ವಿಜಯಪುರ: ಬಸವನಾಡಿನ ಜೀವನದಿಗಳು ಎನಿಸಿರುವ ಕೃಷ್ಣಾ ಹಾಗೂ ಭೀಮಾ ನದಿಗಳು ಕಳೆದ ಹತ್ತಾರು ದಿನಗಳಿಂದ ಮಾಡಿರುವ ಪ್ರವಾಹ ಬಾಧೆಗೆ ನಲುಗಿರುವ ತೀರ ಪ್ರದೇಶದ ಸಂತ್ರಸ್ತರು, ಇದೀಗ ಕಳ್ಳರ ಕೈ ಚಳಕಕ್ಕೆ ಕಂಗೆಟ್ಟಿದ್ದಾರೆ. ಪ್ರವಾಹದಿಂದಾಗಿ ಉಟ್ಟ ಬಟ್ಟೆ ಮೇಲೆ ಪುನರ್ವಸತಿ ಕೇಂದ್ರಕ್ಕೆ ಬಂದಿರುವ ಮನೆಗಳ್ಳತನಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ಸಂತ್ರಸ್ತರನ್ನು ಕಂಗೆಡಿಸಿದೆ.
Advertisement
ತಮ್ಮ ಕೈಚಳಕ ತೋರುವ ಕಳ್ಳಲು ತಾವೂ ಕೂಡ ಸಂತ್ರಸ್ತರು ಎಂಬಂತೆ ಪುನರ್ವಸತಿ ಕೇಂದ್ರದಲ್ಲೇ ಅಮಾಯಕಾರಂತೆ ನಟಿಸುತ್ತಿದ್ದಾರೆ ಎಂಬ ಸಂಗತಿ ಇನ್ನಷ್ಟು ಭೀತಿ ಹುಟ್ಟಿಸಿದೆ. ಇಂಥ ಕಳ್ಳರ ಕುರಿತು ಮಾಹಿತಿ ಪಡೆಯುತ್ತಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಮಾಹಿತಿ ಹೊರ ಬಿದ್ದಿದೆ.
Related Articles
Advertisement
ಇದರಲ್ಲಿ ಮುದ್ದೇಬಿಹಾಳ ತಾಲೂಕಿನ ನಾಗರಾಳ ಗ್ರಾಮದ 65 ಕುಟುಂಬಗಳ 149 ಜನರನ್ನು ಮುದ್ದೇಬಿಹಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಸ್ಥಾಪಿಸಲಾದ ಪುನರ್ವಸತಿ ಕೇಂದ್ರದಲ್ಲೇ ಶಂಕಿತ ಕಳ್ಳರು ಇರುವ ಮಾಹಿತಿ ಇದೆ. ಸಂತ್ರಸ್ತರೊಂದಿಗೆ ಇರುವ ಕೆಲವರು ಹಗಲು ವೇಳೆಯಲ್ಲಿ ಅವರ ಸಂಕಷ್ಟದ ಮಾತುಗಳ ಸಂದರ್ಭದಲ್ಲಿ ಎಲ್ಲೆಲ್ಲಿ ಯಾವ್ಯಾವ ವಸ್ತುಗಳನ್ನು ಬಿಟ್ಟು ಬರಲಾಗಿದೆ ಎಂದು ಮಾತನಾಡಿಕೊಳ್ಳುವಾಗ ಮಾಹಿತಿ ಸಂಗ್ರಹಿಸಿ, ಮನೆಗಳ್ಳತನಕ್ಕೆ ಮುಂದಾಗಿದ್ದಾರೆ. ಕಳ್ಳತನ ಎಸಗಿ ಯಾರಿಗೂ ಸಂಶಯ ಬಾರದಿರಲಿ ಎಂದು ಮತ್ತೆ ಪುನರ್ವಸತಿ ಕೇಂದ್ರಕ್ಕೆ ಬಂದು ಸಂತ್ರಸ್ತರೊಂದಿಗೆ ರಾತ್ರಿ ವಾಸ್ತವ್ಯ ಹೂಡುತ್ತಿದ್ದಾರೆ ಎನ್ನಲಾಗಿದೆ. ಈ ವಿಷಯ ಸಂತ್ರಸ್ತರನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ.
