ವಿಜಯಪುರ: ಗ್ರಾಮ ಪಂಚಾಯ್ತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ನೌಕರರ ಸಂಘದ ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನಾ ರ್ಯಾಲಿ ನಡೆಸಿ, ಜಿ.ಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಗ್ರಾಮ ಪಂಚಾಯ್ತಿ ನೌಕರರು ಅನೇಕ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರ ನ್ಯಾಯಯುತವಾದ ಬೇಡಿಕೆಗಳೂ ಸಹ ಇಂದಿಗೂ ಈಡೇರಿಲ್ಲ. ಸರ್ಕಾರ ಕೂಡಲೇ ಗ್ರಾಪಂ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಕರೆ ನೀಡಿದರು. ಕರ್ನಾಟಕ ಗ್ರಾಮೀಣಾಭಿವೃದ್ಧಿ ಪಂಚಾಯ್ತಿ ರಾಜ್ಯ ಇಲಾಖೆಯಿಂದ ಬಂದ ಆದೇಶಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಪಂ ನೌಕರರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ನಾಯಕ ಅಣ್ಣಾರಾಯ ಈಳಗೇರ ಮಾತನಾಡಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸರ್ಕಾರದ ಆದೇಶವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಗ್ರಾಮ ಪಂಚಾಯ್ತಿ ನೌಕರರಿಗೆ ವೇತನ ಮೊದಲಾದ ವಿಷಯವಾಗಿ ಸರ್ಕಾರ ನೀಡಿದ ಆದೇಶವನ್ನು ಸ್ಪಷ್ಟವಾಗಿ ಪಾಲನೆ ಮಾಡುವಂತೆ ಪಿಡಿಒಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಎಸ್‌ಎಸ್‌ಎಲ್ಸಿ ಉತ್ತೀರ್ಣರಾಗಿ 5 ವರ್ಷ ಸೇವೆ ಸಲ್ಲಿಸಿದ ವಾಟರ್‌ಮನ್ ಹಾಗೂ ಇತರೆ ನೌಕರರಿಗೆ ಕ್ಲರ್ಕ್ ಹುದ್ದೆ ಬಡ್ತಿ ನೀಡಬೇಕು. ಒಂದು ವರ್ಷದಿಂದ ಬಾಕಿ ಉಳಿದ ವೇತನ ಇಎಫ್‌ಎಂಎಸ್‌ಗೆ ಸೇರಿಸಿ ವೇತನ ತೆರಿಗೆ ಸಂಗ್ರಹದಲ್ಲಿ ಹಣದಲ್ಲಿ ವೇತನ ನೀಡುವಂತೆ ಕ್ರಮಕೈಗೊಳ್ಳಬೇಕು. ನಿವೃತ್ತಿ ಹೊಂದಿದ ನೌಕರರಿಗೆ ನಿವೃತ್ತಿ ಉಪಧನ ಕೊಡಬೇಕು. ಎಲ್ಲಾ ನೌಕರರಿಗೆ ಸೇವಾ ಪುಸ್ತಕ ತೆರೆಯುವುದು, ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರಚಿಸಬೇಕು, ಸರ್ಕಾರಿ ನೌಕರರಿಗೆ ನೀಡಲಾಗುವ ಎಲ್ಲ ಬಗೆಯ ಸೌಲಭ್ಯ ಗ್ರಾಮ ಪಂಚಾಯ್ತಿ ನೌಕರರಿಗೆ ವಿಸ್ತರಣೆ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಮುಖಂಡರಾದ ವಿಠ್ಠಲ ಹೊಮನೋರೆ, ಎಂ.ಕೆ. ಚೆಳ್ಳಗಿ, ಕುಮಾರ ರಾಠೊಡ, ಅಬ್ದುಲ್ ತಮದಡ್ಡಿ, ಯಲ್ಲನಗೌಡ ಬಿರಾದಾರ, ರಾಜು ಬನ್ನಟ್ಟಿ, ಮುರಘೇಂದ್ರ ಹುಣಶ್ಯಾಳ, ಶಾಂತಪ್ಪ ಕಟ್ಟಿಮನಿ, ಅಜೀಜ ಶೇಖ, ಮಲಕಾರಿ ನರಳೆ ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಿಇಒ ವಿಕಾಸ ಸುರಳಕರ, ಗ್ರಾಮ ಪಂಚಾಯ್ತಿ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸೆ.2ರಂದು ಈ ವಿಷಯವಾಗಿ ಗ್ರಾ.ಪಂ ನೌಕರರ ಸಂಘಟನೆಗಳ ಪ್ರತಿನಿಧಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದರು.