ವಿಜಯಪುರ: ಕಬ್ಬು ಪೂರೈಕೆ ಮಾಡಿದ ರೈತರಿಗೆ ಬಾಕಿ ಹಣ ಸಂದಾಯ ಮಾಡದಿದ್ದಲ್ಲಿ ಬರುವ ದಿನಗಳಲ್ಲಿ ಕಾರಜೋಳದ ಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆ ಹರಾಜಿಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭೂಬಾಲನ್ ಎಚ್ಚರಿಸಿದ್ದಾರೆ.
ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾಗಿರುವ ಬಾಕಿ ಹಣ 68.44 ಕೋಟಿ ರೂ. ಪಾವತಿ ಮಾಡಿಲ್ಲ. ನಿಗದಿತ ಅವಧಿಯಲ್ಲಿ ರೈತರಿಗೆ ಬಿಲ್ ಪಾವತಿಸದ ಕಾರಣ ಸಕ್ಕರೆ (ನಿಯಂತ್ರಣ) ಕಾಯ್ದೆ ಅನ್ವಯ ಸದರಿ ಸಕ್ಕರೆ ಕಾರ್ಖಾನೆಯ ಭೂಬಾಕಿ ರೂಪದಲ್ಲಿ ಬಡ್ಡಿ ಸಮೇತ ಬಿಲ್ ವಸೂಲಿ ಮಾಡಲಾಗುತ್ತದೆ. ಈ ಕುರಿತು ವಿಜಯಪುರ ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಬೆಂಗಳೂರಿನ ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರ ಕಛೇರಿಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕಬ್ಬು ಸಾಗಿಸಿದ ರೈತರಿಗೆ ನೀಡಬೇಕಾದ ಬಾಕಿ ಹಣ ಬಡ್ಡಿ ಸೇರಿದಂತೆ 70.80 ಕೋಟಿ ರೂ. ಇದ್ದು, ಬಿಲ್ ಪಾವತಿಸಲು ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿತ್ತು. ಆದರೂ ಸದರಿ ಕಾರ್ಖಾನೆಯವರು ಸ್ಪಂದಿಸದ ಕಾರಣ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮೇರೆಗೆ ಶ್ರೀಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆ ಹರಾಜಿಗೆ ಯೋಜಿಸಿದೆ.
ಸಕ್ಕರೆ ಕಾರ್ಖಾನೆಯ ಆಸ್ತಿಗಳ ಭೂ ದಾಖಲೆಗಳಲ್ಲಿ 70.80 ಕೋಟಿ ರೂ. ಹಣವನ್ನು ಬೋಜಾ ದಾಖಲು ಮಾಡಿ ಗೇಣಿ ಮತ್ತು ಪಹಣಿ ಪತ್ರಿಕೆಗಳನ್ನು ಕಚೇರಿ ಸಲ್ಲಿಸುವಂತೆ ಬಬಲೇಶ್ವರ ತಹಶೀಲ್ದಾರರಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ನಿಗದಿತ ಅವಧಿಯಲ್ಲಿ ಹಣವನ್ನು ಪಾವತಿಸದೇ ಇದ್ದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯ ಸಕ್ಕರೆ ಕಾರ್ಖಾನೆಯನ್ನು ಹರಾಜು ಹಾಕಲು ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.