ವಿಜಯಪುರ: ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ ನಡೆಯುತ್ತಿದ್ದು ಜಿಲ್ಲೆಯ 5 ತಾಲೂಕಿನ 172 ಸ್ಥಾನಗಳಲ್ಲಿ ಈಗಾಗಲೇ 138 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಸ್ಪರ್ಧೆ ಏರ್ಪಟ್ಟಿರುವ 34 ಸ್ಥಾನಗಳಿಗೆ ಜೂ. 13ರಂದು ಮತದಾನ ನಡೆಯಲಿದೆ. ಚುನಾವಣೆ ತುರುಸು ಪಡೆದಿದ್ದು ಅಭ್ಯರ್ಥಿಗಳು ಮತದಾನದ ಅರ್ಹತೆ ಪಡೆದಿರುವ ಮತದಾರರನ್ನು ಓಲೈಸಲು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ನೌಕರರ ಮನೆ ಬಾಗಿಲಿಗೆ ಅಲೆಯುತ್ತಿದ್ದಾರೆ.
Advertisement
ಜಿಲ್ಲೆಯ ಅವಿಭಜಿತ ಎಲ್ಲ 5 ತಾಲೂಕುಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಗಳ ರಚನೆಗೆ ಚುನಾವಣೆ ನಡೆಯುತ್ತಿದೆ. ಎಲ್ಲ ತಾಲೂಕು ಘಟಕಗಳ ಚುನಾವಣೆಗೆ ಪ್ರತ್ಯೇಕವಾಗಿ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ಪರ್ಧೆ ಏರ್ಪಟ್ಟಿರುವ ಸ್ಥಾನಗಳಿಗೆ ಜೂ. 13ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 4ರವರೆಗೆ ಮತದಾನ ನಡೆಯಲಿದೆ. ಮತಪತ್ರಗಳ ಮತದಾನಕ್ಕೆ ವ್ಯವಸ್ಥೆ ಮಾಡಿದ್ದು, ಸಾರ್ವತ್ರಿಕ ಚುನಾವಣೆಯಂತೆ ಅಭ್ಯರ್ಥಿಗಳಿಗೆ ಚಿಹ್ನೆ ಇರದೇ, ಕ್ರಮ ಸಂಖ್ಯೆ ಹಾಗೂ ಅಭ್ಯರ್ಥಿಗಳ ಹೆಸರು ಮಾತ್ರ ಇರಲಿವೆ.
Related Articles
50 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 12
ಸ್ಥಾನಗಳಿಗೆ ಕಣದಲ್ಲಿರುವ 34 ಅಭ್ಯರ್ಥಿಗಳಿಂದ ಸ್ಪರ್ಧೆ ಏರ್ಪಟ್ಟಿದೆ. ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ವಿಜಯಪುರ ತಾಲೂಕಿನಲ್ಲಿ 3,301
ಮತದಾರರಿದ್ದು, ಇವರಿಗೆ ಮತದಾನ ಮಾಡಲು ನಗರ ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಕೇಂದ್ರದಲ್ಲಿ 16 ಮತಗಟ್ಟೆ ಸ್ಥಾಪಿಸಲಾಗಿದೆ. ಮುದ್ದೇಬಿಹಾಳ ತಾಲೂಕಿನ 24 ಸ್ಥಾನಗಳಲ್ಲಿ 23 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 1 ಸ್ಥಾನಕ್ಕೆ ನಡೆಯುತ್ತಿರುವ ಮತದಾನದ ಸಂದರ್ಭದಲ್ಲಿ ತಮ್ಮ ಹಕ್ಕು ಚಲಾಯಿಸಲು 76 ಮತದಾರರರು ಆರ್ಹತೆ ಪಡೆದಿದ್ದಾರೆ. ಮುದ್ದೇಬಿಹಾಳ ಪಟ್ಟಣದ ವಿ.ಬಿ.ಸಿ. ಪ್ರೌಢ ಶಾಲೆಯಲ್ಲಿ ಮತದಾನಕ್ಕೆ ಮತಗಟ್ಟೆ ಸ್ಥಾಪಿಸಲಾಗಿದೆ.
Advertisement
ಸಿಂದಗಿ ತಾಲೂಕಿನ 25 ಸ್ಥಾನಗಳಲ್ಲಿ 24 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಸ್ಪರ್ಧೆ ಏರ್ಪಟ್ಟಿರುವ ಒಂದು ಸ್ಥಾನಕ್ಕೆ ಇಬ್ಬರು ಆಯ್ಕೆ ಬಯಸಿ ಕಣದಲ್ಲಿದ್ದು 102 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಸಿಂದಗಿ ಪಟ್ಟಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ.
ಇಂಡಿ ತಾಲೂಕಿನಲ್ಲಿರುವ 35 ಸ್ಥಾನಗಳಲ್ಲಿ 19 ಸ್ಥಾನಗಳಿಗೆ ಆವಿರೋಧ ಆಯ್ಕೆ ನಡೆದಿದ್ದು, 16 ಸ್ಥಾನಗಳಿಗೆ ಏರ್ಪಟ್ಟಿರುವ ಸ್ಪರ್ಧೆಯಲ್ಲಿ 33 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,500 ಮತದಾರರು ಮತದಾನದ ಅರ್ಹತೆ ಪಡೆದಿದ್ದಾರೆ. ಮತದಾನ ನಡೆಯುವ ಕ್ಷೇತ್ರಗಳಿಗೆ ಮತದಾನಕ್ಕಾಗಿ ಇಂಡಿ ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮಲ್ಲಯ್ಯನ ಗುಡಿ ಹತ್ತಿರ ಇರುವ ಸರ್ಕಾರಿ ನೌಕರರ ಪತ್ತಿನ ಸಹಕಾರಿ ಸಂಘದಲ್ಲಿ ಒಟ್ಟು 2 ಮತಗಟ್ಟೆ ಸ್ಥಾಪಿಸಲಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು ಈಗಾಗಲೇ ಭರದಿಂದ ಪ್ರಚಾರ ನಡೆಸಿದ್ದು, ರಾಜಕೀಯ ಮಂದಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನಡೆಸುವ ಪ್ರಚಾರದ ಮಾದರಿಯಲ್ಲಿ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುವವರು ಭಾರಿ ಭರವಸೆಗಳನ್ನು ನೀಡತೊಡಗಿದ್ದಾರೆ. ಕೆಲವು ಅಭ್ಯರ್ಥಿಗಳು ಮತದಾರರ ಮನೆಗಳಿಗೆ ತೆರಳಿ ತಮ್ಮನ್ನು ಗೆಲ್ಲಿಸುವಂತೆ ಉಡುಗೊರೆಗಳನ್ನು ಕೊಡುವುದಕ್ಕೂ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಮತ್ತೆ ಕೆಲವು ಅಭ್ಯರ್ಥಿಗಳು ಗೆದ್ದ ನಂತರ ಪ್ರವಾಸ ಕರೆದೊಯ್ಯುವುದು ಸೇರಿದಂತೆ ಇತರೆ ಭರವಸೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ನೌಕರರ ಚುನಾವಣೆ ಕೂಡ ರಾಜಕೀಯ ಸಾರ್ವತ್ರಿಕ ಚುನಾವಣೆಗಳನ್ನು ಮೀರಿಸುವಂತೆ ತುರುಸು ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.