Advertisement

ಅದ್ಭುತ ಪ್ರವಾಸಿ ತಾಣ-ಸೌಲಭ್ಯ ಗೌಣ

10:50 AM Sep 01, 2019 | Naveen |

ಜಿ.ಎಸ್‌. ಕಮತರ
ವಿಜಯಪುರ:
ಕರ್ನಾಟಕದಲ್ಲಿ ಪ್ರವಾಸೋದ್ಯಮ ಬಲಪಡಿಸುವ ಉದ್ದೇಶದಿಂದ ರಾಜ್ಯದಲ್ಲಿ ಪ್ರವಾಸಿ ತಾಣಗಳ ಅಧ್ಯಯನ ಪ್ರವಾಸ ಆರಂಭಿಸಿರುವ ವಿದೇಶಿ ಪ್ರವಾಸಿಗರ ತಂಡ ರಾಜ್ಯದ ಹಾಗೂ ವಿಜಯಪುರ ಪ್ರವಾಸಿ ವ್ಯವಸ್ಥೆ ಕುರಿತು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

ಜಾಗತಿಕ ಮಟ್ಟದಲ್ಲಿ ರಾಜ್ಯದ ಪ್ರವಾಸಿ ತಾಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡಿ, ವಿದೇಶಿ ಪ್ರವಾಸಿಗರನ್ನು ರಾಜ್ಯಕ್ಕೆ ಸೆಳೆಯುವುದು ಇಂದಿನ ಜರೂರಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸಿ ಸಾರಿಗೆ ಪ್ರದರ್ಶನ ಮೇಳದ ಅಂಗವಾಗಿ ಜಾಗತಿಕ ಮಟ್ಟದಲ್ಲಿ ಪ್ರವಾಸಿ ವ್ಯವಸ್ಥೆಯಲ್ಲಿ ಹೆಸರು ಮಾಡಿರುವ ವಿದೇಶಿ ಪ್ರವಾಸಿ ತಜ್ಞರ ಐದು ತಂಡಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ಅಧ್ಯಯನಕ್ಕೆ ಕಳಿಸಿದೆ. ಪತ್ರಕರ್ತರು, ಇತಿಹಾಸ ತಜ್ಞರು, ವಿಡಿಯೋಗ್ರಾಫ‌ರ್‌ಗಳು, ಪ್ರವಾಸೋದ್ಯಮ ಪ್ರಚಾರದ ಕಿರುಚಿತ್ರ ತಯಾರಕರು, ವಿದೇಶಿ ಪ್ರವಾಸಿ ಟ್ರಾವೆಲ್ ಏಜೆನ್ಸಿಗಳ ವಿಶೇಷ ಪ್ಯಾಕೇಜ್‌ ಆಯೋಜಕರು ಹೀಗೆ ಪ್ರವಾಸೋದ್ಯಮದಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ವಿಷಯಗಳಲ್ಲಿ ನುರಿತವರನ್ನು ಅಧ್ಯಯನಕ್ಕೆ ಕಳಿಸಿದೆ.

ವಿಜಯಪುರಕ್ಕೆ ಆಗಮಿಸಿದ್ದ ತಂಡದ ಬಹುತೇಕ ವಿದೇಶಿ ಪ್ರವಾಸಿ ತಜ್ಞರು ವಿಜಯಪುರ ನಗರದಲ್ಲಿ ಆದಿಲ್ ಶಾಹಿ ವಂಶಸ್ಥ ರಾಜರು ನಿರ್ಮಿಸಿರುವ ಸ್ಮಾರಕಗಳನ್ನು ಕಂಡು ನಿಬ್ಬೆರಗಾಗಿದ್ದಾರೆ. ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ವಾಸ್ತು ವಿನ್ಯಾಸ ಹಾಗೂ ವಿಭಿನ್ನ ಸ್ವರೂಪದ ಸ್ಮಾರಕಗಳು, ಅದರಲ್ಲೂ ಜಲ ಸಂರಕ್ಷಣೆ ವಿಷಯದಲ್ಲಿ ರೂಪಿಸಿರುವ ವ್ಯವಸ್ಥೆ ಕುರಿತು ಅಚ್ಚರಿ ವ್ಯಕ್ತಪಡಿಸಿದೆ.

