ವಿಜಯಪುರ: ಶನಿವಾರ ಸಂಜೆ ಜಿಲ್ಲೆಯಲ್ಲಿ ಏಕಾಏಕಿ ಬೀಸಿದ ಬಿರುಗಾಳಿ, ತುಂತುರು ಮಳೆ ಸಹಿತ ಗುಡುಗು, ಸಿಡಿಲಿನ ಅಬ್ಬದರ ಜೋರಾಗಿತ್ತು. ಪರಿಣಾಮ ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿದ್ದರೆ, ಬಿರುಗಾಳಿಗೆ ತಗಡಿನ ಹೊದಿಕೆಯ ಮನೆಗಳು ಹಾರಿ ಹೋಗಿರುವ ಘಟನೆ ಜರುಗಿದೆ.
ಸಂಜೆಯ ಮಳೆಯಲ್ಲಿ ಬಿದ್ದ ಸಿಡಿಲಿಗೆ ಬಸವನಬಾಗೇವಾಡಿ ತಾಲೂಕಿನ ಸಿಂಧಿಗೇರಿ ಗ್ರಾಮದಲ್ಲಿ ಸಿಡಿಲಿಗೆ ರೈತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆ ಬಂದಿದ್ದು, ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಆಸರೆಗೆ ಹೋಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ರೈತ ಮಹಿಳೆಯನ್ನು ಮುರಿಗೆಮ್ಮ ಬಾಬುಗೌಡ ಚನ್ನಪಟ್ಟಣ ಎಂದು ಗುರುತಿಸಲಾಗಿದೆ.
ತಿಕೋಟಾ ಭಾಗದಲ್ಲಿ ಬಿರುಗಾಳಿ ಹಲವು ಅವಾಂತರ ಸೃಷ್ಟಿಸಿದ್ದು, ಬಾರಿ ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ತೋಟದಲ್ಲಿದ್ದ ತಗಡಿನ ಮನೆ ನೆಲಕ್ಕಚ್ಚಿದ್ದು, ಹೋದಿಕೆಯಾಗಿ ಹಾಕಿದ್ದ ಪತ್ರಾಸ ಎರಡು ನೂರ ಮೀಟರ್ ದೂರ ಹಾರಿ ಹೋಗಿದೆ. ಪರಿಣಾಮ ಬಾಧಿತ ಯಲ್ಲವ್ವ ಬೀರಪ್ಪ ಸೇಜಾಳೆ ಅವರ ಕುಟುಂಬ ಸೂರು ಕಳೆದುಕೊಂಡು ಅತಂತ್ರವಾಗಿದೆ. ತಗಡುಗಳು ಹಾರಿ ಹೋಗಿ ಬಿದ್ದುದರಿಂದ ಸೇಜಾಳೆ ಅವರ ತೋಟದಲ್ಲಿದ್ದ ಕುರಿ-ಮೇಕೆ ಮರಿಗಳಿಗೆ ತೀವ್ರ ಗಾಯವಾಗಿದ್ದು, ಅಪಾಯದ ಸ್ಥಿತಿಯಲ್ಲಿವೆ.
ಇದನ್ನೂ ಓದಿ :ಲಾಕ್‌ಡೌನ್ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಶಾಕ್! ದರ ಹೆಚ್ಚಳಕ್ಕೆ ಮೆಸ್ಕಾಂ ಬೇಡಿಕೆ
ತಿಕೋಟಾ ಪಟ್ಟಣದ ತೋಟದ ಮನೆಯಲ್ಲಿ ವಾಸವಿದ್ದ ಯಲ್ಲವ್ವ ಅವರು ಶುಕ್ರವಾರ ಸಂಜೆ ಮಳೆ ಸಹಿತ ಬಾರಿ ಬಿರುಗಾಳಿ ಬೀಡಲು ಆರಂಭಿಸಿದಾಗ ಬೆಚ್ಚಿಬಿದ್ದಿದ್ದಾರೆ. ದಂಪತಿಗಳು ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದ ಕುಟುಂಬ ನೋಡ ನೋಡುತ್ತಿದ್ದಂತೆ ಭಾರಿ ಬಿರುಗಾಳಿಗೆ ತಗಡಿನಿಂದ ನಿರ್ಮಿಸಿದ್ದ ಮನೆಯೇ ಹಾರಿ ಹೋಗಿದೆ. ಬಡತನದಲ್ಲಿರುವ ಈ ಕುಟುಂಬ ಸಾಲ ಮಾಡಿ 1.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಮನೆಯೇ ಹಾರಿ ಹೋಗುತ್ತಲೇ ಕೂಡಲೇ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದು, ಅದೃಷ್ಟಕ್ಕೆ ಜೀವ ಹಾನಿ ಸಂಭವಿಸಿಲ್ಲ.
ಬಿರುಗಾಳಿಯ ಅಬ್ಬರಕ್ಕೆ ಮನೆ ಕಳೆದುಕೊಂಡು ಸಂತರಸ್ತವಾದ ಕುಟುಂಬ ತಿಕೋಟಾ ಪಟ್ಟಣ ಪಂಚಾಯತ್ಗೆ ಆಗಮಿಸಿ, ಸೂರು ಕಲ್ಪಿಸಿಕೊಡಲು ಮನವಿ ಮಾಡಿದೆ. ಅಲ್ಲದೇ ಏಕಾಏಕಿ ಬೀದಿಗೆ ಬಿದ್ದಿರುವ ತಮಗೆ ಪರಿಹಾರ ನೀಡುವಂತೆ ಆಗ್ರಹಿಸಿದೆ.
ತೋಟದ ಬದು ತುಂಬಿದ ನೀರು: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಸುರಿದ ಬಾರಿ ಮಳೆಗೆ ರೈತರ ತೋಟದಲ್ಲಿರುವ ಬದುಗಳು ನೀರಿನಿಂದ ತುಂಬಿವೆ. ರಸ್ತೆಯ ತುಂಬೆಲ್ಲಾ ನೀರಿನಿಂದ ಆವೃತವಾಗಿವೆ. ರಾಷ್ಟ್ರೀಯ ಹೆದ್ದಾರಿ ವಿಜಯಪುರ-ಅಥಣಿ ರಸ್ತೆಯ ಮೇಲೆ ಮರ ಉರುಳಿ ಕೆಲಕಾಲ ಸಂಚಾರ ವ್ಯಥ್ಯಯವಾಗಿತ್ತು. ಪಟ್ಟಣದಲ್ಲಿ ಕೂಡಾ ರಸ್ತೆಗಳು ನೀರಿನಿಂದ ತುಂಬಿ ಹರಿಯಲು ಆರಂಭಿಸಿವೆ.