ವಿಜಯಪುರ: ಕಾರಹುಣ್ಣಿಮೆ ಅಂಗವಾಗಿ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ರೈತರು ಓಡಿಸಿದ ಹೋರಿಗಳ ಓಟದ ಸ್ಪರ್ಧೆ ನೆರೆದವರ ಮೈ ರೋಮಾಂಚನಗೊಳಿಸಿತ್ತು. ದಿಕ್ಕೆಟ್ಟು ಓಡುತ್ತಿದ್ದ ಹೋರಿಗಳ ದಾಳಿಯಿಂದ ತಪ್ಪಿಕೊಳ್ಳಲು ನೆರೆದವರು ಪರದಾಡುವ ದೃಶ್ಯ ಸ್ಪರ್ಧಾ ವೀಕ್ಷಣೆಗೆ ಬಂದವರ ಎದೆಯಲ್ಲಿ ನಡುಕ ಉಂಟು ಮಾಡಿತ್ತು.
ಕಾರಹುಣ್ಣಿಮೆಯ ಏಳನೇ ದಿನವಾದ ರವಿವಾರ ಕಾಖಂಡಕಿ ಗ್ರಾಮದ ಪ್ರಮುಖ ಬೀದಿಯಲ್ಲಿ ಓಡುವ ಹೋರಿಗಳದ್ದೇ ಕಾರುಬಾರು ಎನ್ನುವಂತಾಗಿತ್ತು. ಕಾಖಂಡಕಿ ಗ್ರಾಮದಲ್ಲಿ ಅಬಾಲ-ವೃದ್ಧರಾದಿಯಾಗಿ ಭೂಮಿ ತಾಯಿಯ ಚೊಚ್ಚಲ ಮಗ ಅನ್ನದಾತರೆಲ್ಲ ತಮ್ಮ ನೆಚ್ಚಿನ ಹೋರಿಗಳು-ಎತ್ತುಗಳ ಮೈ ತೊಳೆದು, ಮೈಗೆಲ್ಲ ಬಣ್ಣ ಬಳಿದು, ಕೋಡುಗಳಿಗೆ ಗೊಣಸು, ಗೊಂಡೆ, ರಿಬ್ಬನ್ ಅಂತೆಲ್ಲ ತರೆಹಾವರಿ ಸಿಂಗರಿಸಿ ಸ್ಪರ್ಧೆಗೆ ಕರೆ ತಂದಿದ್ದರು.
ಅಪಾಯಕಾರಿ ಎನಿಸಿದರೂ ರೋಮಾಂಚನಕಾರಿ ದೃಶ್ಯ ಕಣ್ತುಂಬಿಕೊಳ್ಳಲು ಕರ್ನಾಟಕ ಮಾತ್ರವಲ್ಲ ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಿಂದಲೂ ಜನರು ಕಾಖಂಡಕಿ ಗ್ರಾಮದತ್ತ ಹೆಜ್ಜೆ ಹಾಕಿದ್ದರು. ಕಾಖಂಡಕಿ ಗ್ರಾಮದಲ್ಲಿ ಹೋರಿಗಳು ಓಡುವ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಮಾತ್ರವಲ್ಲದೇ ಎರಡೂ ಬದಿಯ ಮನೆಗಳ ಮೇಲ್ಛಾವಣಿ ಮೇಲೆ ನಿಂತು ವರ್ಷಕ್ಕೊಮ್ಮೆ ನಡೆಯುವ ಅಪರೂಪದ ಜಾನಪದ ಸಾಹಸವನ್ನು ಕಣ್ತುಂಬಿಕೊಳ್ಳಲು ಕಾತರಿಸಿದ್ದರು.
ಹತ್ತಾರು ಜನರು ಹಗ್ಗ ಹಾಕಿ ಹಿಡಿದರೂ ಹಿಡಿತಕ್ಕೆ ಸಿಕ್ಕದೇ ಓಡುತ್ತಿದ್ದ ಎತ್ತುಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಇಕ್ಕೆಲಗಳಲ್ಲಿ ಸಾವಿರ ಸಾವಿರ ಜನರು ಕೆಳಗೆ ನಿಂತಿದ್ದರು. ತಮ್ಮ ಮೇಲೆ ಎರಗಿ ಬರುತ್ತಿದ್ದ ಹೋರಿಗಳ ದಾಳಿಯನ್ನು ಲೆಕ್ಕಿಸದೇ ಹೋರಿಗಳ ಓಟಕ್ಕೆ ಸ್ಪ್ಫೂರ್ತಿ ತುಂಬಲು ಕೇಕೆ ಹಾಕಿ ಬೆಂಬಲಿಸುತ್ತಿದ್ದರು.
