ವಿಜಯಪುರ : ಸಂಜೆಯಾಗುತ್ತಿದ್ದ ಕಾರಣ ಆಗಷ್ಟೇ ಸಾತ್ವಿಕಗೆ ಊಟ ಮಾಡಿಸಿದ್ದೆ. ಏಕಾಏಕಿ ಮಗು ಕಾಣೆಯಾಗಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ನನಗಿರುವುದು ಅವನೊಬ್ಬನೇ ಮಗ, ದಯವಿಟ್ಟು ನನ್ನ ಕರುಳ ಕುಡಿ ಉಳಿಸಿಕೊಡಿ ಎಂದು ಸಾತ್ವಿಕನ ತಾಯಿ ಅಂಗಲಾಚುತ್ತಿದ್ದಾರೆ.
ಕೊಳವೆ ಬಾವಿಯಲ್ಲಿ ಬಿದ್ದಿರುವ ತಮ್ಮ ಮಗ ಸುರಕ್ಷಿತವಾಗಿ ಮರಳಲಿ ಎಂದು ಗೋಗರೆಯುತ್ತಿರುವ ಸಾತ್ವಿಕನ ತಾಯಿ ಪೂಜಾ ಮುಜಗೊಂಡ, ನನಗಿರುವುದು ಒಬ್ಬನೇ ಮಗ. ಸಾವಿನ ದವಡೆಯಿಂದ ಪಾರಾಗಿ ಬರಲಿ. ಕಾರ್ಯಾಚರಣೆ ನಡೆಸಿರುವ ತಂಡ ನನ್ನ ಮಗನನ್ನು ಸುರಕ್ಷಿತವಾಗಿ ಹೊರತೆಗೆದು ನನ್ನ ಮಡಿಲಿಗೆ ಹಾಕಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಈ ಮಧ್ಯೆ ಬಾಲಕನ ತಂದೆ ಸತೀಶ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತನ್ನ ಮಗ ಸಾತ್ವಿಕ ಕೊಳವೆ ಬಾವಿಗೆ ಬಿದ್ದಿರುವುದನ್ನು ಆತನ ಕಾಲಿಗೆ ಕಟ್ಟಿರುವ ಗೆಜ್ಜೆ ಸದ್ದಿನಿಂದ ಪತ್ತೆ ಮಾಡಿದೆವು ಎಂದಿದ್ದಾರೆ.
ನನ್ನ ಕಂದ ಮನೆಯಲ್ಲಿ ಪುಟ ಪುಟನೆಂದು ಓಡಾಡುವಾಗ ಗೆಜ್ಜೆ ಇರಲೆಂದು ಕಾಲಿಗೆ ಬೆಳ್ಳಿಯ ಗೆಜ್ಜೆ ಹಾಕಿದ್ದೆವು. ನಿನ್ನೆಯಷ್ಟೇ ಕೊರಸಿದ್ದ ಎರಡು ಕೊಳವೆ ಬಾವಿಯಲ್ಲಿ ನೀರು ಕಾಣಿಸಿಕೊಂಡಿದ್ದ ಒಂದು ಕೊಳವೆ ಬಾವಿಗೆ ಪಂಪ್ ಜೋಡಿಸುವ ಕೆಲಸದಲ್ಲಿ ತೊಡಗಿದ್ದೆವು. ಇದ್ದಕ್ಕಿದ್ದಂತೆ ಮಗ ಸಾತ್ವಿಕ ಕಾಣೆಯಾದ. ಹೊಲದಲ್ಲಿ ಹುಡುಕುತ್ತಾ ಹೋದಾಗ ಮತ್ತೊಂದು ಕೊಳವೆ ಬಾವಿಯಿಂದ ಗೆಜ್ಜೆ ಸದ್ದು ಕೇಳಿಸಿತು. ಕೂಡಲೇ ಅಲ್ಲಿಗೆ ಧಾವಿಸಿ, ನೋಡಿದಾಗ ನನ್ನ ಮಗ ಸಾತ್ವಿಕ ಕೊಳವೆ ಬಾವಿಗೆ ಬಿದ್ದು ನರಳುತ್ತಿದ್ದ ಎಂದು ಸಾತ್ವಿಕನ ತಂದೆ ಸತೀಶ ಕಣ್ಣೀರು ಹಾಕುತ್ತಿದ್ದಾರೆ.
ಮಗನ ರಕ್ಷಣೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಹೇಗಾದರೂ ಮಾಡಿ ನನ್ನ ಮಗನನ್ನು ಸುರಕ್ಷಿತವಾಗಿ ನಮ್ಮ ಉಡಿಗೆ ಹಾಕಲಿ ಎಂದು ಕೈಮುಗಿಯುತ್ತಿದ್ದಾರೆ.
ಈ ಮಧ್ಯೆ ಜಿಲ್ಲಾಡಳಿತ ಸಾತ್ವಿಕನನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ರಕ್ಷಿಸಿ ಹೊರ ತರಲು ನಡೆಸಿರುವ ಕಾರ್ಯಾಚರಣೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಸಾತ್ವಿಕ ಸಂಬಂಧಿ ಸಂಗಮೇಶ, ಕೊಳವೆ ಬಾವಿಯ 16 ಅಡಿ ಆಳದಲ್ಲಿ ಮಗುವಿನ ಕಾಲು ಅಲುಗಾಡುತ್ತಿದೆ. ಅಧಿಕಾರಿಗಳ ಪ್ರಾಮಾಣಿಕ ಕಾರ್ಯಾಚರಣೆಯಿಂದ ನಮ್ಮ ಕಂದ ಸುರಕ್ಷಿತವಾಗಿ ಹೊರ ಬಂದು ಮರಳಿ ಹೆತ್ತ ಒಡಲು ಸೇರಿದರೆ ಸಾಕು ಎಂದು ಮನವಿ ಮಾಡಿದ್ದಾರೆ.