Advertisement

3 ಬಾರಿ ಸೋತಾಗ ಯತ್ನಾಳ ಶಕ್ತಿ ಎಲ್ಲಿ ಹೋಗಿತ್ತು?: ಪಟ್ಟಣಶೆಟ್ಟಿ

02:40 PM Oct 16, 2019 | Team Udayavani |

ವಿಜಯಪುರ: ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರು ಬಾರಿ ಸೋತಿದ್ದ ಶಾಸಕ ಬಸನಗೌಡ ಪಾಟೀಲ ಅವರ ಶಕ್ತಿ ಆಗೆಲ್ಲಿ ಹೋಗಿತ್ತು. ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ನಾನೇ ನಾಯಕ ಎಂದು ಜಾಕೆಟ್‌ ಹಾಕಿಕೊಂಡು ಪ್ರಚಾರಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ. ಸಂತ್ರಸ್ತರ ಪರ ತಮ್ಮ ಹೇಳಿಕೆಯಿಂದಲೇ ಕೇಂದ್ರ ರಾಜ್ಯದ ನೆರವಿಗೆ ಅನುದಾನ ನೀಡಿದೆ ಎನ್ನುವ ಯತ್ನಾಳ ಅವರ ಶಕ್ತಿ ಸೋತಾಗ ಎಲ್ಲಿ ಹೋಗಿತ್ತು ಎಂದು ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಪ್ರಶ್ನಿಸಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡನಾಗಿ ಪಕ್ಷದ ಶಾಸಕರ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಹಾಗಂತ ಯತ್ನಾಳ ಅವರ ವಿರುದ್ಧ ಮಾತನಾಡುವ ಅಗತ್ಯವಿಲ್ಲ. ಆದರೆ ನಿರಂತರ ಸುಳ್ಳುಗಳ ಭಾಷಣ ಮಾಡುವ ಅವರ ವಿರುದ್ಧ ಪಕ್ಷದ ಮುಖಂಡನಾಗಿ ಧ್ವನಿ ಎತ್ತಲೇ ಬೇಕಿದೆ. ತಮ್ಮ ಹೇಳಿಕೆಯಿಂದ ಕೇಂದ್ರ ಸರ್ಕಾರ ರಾಜ್ಯದ ಸಂತ್ರಸ್ತರಿಗೆ ನೆರವಿಗಾಗಿ ಅನುದಾನ ಬಿಡುಗಡೆ ಮಾಡಿದೆ ಎಂಬುದು ಬಾಲಿಶತನದಿಂದ ಕೂಡಿದೆ ಎಂದರು.

ಹಿಂದೆಲ್ಲ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಆರೆಸ್ಸೆಸ್‌, ಪ್ರಮೋದ ಮುತಾಲಿಕ್‌ ವಿರುದ್ಧ ಮಾತನಾಡಿದ್ದ ಯತ್ನಾಳ, ಯಡಿಯೂರಪ್ಪ ಹಠಾವೋ, ಬಿಜೆಪಿ ಬಚಾವೋ ಅಭಿಯಾನ ಮಾಡಿದ್ದನ್ನು ಇಷ್ಟು ಬೇಗ ಮರೆತಿದ್ದಾರೆ. ಯಡಿಯೂರಪ್ಪ ಅವರನ್ನು ಟೀಕಿಸಿ ಬಿಜೆಪಿಯಿಂದ ಉಚ್ಛಾಟಿತರಾಗಿ ಜೆಡಿಎಸ್‌ ಸೇರಿದ್ದರು. ಆಗೆಲ್ಲ ತಮ್ಮನ್ನು ತಾವು ಜಾತ್ಯತೀಯ ನಾಯಕ ಎಂದು ಬಣ್ಣಿಸಿಕೊಂಡಿದ್ದ ಯತ್ನಾಳ, ಎಚ್‌.ಡಿ. ಕುಮಾರಸ್ವಾಮಿ ಹಾಗೂ ನೀನು ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಸ್ವಯಂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೇ ಹೇಳಿದ್ದರು ಎಂದು ಹೊಗಳಿಕೊಂಡಿದ್ದರು. ಈಗ ಮತ್ತೆ ಸಿಎಂ ಯಡಿಯೂರಪ್ಪ ಅವರನ್ನು ಹೊಗಳಲು ಮುಂದಾಗಿದ್ದಾರೆ. ಹೀಗಾಗಿ ಸಮಯ ಸಾಧಕ ರಾಜಕೀಯ ವ್ಯಕ್ತಿಯಾಗಿರುವ ಯತ್ನಾಳ, ಕ್ವಾಯಿನ್‌ ಬಾಕ್ಸ್‌ ಇದ್ದಂತೆ ಎಂದರು.

ಸುಳ್ಳನ್ನೇ ತಮ್ಮ ರಾಜಕೀಯ ದಾಳ ಮಾಡಿಕೊಂಡಿರುವ ಯತ್ನಾಳ ಮೂರು ತಿಂಗಳಿಗೊಮ್ಮೆ ಪಕ್ಷ ಹಾಗೂ ನಾಯಕತ್ವದ ನಿಷ್ಠೆ ಬದಲಿಸುತ್ತಾರೆ. ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಎಲ್ಲೆಲ್ಲೆ ಸುತ್ತಿ, ಯಾರ್ಯಾರ ಮನೆ ಬಾಗಲಿಗೆ ಅಲೆದು, ಯಾರ್ಯಾರ ಕಾಲಿಗೆ ಬಿದ್ದಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂತ್ರಸ್ತರ ಕುರಿತು ಏಕಾಏಕಿ ಕಣ್ಣೀರು ಸುರಿಸುತ್ತಿರುವ ಯತ್ನಾಳ, ಸಂತ್ರಸ್ತರಿಗಾಗಿ ತಾವು ಮಾಡಿದ ಸೇವೆಯಾದರೂ ಏನು? ತಾವು ಅಧ್ಯಕ್ಷರಾಗಿರುವ ಸಂಸ್ಥೆಗಳಿಂದ ಎಷ್ಟು ನೆರವು ನೀಡಿದ್ದಾರೆ. ಕೂಡಿದ ಮಂದಿಯಲ್ಲಿ ಆವೇಶಭರಿತವಾಗಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡ ಮಾತ್ರಕ್ಕೆ ಯಾರೂ ನಾಯಕರಾಗಲು ಸಾಧ್ಯವಿಲ್ಲ ಎಂದರು.

ಸಂತ್ರಸ್ತರ ಕುರಿತು ಮೊಸಳೆ ಕಣ್ಣೀರು ಸುರಿಸುವ ಬದಲು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿ ಜನರು ಶಾಪ ಹಾಕುವ ಮಟ್ಟ ತಲುಪಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಜಿಲ್ಲಾಡಳಿತ ಸಮಸ್ಯೆಗಳ ಕುರಿತು ಸ್ಪಂದಿಸುತ್ತಿಲ್ಲ. ನಗರ ಶಾಸಕರಾಗಿ ಮೊದಲು ಈ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಲಿ. ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಬೀದಿಗೆ ಇಳಿದು ಹೋರಾಟಕ್ಕೆ ಅಣಿಯಾಗಬೇಕಾದೀತು ಎಂದು ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next