ಕಾರಹುಣ್ಣಿಮೆ ಕರಿ ಓಟದ ಸ್ಪರ್ಧೆಗೆ ತಂದಿದ್ದ ಬಲಿಷ್ಠ ಹೋರಿಗಳ ಮೂಗು ದಾರಕ್ಕೆ, ಮಗಡಕ್ಕೆ ಹಗ್ಗ ಹಾಕಿ ನಾಲ್ಕಾರು ಜನರು ಎಳೆದು ಹಿಡಿದರೂ ಶರವೇಗದಲ್ಲಿ ಓಡುತ್ತಿದ್ದ ಹೋರಿಗಳು ಇಕ್ಕೆಲಗಳಲ್ಲಿ ನೆರೆದ ಜನರ ಮಧ್ಯೆ ನುಗ್ಗಿ ಹಲವರ ಮೇಲೆ ದಾಳಿ ಮಡುವ ಯತ್ನಗಳು ನಡೆದರೂ ಸುದೈವವಶಾತ ಯಾರಿಗೂ ಈ ಬಾರಿ ಅಪಾಯ ಸಂಭವಿಸಿಲ್ಲ ಎಂಬುದು ಸಂತಸದ ಸಂಗತಿ. ಮಧ್ಯಾಹ್ನದಿಂದಲೇ ಓಡಾಡುತ್ತಿದ್ದ ಹೋರಿಗಳ ಅಬ್ಬರ ಕಡಿವಾಣ ಬಿದ್ದಿದ್ದೆ ಸಂಪ್ರದ್ದಾಯದಂತೆ ಊರ ಗೌಡರ ಹೋರಿ ಕಣಕ್ಕಿಳಿದ ನಂತರವೇ. ಸಂಜೆ ಹೋರಿಗಳ ಓಟದ ಸಂದರ್ಭದಲ್ಲೇ ಅನ್ನದಾತರ ನಿರೀಕ್ಷೆಯಂತೆ ವರುಣದೇವ ಕರುಣೆ ತೋರಿ ಭುವಿಗೆ ಮುತ್ತಿಕ್ಕುತ್ತಲೇ ಗೌಡರ ಮನೆಯ ಕೆಂದ ಹೋರಿ ಹಾಗೂ ಶ್ವೇತ ಹೋರಿಗಳು ರಂಗ ಪ್ರವೇಶಿಸಿದ್ದವು. ಗ್ರಾಮದ ಜನರು ಪಾದಪೂಜೆ ಬಳಿಕ ಕಟ್ಟಿದ ಹಗ್ಗದಿಂದ ಮುಕ್ತಿ ಪಡೆದ ಕೆಂದ-ಬಿಳಿ ಹೋರಿಗಳು ಗೌಡರ ಮನೆಗೆ ಮರಳಿ ಓಡಲಾರಂಭಿಸಿದವು.
ಹೀಗೆ ಓಡು ಗೌಡರ ಮನೆಯನ್ನು ಯವ ಬಣ್ಣದ ಹೋರಿ ಮೊದಲು ಪ್ರವೇಶ ಪಡೆಯುತ್ತದೋ ಆ ಬಣ್ಣದ ಬೆಳೆಗೆ ಯೋಗ ಜಾಸ್ತಿ ಎಂಬುದು ಆನ್ನದಾತನ ನಂಬಿಕೆ. ಬಿಳಿ ಹೋರಿ ಮೊದಲು ಮನೆ ಪ್ರವೇಶಿಸಿದರೆ ಜೋಳ, ಬಳೆ, ಕುಸುಬೆಯಂಥ ಬೆಳೆ ಹೆಚ್ಚವು ಬೆಳೆಯುತ್ತವೆ. ಕಂದೆತ್ತು ಮೊದಲು ಗೌಡರ ಮನೆ ಸೇರಿದರೆ ಮೆಕ್ಕೆಜೋಳ, ಸಜ್ಜೆ, ಗೋದಿ, ಮುಕಣಿಯಂಥ ಬೆಳೆಯ ಇಳುವರಿ ಹೆಚ್ಚು ಎಂಬ ನಂಬಿಕೆ ಇದೆ.
ಅಂತಿಮವಾಗಿ ಈ ವರ್ಷದ ಕರ ಹುಣ್ಣಿಮೆ ಹೋರಿಗಳ ಓಟದಲ್ಲಿ ಕೆಂದು ಬಣ್ಣದ ಹೋರಿ ಮೊದಲು ಮುಂಚೂಣಿಯಲ್ಲಿದ್ದ ಕಾರಣ ಗೋಧಿ, ಸಜ್ಜೆ ಬೆಳೆ ಹೆಚ್ಚಿನ ಇಳುವರಿ ಎಂದು ಕೇಕೆ ಹಾಕಿ ಸಂಭ್ರಮಿಸಿದರು.