ವಿಜಯಪುರ: ಪ್ರವಾಸೋದ್ಯಮ ವಿಷಯದಲ್ಲಿ ನಿರಂತರ ಶೋಷಣೆ ಅನುಭವಿಸುತ್ತಿದ್ದ ವಿಜಯಪುರ ಜಿಲ್ಲೆಗೆ ಕೊನೆಗೂ ಆದ್ಯತೆ ಸಿಗತೊಡಗಿದೆ. ಅಂತಾರಾಷ್ಟ್ರೀಯ ಪ್ರವಾಸಿ ಮೇಳದ ಅಂಗವಾಗಿ ವಿಶ್ವದ ಪ್ರವಾಸಿಗರನ್ನು ಕರ್ನಾಟಕದತ್ತ ಆಕರ್ಷಿಸಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ವಿದೇಶಿ ಪ್ರವಾಸಿಗರನ್ನು ಕರೆ ತರುವ ಗುಮ್ಮಟ ನಗರಿಗೂ ಕರೆ ತರುವ ಪಟ್ಟಿಯಲ್ಲಿ ವಿಜಯಪುರಕ್ಕೆ ಸ್ಥಾನ ಸಿಕ್ಕಿದೆ.
Advertisement
ಆ. 25ರಿಂದ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿ ಮೇಳಕ್ಕೆ ಚಾಲನೆ ದೊರೆತಿದ್ದು, ವಿದೇಶಿಗರನ್ನು ರಾಜ್ಯದ ಪ್ರವಾಸಿ ತಾಣಗಳ ವೀಕ್ಷಣೆಗೆ ಕರೆ ತರುವ ವಿಶಿಷ್ಟ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯನ್ನು ಸೇರಿಸಲಾಗಿದೆ. ಈ ವರೆಗೆ ರಾಜ್ಯದ ದೇಶ-ವಿದೇಶಿ ಪ್ರವಾಸಿಗರ ಯಾವುದೇ ಪ್ಯಾಕೇಜ್ ಅಥವಾ ಯೋಜನೆಯಲ್ಲಿ ವಿಶ್ವವಿಖ್ಯಾತ ಗೋಲಗುಮ್ಮಟ ಸೇರಿದಂತೆ ಐತಿಹಾಸಿಕ ನೂರಾರು ಅಪರೂಪದ ಹಾಗೂ ವಿಶಿಷ್ಟ ವಾಸ್ತು ಶೈಲಿಯ ಸ್ಮಾರಕಗಳ ವೀಕ್ಷಣೆ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯನ್ನು ಸೇರಿಸುತ್ತಲೇ ಇರಲಿಲ್ಲ.
Related Articles
Advertisement
ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ 18 ಆಸನಗಳ ಪ್ರತ್ಯೇಕ ಬಸ್‌ನಲ್ಲಿ ವಿಜಯಪುರ ನಗರದ ಗೋಲಗುಮ್ಮಟ ಆವರಣಕ್ಕೆ ಶುಕ್ರವಾರ ಸಂಜೆ ಬಂದಿಳಿದ ವಿದೇಶಿ ಪ್ರವಾಸಿ ತಜ್ಞರನ್ನು ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಸೋಮಲಿಂಗ ಗೆಣ್ಣೂರ ಹೂಗುಚ್ಚ ನೀಡಿ ಸ್ವಾಗತಿಸಿದರು. ಪ್ರವಾಸಿ ಜಿಲ್ಲಾ ಸಮಾಲೋಚಕ ಮಿಥುನ ರೆಡ್ಡಿ ಹಾಗೂ ಸಿಬ್ಬಂದಿ ಹಾಗೂ ಪ್ರವಾಸೋದ್ಯಮ ನಿಗಮದ ಸಿಬ್ಬಂದಿ ಕೈ ಮುಗಿದು, ಹೂಗುಚ್ಚ ನೀಡಿ ಸ್ವಾಗತ ನೀಡಿದರು. ತಂಡದಲ್ಲಿ ವೃದ್ಧರು ಹಾಗೂ ಮಹಿಳೆಯರು ಇದ್ದು, ಬಸ್‌ನಿಂದ ಇಳಿಯುವಾಗ ಕೈಚಾಚಿ ಸಹಾಯ ಮಾಡಿದ್ದು ಗನಮನ ಸೆಳೆಯಿತು. ನಂತರ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗುಮ್ಮಟ ನಗರಿಗೆ ಬರ ಮಾಡಿಕೊಂಡಿತು.
