಷನ್‌ ಹಾಗೂ ಭವಿಷ್ಯ ನಿಧಿ  ಇಲಾಖೆ ಹಾಗೂ ವೆಬ್‌ ವಿಳಾಸ    //locator.csccloud.in ಗಳಲ್ಲಿ ಪಡೆದುಕೊಳ್ಳಬಹುದು ಎಂದು ವಿವರಿಸಿದರು.

Advertisement

ಅರ್ಹ ಸಂಘಟಿತ ಕಾರ್ಮಿಕರು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಮೊಬೈಲ್‌ (ಒಟಿಪಿ) ತೆಗೆದುಕೊಂಡು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ-ಕಂಪ್ಯೂಟರ್‌ ಸೆಂಟರ್‌)ದಲ್ಲಿ ಫಲಾನುಭವಿಗಳು ಹೆಸರು ನೋಂದಾಯಿಕೊಳ್ಳಬಹುದು. ಮೊದಲ ಕಂತಿನ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಬೇಕು. ನಂತರದ ಮಾಸಿಕ ವಂತಿಕೆ ಸಂಬಂಧಪಟ್ಟವರ ಖಾತೆಯಿಂದ ಅಟೋ ಡೆಬಿಟ್‌ ಮಾಡಲಾಗುವುದು. ನೋಂದಣಿ ನಂತರ ಫಲಾನುಭವಿಗಳ ಹೆಸರಿನಲ್ಲಿ ಯುನಿಕೊಡ್ಜನರೇಟ್‌ ಕಾರ್ಡ್‌ ವಿತರಿಸುವುದಾಗಿ ವಿವರಿಸಿದರು.

ಯೋಜನೆ ಸೌಲಭ್ಯಗಳು: ಫಲಾನುಭವಿ ಈ ಯೋಜನೆಯಡಿ 60 ವರ್ಷದ ವರೆಗೆ ವಂತಿಗೆಯನ್ನು ತುಂಬಬೇಕು. ನಂತರ 60 ವರ್ಷವರೆಗೆ ಪ್ರತಿ ತಿಂಗಳು 3 ಸಾವಿರ ರೂ.ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ. ಚಂದಾದಾರರು ಒಂದು ವೇಳೆ 10 ವರ್ಷದೊಳಗೆ ಈ ಯೋಜನೆ ಯಿಂದ ನಿರ್ಗಮಿಸಿದ್ದಲ್ಲಿ ಅವರ ವಂತಿಕೆ ಹಣ ಡಿಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ. ಅದಕ್ಕಿಂತ ಹೆಚ್ಚನ ಅವಧಿಯಲ್ಲಿ ನಿರ್ಗಮಿಸಿದ್ದಲ್ಲಿ ಅವರ ವಂತಿಕೆಯೊಂದಿಗೆ ಜಮೆಯಾದ ಬಡ್ಡಿಯನ್ನು ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. ಪಿಂಚಣಿ ಆರಂಭಗೊಂಡ ನಂತರ ಫಲಾನುಭವಿ ಮೃತಪಟ್ಟರೆ ಅವರ ಪತಿ/ಪತ್ನಿ ಮಾತ್ರ ಶೇ. 50ರಷ್ಟು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮಹೇಂದ್ರ ಕಾಪ್ಸೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ, ಕಾರ್ಮಿಕ ಇಲಾಖೆ ವಿಷಯ ನಿರ್ವಾಹಕಿ ಶಕುಂತಲಾ ತುಪ್ಪದ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next