Advertisement
ನಗರದ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 15ನೇ ಸಾಮಾನ್ಯ ಸಭೆಯಲ್ಲಿ ಡೋಣಿ ದಿನ ಪ್ರವಾಹ ಪ್ರಸ್ತಾಪಿಸಿದ ಹಿರಿಯ ಸದಸ್ಯ ಉಮೇಶ ಕೋಳಕೂರು, ಡೋಣಿ ನದಿ ಪ್ರವಾಹದಿಂದಾಗಿ ನದಿ ತೀರ ಪ್ರದೇಶದ ಜನರು ಅದರಲ್ಲೂ ಅನ್ನದಾತರು ಬದುಕನ್ನು ಕಳೆದುಕೊಂಡಿದ್ದಾರೆ. ಡೋಣಿ ನದಿ ಪ್ರತಿ ವರ್ಷ ಜಮೀನುಗಳಿಗೆ ನುಗ್ಗಿ ಬೆಳೆಯ ಜೊತೆಗೆ ಫಲವತ್ತಾದ ಮಣ್ಣನ್ನು ಕೊಚ್ಚಿಕೊಂಡು ಹೋಗುವ ಮೂಲಕ ನದಿ ಪಾತ್ರದ ಕೃಷಿ ವ್ಯವಸ್ಥೆ ಮೇಲೆಯೇ ಗಂಭೀರ ಪರಿಣಾಮ ಬೀರುತ್ತಿದೆ. ಪ್ರವಾಹ ಬಂದಾಗ ನದಿಯಲ್ಲಿ ತುಂಬಿರುವ ಹೂಳು ತೆಗೆಯುವ ಮಾತುಗಳು ಕೇಳಿ ಬಂದರೂ ಅನುಷ್ಠಾನಕ್ಕೆ ಬರುವುದಿಲ್ಲ. ಕನಿಷ್ಠ ನದಿಯ ಅಬ್ಬರದಿಂದ ಜಮೀನಿನ ಮಣ್ಣಿನ ಕೊಚ್ಚುವಿಕೆಯನ್ನಾದರೂ ತಡೆಯಲು ಅರಣ್ಯೀಕರಣಕ್ಕಾದರೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
Related Articles
Advertisement
ಕಣ್ಣಳತೆಯಿಂದ ಸರ್ವೇ ಮಾಡುವ ವಿಧಾನ ಅವೈಜ್ಞಾನಿಕವಾಗಿದೆ ಎಂದು ದೂರಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಜಿಪಂ ಸಿಇಒ ಗೋವಿಂದರೆಡ್ಡಿ, ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ದೇಶಾದ್ಯಂತ ಏಕರೂಪದಲ್ಲೇ ಸಮೀಕ್ಷೆ ನಡೆಯಲಿದೆ.
ಆಯಾ ಗ್ರಾಮದ ಸರ್ವೇ ನಂಬರ್ ಆಯ್ಕೆ ಮಾಡುವ ಕಂಪ್ಯೂಟರ್, ಸಮೀಕ್ಷೆ ಸರಿಯಾಗಿದ್ದರೆ ಬೆಳೆ ಚೆನ್ನಾಗಿದೆ ಎಂದು ಇಡೀ ಗ್ರಾಮಕ್ಕೆ ಅದನ್ನೇ ಅನ್ವಯಿಸಲಾಗುತ್ತದೆ. ಬೆಳೆ ವಿಫಲವಾಗಿದ್ದರೆ, ಇಡೀ ಗ್ರಾಮಕ್ಕೆ ಇದೇ ಅನ್ವಯವಾಗಲಿದೆ. ಹೀಗಾಗಿ ಬೆಳೆಹಾನಿ ದೃಢೀಕೃತ ಈ ವ್ಯವಸ್ಥೆ ಕೇಂದ್ರ ರೂಪಿಸಿರುವ ಮಾನದಂಡ ಎಂದು ವಿವರಿಸಿದರು.
ಇದಕ್ಕೆ ತೀವ್ರ ಆಕ್ಷೇಪಿಸಿದ ಜ್ಯೋತಿ ಅಸ್ಕಿ, ಇದೊಂದು ಸಮೀಕ್ಷಾ ಮಾನದಂಡವೇ, ಕಂಪ್ಯೂಟರ್ ಆಧಾರಿತ ಈ ಸಮೀಕ್ಷೆಯಿಂದ ಬೆಳೆಹಾನಿಯಾದ ಸಂದರ್ಭದಲ್ಲಿ ನಿಜವಾದ ನಷ್ಟ ಅನುಭವಿಸಿದ ರೈತ ಬೆಳೆ ವಿಮೆ ಪದ್ಧತಿ ಸೌಲಭ್ಯ ಪಡೆಯುವಲ್ಲಿ ಅನ್ಯಾಯಕ್ಕೊಳಗಾಗುತ್ತಾನೆ. ಸದರಿ ಮಾನದಂಡಗಳನ್ನು ಅವಲೋಕಿಸಿದರೆ ಬೆಳೆ ವಿಮಾ ಯೋಜನೆ ರೈತರಿಗಿಂತ ಕಂಪನಿಗಳಿಗೆ ಹೆಚ್ಚಿನ ಲಾಭ ಮಾಡಿಕೊಡಲು ರೂಪಿಸಿದ ಯೋಜನೆ ಎನಿಸಿದೆ ಎಂದು ಕಿಡಿ ಕಾರಿದರು.