ಇದಾದ ಬಳಿಕ ಬಂಜಾರಾ ಬುಡಕಟ್ಟು ಸಮುದಾಯದ ಮಹಿಳೆಯರು ಹಣೆಗೆ ತಿಲಕ ಇಟ್ಟು, ಆರತಿ ಬೆಳಗಿ ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದರು. ನಂತರ ಸ್ಮಾರಕ ವೀಕ್ಷಣೆಗೆ ತೆರಳಿದ ವಿದೇಶಿ ಪ್ರವಾಸಿಗರ ತಂಡವನ್ನು ಬಂಜಾರಾ ಪಾರಂಪರಿಕ ನೃತ್ಯದ ಮೂಲಕ ಮನರಂಜಿಸಿತು.
ವಿಶ್ವದ ಅಚ್ಚರಿ ಎನಿಸಿರುವ ಅಪರೂಪದ ವಾಸ್ತುವಿನ್ಯಾಸ-ಶೈಲಿಯನ್ನು ಹೊಂದಿರುವ ಗೋಲಗುಮ್ಮಟಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ತಂಡ, ಆದಿಲ್ ಶಹಾ ಎಂಬ ರಾಜ ಈ ಸ್ಮಾರಕ ಕಟ್ಟುವಲ್ಲಿ ತೋರಿದ ಆಸಕ್ತಿ ಹಾಗೂ ಅದರಿಂದ ಹೊರ ಹೊಮ್ಮುವ ಸಪ್ತ ಪ್ರತಿಧ್ವನಿಯ ತಂತ್ರಜ್ಞಾನ ಕೇಳಿ ಬೆರಗು ತೋರಿತು. ರಾಜ್ಯವನ್ನು ಸುತ್ತಲು ಬಂದಿರುವ ವಿದೇಶಿ ಪ್ರವಾಸಿಗರ ತಂಡಕ್ಕೆ ಪ್ರವಾಸಿ ತಾಣಗಳ ಕುರಿತು ಪ್ರವಾಸೋದ್ಯಮ ನಿಗಮದ ಗೈಡ್ ಉಮೇಶ ರಾಠೊಡ ಮಾರ್ಗದರ್ಶನ ನೀಡುತ್ತಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಆಂತಾರಾಷ್ಟ್ರೀಯ ಪ್ರವಾಸಿ ಮೇಳ-2019 ಆಯೋಜಿಸಿದೆ. ವಿದೇಶದಲ್ಲಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಉನ್ನತೀಕರಣ ಹಾಗೂ ಹೊಟೇಲ್ ಉದ್ಯಮ ಉನ್ನತೀಕರಣಕ್ಕಾಗಿ ಆಕರ್ಷಿಸಲು ವಿದೇಶಿ ಪ್ರವಾಸಿ ಟ್ರಾವೆಲ್ ಏಜೆನ್ಸಿಗಳ ತಂಡವನ್ನು ರಾಜ್ಯದ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿಸಲು ಮುಂದಾಗಿದೆ.
