Advertisement

ವರುಣನ ಕೋಪ-ಪ್ರವಾಹದ ತಾಪ

10:24 AM Aug 08, 2019 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಮಳೆ ಅಪರೂಪವಾದರೂ ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ವಿಜಯಪುರ ಜಿಲ್ಲೆಯನ್ನು ಪ್ರವಾಹ ಭೀತಿಯಿಂದ ನಡುಗುವಂತೆ ಮಾಡಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 4 ಲಕ್ಷ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಹಾಗೂ ಜಿನಿ ಜಲಾಶಯದಿಂದ 2 ಲಕ್ಷ ಕ್ಯೂಸೆಕ್‌ ನೀರು ಭೀಮಾ ನದಿಗೆ ಹರಿಯುತ್ತಿರುವ ಕಾರಣ ಜಿಲ್ಲೆಯ ಗಡಿ ಉದ್ದಕ್ಕೂ ಎರಡೂ ನದಿಗಳ ಪ್ರವಾಹ ತಲೆ ದೋರಿದೆ.

Advertisement

ಮುದ್ದೇಬಿಹಾಳ ತಾಲೂಕಿನ ಗಂಗೂರಿನ ಅಡವಿ ಸಿದ್ದೇಶ್ವರ ದೇವಸ್ಥಾನ ಹಾಗೂ ನಾಲತವಾಡ ಸಮೀಪದ ಛಾಯಾ ಭಗವತಿ ದೇವಸ್ಥಾನಗಳು ಸಂಪೂರ್ಣ ಜಲಾವೃತವಾಗಿವೆ. ಇದರಿಂದ ಕಳೆದ ಒಂದು ವಾರದಿಂದ ಹರಿಯುತ್ತಿರುವ ಕೃಷ್ಣೆ ಈ ಭಾಗದ ಸುಮಾರು 400 ಎಕರೆ ಪ್ರದೇಶದ ಜಮೀನುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಹಾಳು ಮಾಡಿದೆ. ಇದೀಗ ಅವಳಿ ನದಿಗಳ ಪ್ರವಾಹ ಜಿಲ್ಲೆಯ ಸುಮಾರು 40 ಜನವಸತಿ ಪ್ರದೇಶಕ್ಕೆ ನುಗ್ಗುವ ಭೀತಿ ಎದುರಾಗಿದೆ.

ಮಹಾರಾಷ್ಟ್ರ ರಾಜ್ಯದ ಕೊಯ್ನಾ ಜಲಾಶಯದಿಂದ ಹೊರ ಹರಿವಾಗಿ ಕೃಷ್ಣಾ ನದಿಗೆ ಬುಧವಾರ ಸಂಜೆ ವೇಳೆಗೆ 3.77 ಲಕ್ಷ ಕ್ಯೂಸೆಕ್‌ನಷ್ಟಿದ್ದ ನೀರಿನ ಪ್ರಮಾಣ ಇನ್ನೂ ಹೆಚ್ಚುವ ಭೀತಿ ಇದೆ. ಹೀಗಾಗಿ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಗಡಿಯಲ್ಲಿರುವ ಅಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ಮುಂಭಾಗದಲ್ಲಿ ರಾಯಚೂರು-ಯಾದಗಿರಿ-ವಿಜಯಪುರ ಜಿಲ್ಲೆಯ ಗಡಿಯಲ್ಲಿ ನಿರ್ಮಿಸಿರುವ ಬಸವಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದೆ. ಪರಿಣಾಮ ನಾರಾಯಣಪುರದ ಬಸವಸಾಗರ ಜಲಾಶಯದಿಂದ 4.75 ಲಕ್ಷ ಕ್ಯೂಸೆಕ್‌ ನೀರು ಹೊರವಾಗಿ ಕೃಷ್ಣಾ ನದಿಗೆ ಹರಿಯುತ್ತಿದೆ. ಶಾಸ್ತ್ರಿ ಸಾಗರ ಹೊರ ಹರಿವು ಹಾಗೂ ಬಸವಸಾಗರ ಹಿನ್ನೀರಿನಿಂದಾಗಿ ನಿಡಗುಂದಿ, ಮುದ್ದೇಬಿಹಾಳ ತಾಲೂಕಿನಲ್ಲಿ ನಡಿ ತೀರದಲ್ಲಿರುವ ಗ್ರಾಮಗಳ ಜಮೀನುಗಳು ಜಲಾವೃತವಾಗಿದೆ.

