ವಿಜಯಪುರ: ಜಿಲ್ಲಾದ್ಯಂತ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲಾ ತಾಲೂಕ ಘಟಕಗಳಿಗೆ ಚುನಾವಣೆ ನಡೆದಿದ್ದು, ಗುರುವಾರ ನಡೆದ ಮತದಾನ ರಾಜಕೀಯ ಮಂದಿಯ ಚುನಾವಣೆ ಸ್ಪರ್ಧೆಯನ್ನೂ ನಾಚಿಸುವಂತಿತ್ತು. ನೂರಾರು ಸಂಖ್ಯೆಯಲ್ಲಿ ಸಾಲಾಗಿ ನಿಂತಿದ್ದ ಮತದಾನದ ಅರ್ಹತೆ ಇದ್ದ ನೌಕರರು, ಮತದಾನ ಮಾಡಿದರು.
ವಿಜಯಪುರ ನಗರ ಹಾಗೂ ಗ್ರಾಮೀಣ ಘಟಕಕ್ಕಾಗಿ ನಗರದ ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ನೌಕರರು ತಮ್ಮ-ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸಲು ಸ್ನೇಹಿತರನ್ನು ಮನವಿ ಮಾಡಿಕೊಳ್ಳುತ್ತಿದ್ದರು. ಹಾಲಿ ಜಿಲ್ಲಾಧ್ಯಕ್ಷ ಸುರೇಶ ಶೇಡಶಾಳ ಬಣ ಒಂದೆಡೆ ಮತ್ತೂಂದು ಬಾರಿಗೆ ಅಧಿಕಾರಕ್ಕೆ ಏರಲು ಮತಗಟ್ಟೆಗೆ ಆಗಮಿಸುತ್ತಿದ್ದ ನೌಕರರ ಮತದಾರರನ್ನು ಓಲೈಸಲು ಮುಂದಾಗಿತ್ತು. ಇದಕ್ಕೆ ಪ್ರತಿಯಾಗಿ ಯುವ ಬ್ರಿಗೇಡ್ ಬಣದಲ್ಲಿ ಮಲಕಪ್ಪ ಟಕ್ಕಳಕಿ, ನಿಜಪ್ಪ ಮೇಲಿನಕೇರಿ ಸೇರಿದಂತೆ ಇತರರ ಬಣ ತಮಗೆ ಒಂದು ಬಾರಿ ಅವಕಾಶ ಕೊಡಿ ಎಂದು ಬ್ಯಾನರ್ ಹಾಕಿಕೊಂಡು, ಪ್ರಚಾರ ಫಲಕಗಳನ್ನು ಪ್ರದರ್ಶಿಸಿ ಮನವಿ ಮಾಡಿಕೊಳ್ಳುತ್ತಿತ್ತು.
ವಿಜಯಪುರ ತಾಲೂಕಿನಲ್ಲಿ ನಗರ ಹಾಗೂ ಗ್ರಾಮೀಣ ಸೇರಿದಂತೆ 62 ಸ್ಥಾನಗಳಿದ್ದು, 50 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಕಾರಣ 12 ಸ್ಥಾನಗಳಿಗೆ ಮಾತ್ರ ಗುರುವಾರ ಮತದಾನ ನಡೆಯಿತು. ಬೆಳಿಗ್ಗೆ 11ರಿಂದ ಸಂಜೆ 4ರ ವರೆಗೆ ನಗರದ ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಆವರಣದಲ್ಲಿ ತುರುಸಿನಿಂದಲೇ ಮತದಾನ ನಡೆಯಿತು. ನೌಕರರ ಚುನಾವಣೆಯಾದರೂ ಸಾರ್ವತ್ರಿತಿಕ ಚುನಾವಣೆಯಲ್ಲಿ ರಾಜಕೀಯ ಅಭ್ಯರ್ಥಿಗಳನ್ನು ನಾಚಿಸುವಂತೆ ಪ್ರಚಾರ ನಡೆಸಿದ್ದು, ತೀವ್ರ ಪೈಪೋಟಿಯ ಕಾರಣ ನೂರಾರು ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಿದ್ದು ಕಂಡು ಬಂತು.
ಕೆಲವು ಸಂದರ್ಭದಲ್ಲಿ ಮತದಾರರನ್ನು ಓಲೈಸುವ ಹಂತದಲ್ಲಿ ವಿವಿಧ ಬಣಗಳ ಬೆಂಬಲಿಗ ನೌಕರರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿರುವುದು ಕಂಡು ಬಂತು. ಇಂಥ ಸಂದರ್ಭದಲ್ಲಿ ಸ್ಥಳದಲ್ಲಿ ಬಂದೋಬಸ್ತ್ಗೆ ಇದ್ದ ಪೊಲೀಸರು ಮನವೊಲಿಸಿ ಕಳಿಸುತ್ತಿರುವುದು ಕೂಡ ಸಾಮಾನ್ಯವಾಗಿತ್ತು.
ಮತದಾನ ಬಳಿಕ ನಡೆದ ಮತ ಎಣಿಕೆಯಲ್ಲಿ ಹಾಲಿ ಜಿಲ್ಲಾಧ್ಯಕ್ಷ ಸುರೇಶ ಶೇಡಶಾಳ ವಿಜಯಪುರ ಗ್ರಾಮಿಣ ವಲಯದಲ್ಲಿ ವಿಜಯ ಸಾಧಿಸಿದ್ದರೆ, ಯುವ ಬ್ರಿಗೇಡ್ ಬಣದ ಮಲಕಪ್ಪ ಟಕ್ಕಳಕಿ, ನಿಜಪ್ಪ ಮೇಲಿನಕೇರಿ ಅವರು ವಿಜಯ ಗೆಲುವಿನ ನಗೆ ಬೀರಿದ್ದರು.