Advertisement

ಹೃದಯದಿಂದ ಸಂಗೀತ ಆಲಿಸಿ ದೇವರ ಪ್ರೀತಿಗೆ ಪಾತ್ರರಾಗಿ

04:20 PM Feb 24, 2020 | Naveen |

ವಿಜಯಪುರ: ದೇವರ ಮಹಿಮೆ ಅರಿಯಲು ಅನೇಕ ಮಾರ್ಗಗಳಲ್ಲಿ ಸಂಗೀತವೂ ಒಂದು. ಹೃದಯದಿಂದ ಸಂಗೀತವನ್ನು ಆಲಿಸುವ ಮೂಲಕ ಪರಮಾತ್ಮನ ಪ್ರೀತಿಗೆ ಪಾತ್ರರಾಗಿ ಪುನೀತರಾಗಲು ಸಾಧ್ಯವಿದೆ ಎಂದು ವಿಜಯಪುರದ ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿ ಪಂ| ಮಧ್ವಾಚಾರ್ಯ ಮೊಕಾಶಿ ಹೇಳಿದರು.

Advertisement

ನಗರದ ಹಲಕೇರಿಗಲ್ಲಿ ಪ್ರಸನ್ನೇಶ್ವರ ಸೇವಾ ಸಮಿತಿ ಹಮ್ಮಿಕೊಂಡಿದ್ದ ಗೀತಗಾಯನ ಸ್ಪರ್ಧೆ ದಶಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇವರನ್ನು ಒಲಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಸಕಲ ಶಾಸ್ತ್ರ ಪುರಾಣ, ಕೀರ್ತನೆಯ ಜೊತೆಗೂಡಿ ವಾದ್ಯಗಳನ್ನು ಬಳಸಲಾಗುತ್ತದೆ. ಒಟ್ಟಿನಲ್ಲಿ ದೇವರ ಮಹಿಮೆ ತಿಳಿಯುವುದೇ ಇವುಗಳೆಲ್ಲದರ ಮುಖ್ಯ ಉದ್ದೇಶ. ಯಾವುದೇ ಕಾರ್ಯ ಮಾಡಿದರೂ ಸಹ ಕೊನೆಗೆ ದೇವರಲ್ಲಿ ಭಕ್ತಿ ಹಟ್ಟಿಸುವ ಕೆಲಸವಾಗಬೇಕು. ದೇವರಲ್ಲಿ ಭಕ್ತಿಹುಟ್ಟಿಸುವ ಕೆಲಸವಾಗದಿದ್ದರೆ ಮಾಡಿದ ಕಾರ್ಯಕ್ಕೆ ಬೆಲೆಯೇ ಇಲ್ಲ ಎಂದರು.

ನಾವು ತಿನ್ನುವ ಅನ್ನ ಕೇವಲ ನಾಲಿಗೆಗೆ ಮಾತ್ರ ರುಚಿ ಹತ್ತಿದರೆ ಸಾಲದು ಅದು ನಮ್ಮ ಶರೀರಕ್ಕೂ ಒಗ್ಗಿದರೆ ಮಾತ್ರ ದೇಹ ಆರೋಗ್ಯವಾಗಿರಲು ಸಾಧ್ಯ. ಅದರಂತೆಯೇ ಸಂಗೀತವನ್ನು ಕೇವಲ ಕಿವಿಯಿಂದ ಕೇಳಿ ಆನಂದ ಪಟ್ಟರೆ ಸಾಲದು. ಕಿವಿಯಿಂದ ಕೇಳಿ ಹೃದಯದಿಂದ ಆಸ್ವಾದಿಸಿ ದೇವರ ಕೃಪೆಗೆ ಪಾತ್ರರಾಗಲು ಯತ್ನಿಸಬೇಕು. ಸಂಗೀತ ಕೇಳಿದಾಗ ಭಕ್ತಿ ಜಾಗೃತವಾಗದಿದ್ದರೆ ಸಂಗೀತ ಕೇಳಿದ್ದು ವ್ಯರ್ಥ ಎಂದರು.