ರಾಜ್ಯ ಸರ್ಕಾರ ಪ್ರವಾಸೋದ್ಯಮ ಬಲ ಪರಿಸುವ ಮಹತ್ವಾಕಾಂಕ್ಷೆಯ ಈ ವಿಶೇಷ ಪ್ರವಾಸಿ ಪ್ಯಾಕೇಜ್‌ಗೆ ಬೆಂಗಳೂರಿನಲ್ಲಿ ಆ. 28ರಂದು ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. 4 ತಂಡಗಳಲ್ಲಿ ರಾಜ್ಯದ ವಿವಿಧ ಭಾಗಗಳಿಗೆ 30, 14 ಹಾಗೂ 18 ಬೆಂಗಳೂರಿನಿಂದ ಪ್ರಯಾಣ ಆರಂಭಿಸಿರುವ ವಿದೇಶಿ ಪ್ರವಾಸಿಗರ ತಂಡ ರಾಜ್ಯದ ಮೈಸೂರು, ಬಂಡಿಪುರ, ಹಾಸನ ಜಿಲ್ಲೆಯ ಪ್ರವಾಸಿ ಪ್ಯಾಕೇಜ್‌ಗಳಲ್ಲಿ ತೆರಳಿದೆ.
ವಿಜಯಪುರ ತಂಡ ಹಂಪಿ ತಾಣದಿಂದ ಪ್ರವಾಸ ಆರಂಭಿಸಿದ್ದು, ಹಂಪಿ-ಕಮಲಾಪುರ ಭೇಟಿ ನೀಡಿ ಸುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿದೆ. ಇದೀಗ ವಿಜಯಪುರ ನಗರಕ್ಕೆ ಆಗಮಿಸಿದ್ದು, ಗೋಲಗುಮ್ಮಟ ಹಾಗೂ ಇಬ್ರಾಹಿಂ ರೋಜಾ ಐತಿಹಾಸಿಕ ಪ್ರವಾಸಿ ತಾಣಗಳ ವೀಕ್ಷಣೆ ಮಾಡುತ್ತಿದೆ. ವಿದೇಶಿ ಪ್ರವಾಸಿ ತಜ್ಞರಿಗೆ ವಿಜಯಪುರ ಜಿಲ್ಲೆಯ ಐತಿಹಾಸಿಕ ಮಹತ್ವ, ಇಲ್ಲಿನ ಪರಿಸರ, ಪರಂಪರೆಗಳ ಕುರಿತು ಅಮೀನುದ್ದೀನ್ ಹುಲ್ಲೂರು ಹಾಗೂ ರಾಜಶೇಖರ ಮಠಪತಿ ಸ್ಥಾನಿಕ ಮಹತ್ವಗಳ ಕುರಿತು ಮಾರ್ಗದರ್ಶನ ಮಾಡಿದರು.
ಸಪ್ತ ಪ್ರತಿಧ್ವನಿಗಳ ವಿಶಿಷ್ಟ ಹಾಗೂ ಅಪರೂಪದ ವಿಶ್ವದ ಆಚ್ಚರಿಯ ಸ್ಮಾರಕ ಗೋಲಗುಮ್ಮಟ ಹಾಗೂ ಇಬ್ರಾಹೀಂ ರೋಜಾ ಸೇರಿದಂತೆ ಪಾರಂಪರಿಕ ವಿಜಯಪುರ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ದರ್ಜೆಯ ಸ್ಮಾರಕಗಳ ಕುರಿತು ವಿದೇಶಿ ಪ್ರವಾಸಿ ತಜ್ಞರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.
ಶನಿವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ತೆರಳಲಿರುವ ವಿದೇಶಿ ಪ್ರವಾಸಿ ತಜ್ಞರ ತಂಡ, ಐಹೊಳೆ ಹಾಗೂ ಪಟ್ಟದಕಲ್ಲ ಸ್ಮಾರಕ ವೀಕ್ಷಿಸಿ ಬಾದಾಮಿ ಪಟ್ಟಣದಲ್ಲಿ ತಂಗಲಿದೆ. ರವಿವಾರ ಬಾದಾಮಿ ಗುಹಾಂತರ ದೇವಾಲಯಗಳ ವೀಕ್ಷಣೆ ಮಾಡಲಿದೆ. ಸಂಜೆ ಹೊಸಪೇಟೆಗೆ ಪ್ರಯಾಣ ಬೆಳೆಸಿ ತಂಗಲಿದ್ದು, ಸೋಮವಾರ ಬೆಂಗಳೂರಿಗೆ ಪ್ರಯಾಣಿಸಲಿದೆ.