Advertisement

ವಿಶೇಷ ಪ್ಯಾಕೇಜ್‌ಗೆ ಆಗ್ರಹಿಸಿ ದ್ರಾಕ್ಷಿ ಬೆಳೆಗಾರರಿಂದ ಸರ್ಕಾರಕ್ಕೆ ಮನವಿ

04:21 PM May 29, 2020 | Naveen |

ವಿಜಯಪುರ: ಲಾಕ್‌ಡೌನ್‌ ಪರಿಣಾಮ ಸಂಕಷ್ಟಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದ್ರಾಕ್ಷಿ ಬೆಳೆಗಾರರ ಸಂಘದಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ, ಕೊರೊನಾ ಸೋಂಕಿನ ಹಾವಳಿಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಇದರ ನೇರ ಪರಿಣಾಮ ದ್ರಾಕ್ಷಿ ಬೆಳೆಗಾರರ ಮೇಲೂ ದಟ್ಟವಾಗಿ ಬೀರಿದ್ದು, ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ನೈಸರ್ಗಿಕ ವಿಕೋಪಕ್ಕೆ ನಲುಗಿದವರಲ್ಲಿ ದ್ರಾಕ್ಷಿ ಬೆಳೆಗಾರರೂ ಹೊರತಾಗಿಲ್ಲ ಎಂದು ಸಮಸ್ಯೆ ನಿವೇದಿಸಿಕೊಂಡಿದ್ದಾರೆ. ಕಷ್ಟಪಟ್ಟು ಬೆಳೆದ ದ್ರಾಕ್ಷಿ ಬೆಳೆ ಅತಿವೃಷ್ಟಿ, ಅನಾವೃಷ್ಟಿ ಅಂತೆಲ್ಲ ಹಲವು ಕಾರಣಗಳಿಂದಾಗಿ ಹಾಳಾಗುತ್ತಲೇ ಬಂದಿದೆ. ಇದರಿಂದ ದ್ರಾಕ್ಷಿ ಬೆಳೆಗಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆಹಾನಿ ರೈತರನ್ನು ಒಂದೇ ಸೂರಿನಡಿ ಪರಿಗಣಿಸಿ ವೈಜ್ಞಾನಿಕ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವೇದಿಸಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಆರ್ಥಿಕ ತಜ್ಞರು ಸಲಹೆಯಂತೆ ಹೆಕ್ಟೇರ್‌ಗೆ 2.80 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಒಣದ್ರಾಕ್ಷಿ ಮಾರಾಟ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಕರಾಳ ವ್ಯವಸ್ಥೆಗೆ ಕಡಿವಾಣ ಹಾಕಿ, ರೈತ ಸಂಪರ್ಕ ಕೇಂದ್ರದಲ್ಲಿ ಗುಣಮಟ್ಟದ ಕೃಷಿ ಸಲಕರಣೆ ಸಿಗುವಂತೆ ನೋಡಿಕೊಳ್ಳಬೇಕು. ಮಹಾರಾಷ್ಟ್ರದ ವ್ಯಾಪಾರಸ್ಥರನ್ನು ಕೋವಿಡ್‌ ಪರೀಕ್ಷೆ ನಡೆಸಿ, ಒಣದ್ರಾಕ್ಷಿ ಖರೀದಿಗಾಗಿ ಕರ್ನಾಟಕಕ್ಕೆ ಬರಲು ಅವಕಾಶ ನೀಡಬೇಕು. ಸರಕಾರ ಕ್ರಮ ಕೈಗೊಂಡರೂ ಮುಕ್ತ ಹಾಗೂ ಆನ್‌ಲೈನ್‌ ವಹಿವಾಟು ನಡೆದಿಲ್ಲ. ದ್ರಾಕ್ಷಿಗೆ ಸರಕಾರ ಬೆಂಬಲ ಬೆಲೆ ನೀಡಿ ಖರೀದಿಸಲು ಮುಂದಾಗಬೇಕು ಎಂದು ಕೋರಿದರು.

ಅಭಯಕುಮಾರ ನಾಂದ್ರೇಕರ್‌, ವಿಜಯಪುರ ದ್ರಾಕ್ಷಿ ಬೇಳೆಗಾರರ ಸಂಘದ ಅಧ್ಯಕ್ಷ ಪೀರಗೊಂಡ ಗದ್ಯಾಳ, ಎ.ಪಿ.ಎಂ.ಸಿ ವಿಜಯಪುರ ಜಿಲ್ಲಾಧ್ಯಕ್ಷ ಸುರೇಶಗೌಡ ಬಿರಾದಾರ, ನಿರ್ದೇಶಕರಾದ ಎಸ್‌.ಎಚ್‌.ನಾಡಗೌಡ, ಎಂ.ಎಸ್‌.ರುದ್ರಗೌಡರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next