Advertisement

ನಷ್ಟ ಅನುಭವಿಸಿದ ಪುಷ್ಪ ಬೆಳೆಗಾರರಿಗೆ ಪರಿಹಾರ

05:05 PM May 14, 2020 | Naveen |

ವಿಜಯಪುರ: ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಅಲ್ಪಾವಧಿಯ ವಿವಿಧ ಪುಷ್ಟ ಬೆಳೆ ಬೆಳೆದು ನಷ್ಟ ಅನುಭವಿಸಿದ ಪುಷ್ಟ ಬೆಳೆಗಾರರಿಗೆ ರಾಜ್ಯ ಸರ್ಕಾರದ ನಿಯಮದಂತೆ ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಆದರೆ ನಷ್ಟ ಅನುಭವಿಸಿದ ಅರ್ಹ ಪುಷ್ಪ ಬೆಳೆಗಾರರನ್ನು ಗುರುತಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೂವಿನ ಬೆಳೆಗಾರರು ಮಾರುಕಟ್ಟೆ ಸಿಗದೇ ನಷ್ಟ ಅನುಭವಿಸಿದ್ದಾರೆ. ಚಂಡು ಹೂ, ಸೇವಂತಿಗೆ, ಆಸ್ಟರ್‌, ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್‌ ಆಫ್‌ ಪ್ಯಾರಡೈಸ್‌ ಸೇರಿದಂತೆ ವಿವಿಧ ಹೂ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಷ್ಟ ಅನುಭವಿಸಿದ ಪುಷ್ಟ ಬೆಳಗಾರರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ.ಗಳಂತೆ ಪರಿಹಾರ ಘೋಷಿಸಿದೆ. ಹೀಗಾಗಿ ಪುಷ್ಟ ಕೃಷಿ ಮಾಡಿ ನಷ್ಟ ಅನುಭವಿಸಿದ ಅರ್ಹ ಫಲಾನುಭವಿಗಳಿಗೆ ಪರಿಹಾರ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕೇಂದ್ರ-ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಘೋಷಿಸುವ ಮುನ್ನ ಮಾ.13ರಿಂದ ಜಿಲ್ಲಾದ್ಯಂತ ಲಾಕ್‌ಡೌನ್‌ ಕೊರೋನಾ ಭಯದ ಹಿನ್ನೆಲೆಯಲ್ಲಿ ಪರಿಣಾಮಕಾರಿ ಜಾರಿಗೊಳಿಸಲಾಗಿತ್ತು. ಕಾರಣ ಮಾ.13 ರಿಂದ ಮೇ 8 ಅಥವಾ 17ರ ಅವಧಿಯನ್ನು ಪರಿಗಣಿಸಿ ನಷ್ಟ ಅನುಭವಿಸಿದ ರೈತರ ಪಟ್ಟಿ ಸಿದ್ಧಪಡಿಸಿ, ಅರ್ಹರಿಗೆ ಪರಿಹಾರ ದೊರಕುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಹೂ ಬೆಳೆದು ನಷ್ಟ ಅನುಭವಿಸಿದ ರೈತರ ಸಮಸ್ಯೆ ಕುಂದುಕೊರತೆ ಅರ್ಜಿ ವಿಲೇವಾರಿ, ಸೂಕ್ತ ಜಾಗೃತಿ, ಅಧಿಕೃತ ಬೆಳೆ ಸಮೀಕ್ಷೆ ಆಧಾರದ ಮೇಲೆ ಪಟ್ಟಿ ತಯಾರಿಸಬೇಕು. ರೈತರ ಜಮೀನು ಮತ್ತು ಅವರ ದಾಖಲೆಗಳ ಸಮಗ್ರ ಪರಿಶೀಲನೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಜಿಪಂ ಸಿಇಒ ಗೋವಿಂದರೆಡ್ಡಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಮದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪುಷ್ಪ ಬೆಳೆಗಾರರ ಜಮೀನಿನಲ್ಲಿರುವ ವಿವಿಧ ಬೆಳೆ ಹಾನಿಯಾಗಿ ನಷ್ಟದ ಕುರಿತು ನೈಜ ಸಮೀಕ್ಷೆ ನಡೆಸಬೇಕು. ಲಭ್ಯ ಪ್ರಾಥಮಿಕ ವರದಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 249 ಹೂವು ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಪುಷ್ಟ ಬೆಳೆಗಾರ ರೈತರ ಪಟ್ಟಿ ತಯಾರಿಸಿ, ಆಯಾ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಪಂ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಪ್ರಕಟಿತ ಈ ಪಟ್ಟಿಯಿಂದ ನಷ್ಟಕ್ಕೀಡಾದ ಪುಷ್ಟ ಬೆಳಗಾರರ ಹೆಸರು ಸಮೀಕ್ಷೆ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದಲ್ಲಿ ರೈತರು ಆಯಾ ತಾಲೂಕು ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ಬಳಿಕ ಅಧಿಕಾರಿಗಳು ಕೂಡ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
ವೈ.ಎಸ್‌. ಪಾಟೀಲ,
ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next