ದೇವಾನುದೇವತೆಗಳು ಸಹ ಸಂಗೀತದ ಮೋಡಿಗೆ ಮಾರುಹೋಗಿ ತಮಗೇ ಅರಿವಿಲ್ಲದಂತೆಯೇ ಕುಣಿದು ಕಪ್ಪಳಿಸಿದ ಉದಾಹರಣೆಗಳು ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟಿವೆ. ಎಲ್ಲಿ ಕಲಾಕಾರ ಸನ್ಮಾನಗೊಂಡಾಗ ಅಲ್ಲಿ ಸರಸ್ವತಿ ಇರುತ್ತಾಳೆ. ಕಲಾಕಾರರಿಗೆ ಸನ್ಮಾನ ಮಾಡಿದರೆ ವಿದ್ಯಾಮಾತೆ ಸರಸ್ವತಿ ದೇವಿಗೆ ಸನ್ಮಾನ ಸಲ್ಲುತ್ತದೆ ಎಂದರು.

ಸಮಾರಂಭಕ್ಕೆ ಚಾಲನೆ ನೀಡಿದ ಪತ್ರಕರ್ತ ಗೋಪಾಲ ನಾಯಕ ಮಾತನಾಡಿ, ದಾಸ ಸಾಹಿತ್ಯವನ್ನು ಇಂಪಾದ ಸಂಗೀತದ ಮೂಲಕ ಆಲಿಸುವುದರಿಂದ ದೇವರಿಗೆ ಹತ್ತಿರವಾಗುತ್ತಾನೆ. ಸಂಗೀತವು ಪರಮಾತ್ಮನ ಒಲಿಸಿಕೊಳ್ಳಲು ಇರುವ ಒಂದು ಅತ್ಯುತ್ತಮ ಸಾಧನ ಎಂದರು. ಅನುರಾಧಾ ಕಟ್ಟಿ ಅವರು ದಾಸ ಸಾಹಿತ್ಯ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದರು.

Advertisement

ಸಂಗೀತ ಕಲಾವಿದರಾದ ಶಾಂತಾಬಾಯಿ ಕೌತಾಳ, ಲತಾ ಜಹಾಗೀರದಾರ, ಶಶಿಕಲಾ ಕುಲಹಳ್ಳಿ, ಮಾಧುರಿ ಕುಸುಗಲ್ಲ, ನಿರ್ಮಲಾ ಥಿಟೆ, ಸುರೇಶ ಸುಗಂಹಾಗೂ ಮಹಾಲಕ್ಷ್ಮೀ ಬ್ಯಾಂಕ್‌ ನಿರ್ದೇಶಕರಾಗಿ ಆಯ್ಕೆಯಾದ ಮೋಹನರಾವ್‌ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಭರತನಾಟ್ಯ ಕಲಾವಿದೆ ಭವಾನಿ ಕುಲಕರ್ಣಿ, ಸ್ವತಂತ್ರ ತಬಲಾ ವಾದಕ ಶ್ರೀನಿಧಿ  ಕುಲಕರ್ಣಿ, ಕೊಳಲುವಾದನ ಕಲಾವಿದೆ ಕೃತಿಕಾ ಜಂಗಿನಮಠ, ಅಭಂಗವಾಣಿ ಕಲಾವಿದ ಶ್ರೀಹರಿ ಕುಲಕರ್ಣಿ, ಹಿರಿಯ ಸಂಗೀತ ಕಲಾವಿದರಾದ ಗೀತಾ ಕುಲಕರ್ಣಿ ಮತ್ತು ವೀಣಾ
ಥಿಟೆ ಅವರ ದಾಸವಾಣಿ ಸಂಗೀತ ಕಾರ್ಯಕ್ರಮಗಳು ಕೇಳುಗರನ್ನು ಮೂಕವಿಸ್ಮೀತರನ್ನಾಗಿ ಮಾಡಿತು. ಸಮಿತಿ ಅಧ್ಯಕ್ಷ ವಾಮನರಾವ್‌ ಕುಲಕರ್ಣಿ, ನಿರ್ದೇಕರಾದ ಭೀಮರಾವ್‌ ಥೊಬ್ಬಿ, ಜಗದೀಶ ಕುಲಕರ್ಣಿ, ಪ್ರಸಾದ ಗಾಯಿ, ಪ್ರಕಾಶ ಹಂಗರಗಿ, ವಿ.ಕೆ. ಕುಲಕರ್ಣಿ, ಅನಿತಾ ಗಾಯಿ ಇದ್ದರು. ಚೇತನಾ ಕುಲಕರ್ಣಿ ವಂದಿಸಿದರು. ಜ್ಯೋತಿ ಕುಲಕರ್ಣಿ ಪರಿಚಯಿಸಿದರು. ನಾಗೇಶ ಕುಲಕರ್ಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next