ಇಷ್ಟೆಲ್ಲ ಪಾರಂಪರಿಕ ಶ್ರೀಮಂತಿಕೆ ಇರುವ ವಿಜಯಪುರ ಜಿಲ್ಲೆ ಜಾಗತಿಕ ಮಟ್ಟದಲ್ಲಿ ಇಂದಿನ ಆಧುನಿಕ ಯುಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರ ಪಡೆದಿಲ್ಲ. ಇಲ್ಲಿನ ಪಾರಂಪರಿಕ ತಂತ್ರಜ್ಞಾನ, ವಾಸ್ತು ಜ್ಞಾನಗಳು ಈಗಲೂ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಪರಿಚಯವೇ ಇಲ್ಲ. ಕರ್ನಾಟಕದಲ್ಲಿ ವಿಜಯಪುರ ಸೇರಿದಂತೆ ನೂರಾರು ಸ್ಥಳಗಳಲ್ಲಿ ಪಾರಂಪರಿಕ ವಿಶಿಷ್ಟತೆಯ ಪ್ರವಾಸಿ ತಾಣಗಳಿಗೆ ಪ್ರವಾಸೋದ್ಯಮದ ಸ್ಪರ್ಶ ಸಿಕ್ಕಿಲ್ಲ. ಸ್ಮಾರಕಗಳನ್ನು ಸಮರ್ಥವಾಗಿ ನಿರ್ವಹಿಸಿ, ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಆಕರ್ಷಿಸುವ ವ್ಯವಸ್ಥೆ ಮಾಡಿಕೊಂಡಿಲ್ಲ ಎಂಬುದು ವಿದೇಶಿ ಪ್ರವಾಸಿಗರ ಅಭಿಪ್ರಾಯ.

ವಿಜಯಪುರ, ಹಂಪಿ ಸೇರಿದಂತೆ ಬಹುತೇಕ ಐತಿಹಾಸಿಕ ಸ್ಮಾರಕಗಳು ವಿರೂಪಗೊಂಡಿವೆ. ಸ್ಮಾರಕಗಳ ಮೇಲೆ ದೇಶಿ ಪ್ರವಾಸಿಗರು ತಮ್ಮ ಹೆಸರು ಕೆತ್ತುವ ಮೂಲಕ ವಿಕೃತಿ ಮೆರೆದು ಸ್ಮಾರಕಗಳ ಸೌಂದರ್ಯ ಹಾಳು ಮಾಡಿರುವುದು ಕಣ್ಣಿಗೆ ರಾಚುತ್ತವೆ. ಇಂಥ ಸಂಗತಿಗಳು ಪಾರಂಪರಿಕ ತಾಣಗಳ ಆಸಕ್ತ ಪ್ರವಾಸಿಗರನ್ನು ದೂರ ಮಾಡುತ್ತವೆ. ಸ್ಮಾರಕ ವಿರೂಪಿಗಳ ವಿರುದ್ಧ ಕಟ್ಟುನಿಟ್ಟಾಗಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ದೇಶ-ವಿದೇಶಿ ಪ್ರವಾಸಿಗರಲ್ಲಿ ಸ್ಮಾರಕಗಳ ಭದ್ರತೆ ಕುರಿತು ಭರವಸೆ ಮೂಡಿಸಬೇಕು. ಸ್ಥಾನಿಕ ಸ್ಮಾರಕಗಳ ಮೌಲ್ಯ, ಮಹತ್ವಗಳ ಕುರಿತು ಸ್ಥಳೀಯರಿಗೆ ಮನವರಿಕೆ ಮಾಡಿಕೊಡಬೇಕಿದೆ.