ಇದರ ಮಧ್ಯೆ ನಾಗರಾಳ ಗ್ರಾಮದ ಕೆಲವು ಮನೆಗಳ ಬೀಗ ಮುರಿದು ಕಳ್ಳತನ ಎಸಗಿರುವುದು ಸಂತ್ರಸ್ತರ ಗಮನಕ್ಕೆ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡು ಕೂಡಲೇ ಕಳ್ಳರ ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಮುದ್ದೇಬಿಹಾಳ ನಗರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ ರವಿವಾರ ರಾತ್ರಿ ಜೀಪಿನಿಲ್ಲಿ ಬಂದ ಕೆಲವು ಪೊಲೀಸರು ಸಂತ್ರಸ್ತರ ಇಡಿ ಕೇಂದ್ರವನ್ನು ಜಾಲಾಡಿದ್ದಾರೆ. ಇದರಲ್ಲಿ ಸಂತ್ರಸ್ತರ ಮಧ್ಯೆ ಕುಳಿತು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಮಧ್ಯೆ ಪ್ರವಾಹ ಬಾಧಿತ ಪ್ರತಿ ಹಳ್ಳಿಗಳಲ್ಲಿ ಪೊಲೀಸರ ನಿರಂತರ ಕಾವಲು ಇರಿಸಿದೆ. ಇಷ್ಟಿದ್ದರೂ ಕಳ್ಳರು ಪುನರ್ವಸತಿ ಕೇಂದ್ರದಲ್ಲಿರುವ ಸಂತ್ರಸ್ತರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ ಎಂಬ ಅನುಮಾನಗಳು ದೃಢಪಡುತ್ತಿದ್ದಂತೆ ಪ್ರವಾಹ ಬಾಧಿತರನ್ನು ಇನ್ನಷ್ಟು ಕಂಗೆಡಿಸಿದೆ.
ಹೆಸರು ಹೇಳಲು ಇಚ್ಛಿಸದ ಪ್ರತ್ಯಕ್ಷದರ್ಶಿಗಳ ಪ್ರಕಾರ ಆ. 11ರಂದು ರಾತ್ರಿ ನಾಲ್ಕಾರು ಜನ ಪೊಲೀಸರು ಜೀಪಿನಲ್ಲಿ ಮುದ್ದೇಬಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಬಂದು ತೀವ್ರ ಶೋಧ ನಡೆಸಿದರು. ಬಳಿಕ ಪ್ರವಾಹ ಬಾಧಿತ ನಾಗರಾಳ ಗ್ರಾಮದ ಕೆಲವು ಮನೆಗಳಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆದು, ತಮ್ಮ ಪೊಲೀಸ್ ಜೀಪಿನಲ್ಲಿ ಕರೆದೊಯ್ದಿದರು. ಇದರ ಹೊರತಾಗಿ ಮುಂದೇನಾಯಿತು ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ವಿವರಿಸಿದ್ದಾರೆ.
ನದಿಗಳ ಪ್ರವಾಹ ಬಾಧಿತ ಎಲ್ಲ ಹಳ್ಳಿಗಳಲ್ಲಿ ನಮ್ಮ ಪೊಲೀಸರು ನಿರಂತರ ಗಸ್ತು ಕಾವಲು ನಡೆಸಿದ್ದಾರೆ. ಇದರ ಹೊರತಾಗಿ ಮುದ್ದೆಬಿಹಾಳ ತಾಲೂಕಿನ ನಾಗರಾಳ ಸೇರಿದಂತೆ ಪ್ರವಾಹ ಬಾಧಿತ ಯಾವುದೇ ಹಳ್ಳಿಯಲ್ಲಿ ಕಳ್ಳತನ ನಡೆದ ಮಾಹಿತಿ ಇಲ್ಲ. ಸ್ಥಳೀಯ ಪೊಲೀಸರು ಮುದ್ದೇಬಿಹಾಳ ಪುನರ್ವಸತಿ ಕೇಂದ್ರದಲ್ಲೇ ಇದ್ದ ಕಳ್ಳತನ ಮಾಡಿದ ಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗಲಿ ನನ್ನ ಗಮನಕ್ಕಿಲ್ಲ. ಈ ಕುರಿತು ಪರಿಶೀಲನೆ ನಡೆಸುತ್ತೇನೆ.•ಪ್ರಕಾಶ ನಿಕ್ಕಂ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