ಬೆಳೆ ಇಡೀ ಪ್ರಕ್ರಿಯೆ ಜಿಪಂ ಸದಸ್ಯರ ಗಮನಕ್ಕೇ ಬರುವುದಿಲ್ಲ. ಹಲವು ಸಂದರ್ಭದಲ್ಲಿ ಈ ಮಾನದಂಡದಿಂದ ತಾಲೂಕಿಗೆ ಅನ್ಯಾಯವಾಗಲಿದೆ ಎಂದು ಬಿ.ಆರ್. ಎಂಟಮಾನ್ ಸೇರಿದಂತೆ ಇತರೆ ಸದಸ್ಯರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಗೋವಿಂದರೆಡ್ಡಿ, ಬೆಳೆವಿಮೆ ಸಮೀಕ್ಷೆ, ಕಟಾವು ಸೇರಿದಂತೆ ಎಲ್ಲವೂ ಜಿಪಂ ಸದಸ್ಯರ ಸಮ್ಮುಖದಲ್ಲೇ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿರುವ ಅನ ಧಿಕೃತ ಗೊಬ್ಬರ ಅಂಗಡಿಗಳ ಮೇಲೆ ತಕ್ಷಣವೇ ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಬೇಕು ಎಂದು ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಸೂಚಿಸಿದಾಗ, ಈಗಾಗಲೇ ಜಿಲ್ಲೆಯಲ್ಲಿ ಅನಧಿಕೃತವಾಗಿ ತೆರೆಯಲಾಗಿದ್ದ 17 ಗೊಬ್ಬರ ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಆಕ್ಷೇಪಿಸಿದ ಸದಸ್ಯ ಕಲ್ಲಪ್ಪ ಕೊಡಬಾಗಿ, ಜಿಲ್ಲೆಯಲ್ಲಿ ಕೇವಲ 17 ಮಾತ್ರವಲ್ಲ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅನಧಿಕೃತ ಗೊಬ್ಬರ ಅಂಗಡಿಗಳಿವೆ. ಅನಧಿಕೃತ ಗೊಬ್ಬರ-ಕ್ರಿಮಿನಾಶಕ ಅಂಗಡಿಗಳ ಹಾವಳಿ ವ್ಯಾಪಕವಾಗಿದ್ದು, ರೈತರು ಇದರಿಂದ ಮೋಸಕ್ಕೊಳಗಾಗುತ್ತಿದ್ದಾರೆ. ಈ ಗಂಭೀರ ಸಮಸ್ಯೆಗೆ ಕಡಿವಾಣ ಹಾಕುವ ವ್ಯವಸ್ಥೆಯೇ ಇಲ್ಲವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ತಕ್ಷಣವೇ ಜಿಲ್ಲೆಯಲ್ಲಿರುವ ಅನಧಿಕೃತ ಗೊಬ್ಬರ ಅಂಗಡಿಗಳನ್ನು ಸಂಪೂರ್ಣ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಕೃಷಿ ಹೊಂಡ ನಿರ್ಮಿಸಿಕೊಂಡು ವರ್ಷ ಕಳೆದರೂ ಅಧಿಕಾರಿಗಳು ಫಲಾನುಭವಿ ರೈತರಿಗೆ ಬಿಲ್ ಪಾವತಿಸಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸಿಬಿಐ ತನಿಖೆ ನಡೆಯುತ್ತಿರುವ ಕಾರಣ ನಮ್ಮಿಂದ ಏನೂ ಮಾಡಲಾಗದು ಎಂದು ಸಬೂಬು ಹೇಳುತ್ತಾರೆ. ಹಲವು ರೈತರು ಮಕ್ಕಳ ಮದುವೆ ಮುಂದಕ್ಕೆ ಹಾಕಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಇಷ್ಟಾದರೂ ಅಧಿಕಾರಿಗಳು ನೆಪಗಳನ್ನುಹೇಳುತ್ತಲೇ ಇದ್ದಾರೆ ಎಂದು ಕಿಡಿಕಾರಿದರು. ಕೃಷಿ ಹೊಂಡಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಕೃಷಿ ಹೊಂಡಗಳ ಅನುದಾನ ಬಿಡುಗಡೆಗೆ ಜಿಪಿಎಸ್, ಫೋಟೋ ಅಳವಡಿಕೆಯಂತ ಪ್ರಕ್ರಿಯೆ ಚಾಲನೆಯಲ್ಲಿದೆ. ಇದರಿಂದ ಅನುದಾನ ಬಿಡುಗಡೆ ವಿಳಂಬವಾಗುತ್ತಿದೆಯೇ ಹೊರತು ಸಿಬಿಐ ತನಿಖೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.