Advertisement

ಇದಲ್ಲದೇ ವಿಶ್ವವಿಖ್ಯಾತ ಹಂಪಿ, ವಿಜಯಪುರ ಸ್ಮಾರಕಗಳ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ, ಬಿಡಾಡಿ ದನಗಳ ದಾಂಗುಡಿಗಳಂಥ ವ್ಯವಸ್ಥೆ ದಯನೀಯತೆಯನ್ನು ಬಯಸದ ವಿದೇಶಿ ಪ್ರವಾಸಿಗರನ್ನು ರಾಜ್ಯ ಪ್ರವಾಸದಿಂದ ವಿಮುಖರನ್ನಾಗಿಸುತ್ತವೆ. ಧಾರ್ಮಿಕ ಸ್ಮಾರಕಗಳ ಬಳಿ ಭಿಕ್ಷುಕರ ದೈನೇಶಿ ಸ್ಥಿತಿ ಪ್ರವಾಸಿಗರಲ್ಲಿ ಮಾನಸಿಕ ಕ್ಷೋಬೆ ಉಂಟು ಮಾಡುತ್ತವೆ.

ಎಲ್ಲೆಂದರಲ್ಲಿ ಗುಟ್ಕಾ ಉಗಿದು ಪರಿಸರಕ್ಕೆ ಧಕ್ಕೆ ಹಾಗೂ ಅತಿರೇಕದ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಸಿ, ಎಲ್ಲೆಂದರಲ್ಲಿ ಎಸೆಯುತ್ತಿರುವುದು ಪಾರಂಪರಿಕ ಸ್ಮಾರಕಗಳ ಶ್ರೀಮಂತಿಕೆ ಹಾಗೂ ಪರಿಸರಕ್ಕೆ ಧಕ್ಕೆ ತರುತ್ತಿವೆ. ಇಂಥ ದ್ರಶ್ಯಗಳು ಭಾರತೀಯರು ಹಾಗೂ ಪ್ರವಾಸೋದ್ಯಮದ ಬಗ್ಗೆ ವಿದೇಶಿ ಪ್ರವಾಸಿಗರಲ್ಲಿ ನಕಾರಾತ್ಮಕ ಸಂದೇಶ ರವಾನಿಸುತ್ತೆ. ಕಾರಣ ಇಂಥ ವ್ಯವಸ್ಥೆಗೆ ಕಡಿವಾಣ ಹಾಕಲು ಕಠಿಣ ಕ್ರಮದ ಅಗತ್ಯವಿದೆ ಎನ್ನುತ್ತಾರೆ ವಿದೇಶಿ ಪ್ರವಾಸಿ ತಜ್ಷರು.

ಭಾರತದಲ್ಲಿ ಜನಸಂಖ್ಯೆ ಹೆಚ್ಚಳ ದಿಂದಾಗಿ ಪ್ರವಾಸೋದ್ಯಮ ಬಲಗೊಂಡಿಲ್ಲ ಎಂಬುದು ಸೀನಿಕದ ಮಾತಾಗುತ್ತದೆ. ಫ್ರಾನ್ಸ್‌ ದೇಶದಲ್ಲಿನ ಜನಸಂಖ್ಯೆಗಿಂತ ಅಲ್ಲಿಗೆ ಪ್ರವಾಸಕ್ಕೆ ಬರುವ ವಿದೇಶಿಗರ ಸಂಖ್ಯೆ ಹೆಚ್ಚಿಗಿದೆ. ಕರ್ನಾಟಕ ರಾಜ್ಯದಲ್ಲಿ ಪಾರಂಪರಿಕ, ಅಧ್ಯಾತ್ಮ, ಪರಿಸರ, ವನ್ಯಜೀವಿ, ಆಧುನಿಕ ಆವಿಷ್ಕಾರಗಳಂಥ ವಿವಿಧ ವಿಷಯಗಳ ಆಸಕ್ತಿದಾಯಕ ಪ್ರವಾಸೋದ್ಯಮವನ್ನು ಬಲಪಡಿಸಬೇಕಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೊಂಡರೇ ಭಾರತದಲ್ಲಿ ಉದ್ಯೋಗಾವಕಾಶಗಳು ನಿರೀಕ್ಷೆ ಮೀರಿ ತೆರೆದುಕೊಂಡು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಡಲಿದೆ ಎನ್ನುತ್ತಾರೆ ವಿದೇಶಿ ಪ್ರವಾಸಿ ಪ್ರಚಾರಕರು.

