Advertisement
ಕುಂಭದ್ರೋಣ ಮಳೆ ಸುರಿಯುತ್ತಿರುವ ಮಹಾರಾಷ್ಟ್ರ ರಾಜ್ಯದಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಭಭರ್ತಿಯಾಗಿರುವ ಅಲ್ಲಿನ ಜಲಾಶಯಗಳಿಂದ ಅಧಿಕ ಪ್ರಮಾಣ ನೀರು ಬಿಡಲಾಗುತ್ತಿದೆ. ಪರಿಣಾಮ ಕೃಷ್ಣಾ ಹಾಗೂ ಭೀಮಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಅಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಕೃಷ್ಣಾ ನದಿಯ ಉಪ ನದಿಗಳಾದ ಘಟಪ್ರಭಾ, ಮಲಪ್ರಭಾ ನದಿ ಪಾತ್ರಗಳಲ್ಲಿ ಅದರಲ್ಲೂ ಬೆಳಗಾವಿ ಜಿಲ್ಲೆಯ ಸುತ್ತಲೂ ಸುರಿಯುತ್ತಿರುವ ಮಳೆ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಳ್ಳುವಂತೆ ಮಾಡಿದೆ.
Related Articles
Advertisement
ಆಲಮಟ್ಟಿಯ ಶಾಸ್ತಿ ಜಲಾಶಯದ ಹೊರ ಹರಿವಿನ ನೀರಿನ ಒತ್ತಡದಿಂದಾಗಿ ಜಲಾಶಯ ಭಾಗದಲ್ಲಿರುವ ಉದ್ಯಾನವನಗಳು ಹಾಗೂ ಸಂಗೀತ ನೃತ್ಯ ಕಾರಂಜಿಗೂ ನೀರು ನುಗ್ಗಿದ ಕಾರಣ ಹಾನಿಯಾಗಿದೆ. ಇದರಿಂದಾಗಿ ಜಲಾಶಯ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.
ಆದರೆ ಭೀಮಾ ನದಿಯಲ್ಲಿ ಪ್ರವಾಹ ತಗ್ಗತೊಡಗಿದೆ. ಶುಕ್ರವಾರ ಜಿಲ್ಲೆಯ ಗಡಿಯಲ್ಲಿರು ಧೂಳಖೇಡ ಬಳಿ ನದಿ ಹರಿವಿನ ಜಲಮಾಪನ ಕೇಂದ್ರದಲ್ಲಿ ಪ್ರವಾಹ ತಗ್ಗಿರುವ ಸೂಚನೆ ಸಿಕ್ಕಿದೆ. ಧೂಳಖೇಡ ಬಳಿ ಗುರುವಾರ ಸಂಜೆಯ ವರೆಗೆ 14 ಮೀಟರ್ ನಷ್ಟಿದ್ದ ನೀರಿನ ಹರಿವಿನ ಪ್ರಮಾಣ, ಶುಕ್ರವಾರ ಮಧ್ಯಾಹ್ನದ ವೇಳೆಗೆ 13 ಮೀಟರ್‌ಗೆ ಳಿದಿದ್ದು, ಪ್ರವಾಹ ತಗ್ಗುವ ಆಶಾಭಾವ ಇದೆ. ಇದರ ಹೊರತಾಗಿಯೂ ಭೀಮಾ ನದಿ ಇಂಡಿ ತಾಲೂಕಿನ ಖೆಡಗಿ ಗ್ರಾಮದ ವಿರಕ್ತ ಮಠಕ್ಕೆ ನುಗ್ಗಿದ್ದು, ಮಠದ ಆವರಣದಲ್ಲಿರುವ ದೇವಸ್ಥಾನ ಜಲಾವ್ರತವಾಗಿದೆ.
ಜಿಲ್ಲೆಯ ಕೃಷ್ಣಾ ನದಿ ಪ್ರವಾಹ ಪ್ರಸಕ್ತ ವರ್ಷ ಪ್ರಥಮ ಬಾರಿಗೆ ಜನವಸತಿಗೆ ನುಗ್ಗುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಪ್ರವಾಹ ಬಾಧಿತ ಗ್ರಾಮಗಳಿಗೆ ಸಮನ್ವಯ ಅಧಿಕಾರಿಗಳನ್ನು ನೇಮಿಸಿ, ಅವರ ಅಧೀನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವನ್ನು ರಚಿಸಿದೆ.
ಗುರುವಾರ ಸಂಜೆಯೇ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್ ಮೊಹಸೀನ್ ಕೃಷ್ಣಾ ನದಿ ಪಾತ್ರದ ಹಳ್ಳಿಗಳಿಗೆ ಭೇಡಿ ನೀಡಿ ಪರಿಶೀಲಿಸಿ ನಗರದಲ್ಲಿ ಬೀಡು ಬಿಟ್ಟಿದ್ದರು. ಶುಕ್ರವಾರ ಭೀಮಾ ನದಿ ಪಾತ್ರದ ಪ್ರವಾಹ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತೆ ಜಿಲ್ಲೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.