Advertisement

ನಿವೇಶನ ರಹಿತರ ಪ್ರತಿಭಟನಾ ರ್ಯಾಲಿ

10:43 AM Jun 27, 2019 | Team Udayavani |

ವಿಜಯಪುರ: ಜಿ ಪ್ಲಸ್‌ ಮನೆ ಹಂಚಿಕೆ ವಿಷಯದಲ್ಲಿ ಫ‌ಲಾನುಭವಿಗಳಿಂದ ನಿರ್ಮಾಣದಲ್ಲಿ ಟೆಂಡರ್‌ದಾರರ ಹಿತ ಕಾಪಾಡುವಲ್ಲಿ ಬಡ ಫಲಾನುಭವಿಗಳಿಂದ ವಂತಿಗೆ ಹೆಸರಿನಲ್ಲಿ ಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

Advertisement

ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ಮುಂದುವರೆಸಿದರು. ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ವಿತರಿಸಲು ವಿಜಯಪುರ ನಗರದಲ್ಲಿ ಜಿ ಪ್ಲಸ್‌ ಮಾದರಿ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಸದರಿ ಯೋಜನೆಗೆ ಕೇಂದ್ರ-ರಾಜ್ಯ ಸರಕಾರಗಳ ಅನುದಾನ ಪಡೆದು ಆಯ್ಕೆಯಾದ ಫಲಾನುಭವಿಗಳಿಂದ ವಂತಿಗೆ ಪಡೆದು ಮನೆಗಳ ಹಂಚಿಕೆ ಮಾಡುವಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿದರು.

ಸಮಿತಿ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ನಗರದಲ್ಲಿ ಸುಮಾರು 25 ಸಾವಿರ ಜನ ವಸತಿ ಹೀನರಿದ್ದಾರೆ. ಸೂರಿಲ್ಲದ ಈ ಬಡವರಿಗೆ ಸರ್ಕಾರ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು ಇಲ್ಲವೇ ನಿವೇಶನ ಒದಗಿಸಬೇಕು. ಆದರೆ ನಗರದಲ್ಲಿ ಬಡವರಿಂದ ಸರಕಾರ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚಿಗೆ ಹಣ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಈ ಕುರಿತು ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡದ ಕಾರಣ ಫಲಾನುಭವಿಗಳಲ್ಲಿ ಗೊದಲ ಉಂಟಾಗಿದೆ. ಸೂರಿಲ್ಲದ ಜನರಿಗೆ ಮನೆ ಕೊಡಿಸುವುದಾಗಿ ಏಜೆಂಟರ ಹಾವಳಿಯೂ ಹೆಚ್ಚಿದೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸ್ಪಷ್ಟೀಕರಣ ನೀಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಫ‌ಲಾನುಭವಿಗಳಿಂದ ಸರ್ಕಾರ ನಿಗದಿಗಿಂತ ಹಣ ಸಂಗ್ರಹಿಸುತ್ತಿಲ್ಲ. ಬದಲಾಗಿ ಸರ್ಕಾರದ ನಿರ್ದೇಶನದಂತೆ ಸರಕಾರ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚಿಗೆ ಟೆಂಡರ್‌ ಆಗಿದೆ. ಈ ಹಣ ಸರಿದೂಗಿಸಿಕೊಳ್ಳಲು ಪಲಾನುಭವಿಗಳಿಂದ ಸಂಗ್ರಹಿಸಲಾಗುತ್ತಿದೆ ಎಂದರು.

ಇದಕ್ಕೆ ಜೇವೂರ ಪ್ರತಿಕ್ರಿಯಿಸಿ ಟೆಂಡರ್‌ ಮೊತ್ತ ಹೆಚ್ಚಾಗಿದೆ ಎಂದು ಸೂರಿಲ್ಲದ ಬಡವರ ಪರಿಸ್ಥಿತಿ ದುರ್ಬಳಕೆ ಮಾಡಿಕೊಳ್ಳಲು ಬಡವರಿಂದಲೇ ಸುಲಿಗೆ ಇಳಿದಿರುವ ಕ್ರಮ ಸರಿಯಲ್ಲ. ಗುತ್ತಿಗೆದಾರರು, ಗೃಹ ನಿರ್ಮಾಣ ಮಾಲೀಕರು, ಉದ್ಯಮಿಗಳ ಜೊತೆ ಶಾಮೀಲಾಗಿ, ಉದ್ಯಮಿದಾರರ ಲಾಬಿ ಹಾಗೂ ಜನಪ್ರತಿನಿಧಿಗಳ ಕಮಿಷನ್‌ ದಂಧೆ ನಡೆಸಲಾಗುತ್ತಿದೆ. ಸರಕಾರಿ ಜಮಿನುಗಳಲ್ಲಿ ನಿವೇಶನ ತಯಾರಿಸಿ ಸೂರಿಲ್ಲದ ಎಲ್ಲ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಲಭ್ಯ ಇರುವ ಸರಕಾರಿ ಜಮೀನಿನ ರಾಜ್ಯ ಸರಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

Advertisement

ಈ ಮೊದಲು ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕಂದಾಯ ಹಾಗೂ ವಸತಿ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಭೂತನಾಳ ಹತ್ತಿರ ಐಆರ್‌ಬಿ ಬಳಿ 30 ಎಕರೆ ಜಮಿನು ನಿವೇಶನಕ್ಕಾಗಿ ಮಂಜೂರಾಗಿದೆ. ಸದರಿ ಸ್ಥಳದಲ್ಲಿ ಜಿ ಪ್ಲಸ್‌ ಮನೆ ನಿರ್ಮಿಸಲು ಮುಂದಾಗಿರುವ ಸ್ಥಳೀಯ ಶಾಸಕರ ಯೋಜನೆ ಹಿಂದುಳಿದ ವಿಜಯಪುರ ನಗರದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಪೀರಾ ಜಮಾದಾರ ಮಾತನಾಡಿದರು. ಜ್ಯೋತಿ ರೋಣಿಹಾಳ, ಸಂಗಿತಾ ದೊಡಮನಿ ಶಿವಗಂಗಾ ಕಟ್ಟಿಮನಿ, ಜಯಶ್ರೀ ಸುಧಾಕರ, ಪ್ರೇಮಾ ಗಸ್ತಿ, ಕೌಸರ್‌ ಶೇಖ್‌, ಶಬಾನಾ ಶೇಖ, ರೇಣುಕಾ ಸಾಳುಂಕೆ, ಶಕೆರಾ ಲೋಣಿ, ಹಣಮಂತ ಕಂಟಿ, ರಮೇಶ್‌ ಕದಂ, ನಜೀರ್‌ ಪಟೇಲ್, ಎಂ.ಎಸ್‌. ಟಿಕಾನದಾರ, ಮಮ್ತಾಜ್‌ ಮುಲ್ಲಾ, ಸೈನಾಜ್‌ ಇನಾಮದಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next