ಇದಕ್ಕಾಗಿ ಉತ್ತಮ ದರ್ಜೆಯ ಹೊಟೇಲ್ ನಿರ್ಮಿಸಬೇಕು. ಈಗಿರುವ ಹೊಟೇಲ್ಗಳನ್ನೇ ಉನ್ನತೀಕರಿಸಿ, ಶಿಸ್ತು ನಿರ್ವಹಿಸಬೇಕು. ರಾಜ್ಯದ ಪ್ರವಾಸಿ ಮಾರ್ಗ ರೂಪಿಸಿ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಪ್ರವಾಸಿ ಮಾರ್ಗದರ್ಶಿಗಳು ವಿದೇಶಿಗರಿಗೆ ಆಕರ್ಷಕ ರೀತಿಯಲ್ಲಿ ಆಯಾ ತಾಣಗಳ ಕುರಿತು ಆಸಕ್ತಿ ಮೂಡುವಂತೆ ನಿಧಾನವಾಗಿ ಹಾಗೂ ವಿದೇಶಿಗರು ಸುಲಭವಾಗಿ ಆಥ್ರ್ಯೆಸಿಕೊಳ್ಳುವಂತೆ ನಿರೂಪಿಸಬೇಕು. ಸರ್ಕಾರ ವಿವಿಧ ಭಾಷೆ ಹಾಗೂ ಸ್ಥಾನಿಕವಾಗಿ ಸಂಪೂರ್ಣ ಜ್ಷಾನ ಇರುವ ಗೈಡ್‌ಗಳನ್ನು ನಿಯೋಜಿಸಬೇಕು. ಒಂದು ಪ್ರವಾಸಿ ತಾಣದಿಂದ ಇನ್ನೊಂದು ಪ್ರವಾಸಿ ತಾಣಕ್ಕೆ ತೆರಳುವ ಮಾರ್ಗದಲ್ಲಿ ದೇಶಿ-ಪಾಶ್ಚಾತ್ಯ ಮಾದರಿ ಸುಲಭ ಶೌಚಾಲಯ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಅಗತ್ಯ ಎನ್ನುತ್ತಾರೆ. ರಾಜ್ಯದ ಎಲ್ಲ ಪ್ರವಾಸಿಗಳ ಕುರಿತು ಮಾಹಿತಿ ನೀಡುವ ಪ್ರಚಾರ ಫ‌ಲಕಗಳು, ಕರಪತ್ರಗಳು, ಕಿರು ಕೃತಿಗಳು, ಆಂತರ್ಜಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ನೀಡಬೇಕು ಎಂದು ವಿದೇಶಿ ಪ್ರವಾಸಿ ತಜ್ಞರು ಅಭಿಪ್ರಾಯಪಡುತ್ತಾರೆ. ತಾವು ಕರ್ನಾಟಕದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮದ ಮೇಲೆ ಬೆಳಕು ಚೆಲ್ಲುವ ವಿಷಯದಲ್ಲಿ ಇರುವ ಸೌಲಭ್ಯ ಹಾಗೂ ಕೊರತೆಗಳ ಕುರಿತು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಇ-ಮೇಲ್ ಮೂಲಕ ಪ್ರತಿಯೊಬ್ಬ ವಿದೇಶಿ ಪ್ರವಾಸಿ ತಜ್ಞರೂ ವರದಿ ನೀಡುತ್ತಾರೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ವಿಷಯದಲ್ಲಿ ಇರುವ ನಕಾರಾತ್ಮಕ ವಿಷಯಗಳನ್ನು ಸರಿಪಡಿಸಲು ಪರಿಹಾರಾತ್ಮಕ ಸಲಹೆಗಳನ್ನು ನೀಡಲಿವೆ. ಅಲ್ಲದೇ ತಮ್ಮ ಮೂಲಕ ಜಾಗತಿಕ ಮಟ್ಟದಲ್ಲಿ ವಿದೇಶಿ ಪ್ರವಾಸಿಗರ ಪ್ರವಾಸಕ್ಕೆ ಪ್ರೋತ್ಸಾಹದಾಯಕ ಪ್ರಚಾರ ನೀಡುವ ಭರವಸೆಯನ್ನೂ ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next