ಬುಧವಾರ ನದಿ ಪಾತ್ರದಲ್ಲಿ ನೀರಿನ ಒತ್ತಡ ಹೆಚ್ಚಾಗಿ ಮುದ್ದೇಬಿಹಾಳ ತಾಲೂಕಿನ ಗಂಗೂರಿನ ಅಡವಿಸಿದ್ದೇಶ್ವರ ದೇವಸ್ಥಾನ ಹಾಗೂ ನಾಲತವಾಡ ಸಮೀಪದ ಛಾಯಾಭಗವತಿ ದೇವಸ್ಥಾನಗಳು ಸಂಪೂರ್ಣ ಜಲಾವೃತವಾಗಿವೆ. ಇದರಿಂದ ನದಿ ತೀರದ ಹಳ್ಳಿಗಳಿಗೂ ನೀರು ನುಗ್ಗುವ ಭೀತಿ ಇದ್ದು, ಕೃಷ್ಣೆ ತಟದಲ್ಲಿನ ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕಿನ ಸುಮಾರು 20 ಹಳ್ಳಿಗಳು ಪ್ರವಾಹ ಭೀತಿ ಎದುರಿಸುತ್ತಿವೆ.

ಭೀಮೆಯೂ ಆರ್ಭಟಿಸುತ್ತಿದ್ದಾಳೆ!: ಇನ್ನು ಭೀಮಾ ನದಿಗೆ ಮಹಾರಾಷ್ಟ್ರದ ಉಜಿನಿ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್‌ ಪ್ರಮಾಣದಲ್ಲಿದ್ದ ಹೊರ ಹರಿವಿನ ಪ್ರಮಾಣದ ನೀರು ಇದೀಗ 2 ಲಕ್ಷ ಕ್ಯೂಸೆಕ್‌ ಮೀರಿದ್ದು, ಭೀಮೆ ಒಡಲು ಕೂಡ ಉಕ್ಕಿ ಹರಿಯುವಂತಾಗಿದೆ. ಭೀಮಾ ನದಿಪಾತ್ರದಲ್ಲಿ ಬರುವ ಚಡಚಣ, ಇಂಡಿ, ಆಲಮೇಲ ತಾಲೂಕುಗಳ ಸುಮಾರು 26 ಹಳ್ಳಿಗಳಲ್ಲಿ ಪ್ರವಾಹ ಭೀತಿ ಇದೆ. ಅವಳಿ ನದಿಗಳು ಈಗಾಗಲೇ ಸುಮಾರು 400 ಎಕರೆ ಪ್ರದೇಶದಲ್ಲಿನ ಬೆಳೆ ಹಾನಿ ಮಾಡಿದ್ದು, ಈ ಹಿಂದೆ ಪ್ರವಾಹದಿಂದ ಜಲಾವೃತವಾಗಿ ಸ್ಥಳಾಂತರಗೊಂಡಿರುವ ಹಳೆಯ ಜನವಸತಿ ರಹಿತ ಪ್ರದೇಶದ ಸುತ್ತಲೂ ಹರಿಯುತ್ತಿದ್ದು, ನದಿ ಪಾತ್ರಗಳಲ್ಲಿ ಜಲಾಶಯಗಳ ಹೊರವು ಹೆಚ್ಚಾದಲ್ಲಿ ಜನವಸತಿ ಪ್ರದೇಶಕ್ಕೂ ನೀರು ನುಗ್ಗುವ ಭೀತಿ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next